ಪುತ್ತೂರು:(ಮಾ.27) ಮಂಗಳೂರಿನಿಂದ ಬೆಂಗಳೂರಿಗೆ ಸಂಚರಿಸುತ್ತಿದ್ದ ರೈಲಿನಿಂದ ಯುವಕನೋರ್ವ ಬಿದ್ದು, 15 ಗಂಟೆ ಬಳಿಕ ಪತ್ತೆಯಾದ ಘಟನೆ ಸವಣೂರಿನಲ್ಲಿ ನಡೆದಿದೆ.

ಇದನ್ನೂ ಓದಿ: ⭕ಪುತ್ತೂರು: ಚಲಿಸುತ್ತಿರುವಾಗಲೇ ಖಾಸಗಿ ಬಸ್‌ನ ಟಯರ್ ಸ್ಫೋಟ
ಮಾ. 25ರಂದು ರೈಲಿನಲ್ಲಿ ಕುಮಟದಿಂದ ಮಂಗಳೂರು ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತಿದ್ದ ಉದಯ ಕುಮಾರ್ ರಾತ್ರಿ 11 ಗಂಟೆ ವೇಳೆಗೆ ಸವಣೂರು ಸಮೀಪದ ಸುಣ್ಣಾಜೆ ಬಳಿ ರೈಲಿನಿಂದ ಬಿದ್ದಿದ್ದಾರೆ.
ರಾತ್ರಿ ವೇಳೆ ಯುವಕ ರೈಲಿನಿಂದ ಬೀಳುವುದನ್ನು ಸಹ ಪ್ರಯಾಣಿಕರು ಗಮನಿಸಿದ್ದು ನೆಟ್ಟಣ ತಲುಪಿದ ವೇಳೆ ರೈಲ್ವೆ ಮಾಸ್ಟರ್ ಗಮನಕ್ಕೆ ತಂದಿದ್ದರು. ಆದರೆ ಯುವಕ ಬಿದ್ದ ಜಾಗ ಯಾವುದು ಎನ್ನುವುದು ಯಾರಿಗೂ ತಿಳಿದಿರಲಿಲ್ಲ ಹೀಗಾಗಿ ಪತ್ತೆ ಕಾರ್ಯವೂ ಸಾಧ್ಯವಾಗಿರಲಿಲ್ಲ.
ಮಾ.26ರಂದು ಸುಣ್ಣಾಜೆ ಬಳಿ ಕೊಳವೆಬಾವಿಯ ಪಂಪ್ ಎಳೆಯಲು ಹೋಗಿದ್ದ ದಿನೇಶ್ ಆಚಾರ್ಯ, ಸಂತೋಷ್ ಅಲೆಕ್ಕಾಡಿ ಪ್ರತಾಪ್ ಪರಣೆ ಮತ್ತಿತರರಿಗೆ ಮೋರಿ ಸಮೀಪ ವ್ಯಕ್ತಿ ನರಳುವುದು ಕೇಳಿಸಿತು.



ತತ್‌ಕ್ಷಣ ಈ ವಿಚಾರವನ್ನು ಸಾಮಾಜಿಕ ಕಾರ್ಯಕರ್ತ ಸಚಿನ್ ಸವಣೂರು ಅವರ ಗಮನಕ್ಕೆ ತಂದರು. ಅವರು ಆಗಮಿಸಿ ಯುವಕನನ್ನು ಪತ್ತೆಹಚ್ಚಿ ಆರೈಕೆ ಮಾಡಿ ವಿಚಾರಿಸಿದಾಗ, ಆತ ಕುಮಟದಿಂದ ಬೆಂಗಳೂರಿಗೆ ತೆರಳುತ್ತಿದ್ದ ಬಗ್ಗೆ ತಿಳಿಯಿತು.

ಬಳಿಕ ಪೊಲೀಸರ ಸೂಚನೆಯಂತೆ ಯುವಕನನ್ನು ಆಂಬುಲೆನ್ಸ್ ಮೂಲಕ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವಕನ ಮುಖ ಹಾಗೂ ಕಾಲಿಗೆ ತೀವ್ರ ತರಹದ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
