Fri. Apr 4th, 2025

Belthangady: ಬೆಳ್ತಂಗಡಿ ಶಾಂತಿಶ್ರೀ ಜೈನ ಮಹಿಳಾ ಸಮಾಜ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ

ಬೆಳ್ತಂಗಡಿ:(ಮಾ.29 ) ಇಂದಿನ ಆಧುನಿಕ ಸಮಾಜದಲ್ಲಿ ಮಹಿಳೆಯೊಬ್ಬಳು ತನ್ನನ್ನು ತಾನು ತೊಡಗಿಸಿಕೊಂಡರೆ ಯಾವುದೇ ಕಾರ್ಯವನ್ನು ಮಾಡಲು ಸಾಧ್ಯ. ಅಂತಹ ಕಾರ್ಯವನ್ನು ಮಾಡುತ್ತಿರುವ ಬೆಳ್ತಂಗಡಿಯ ಶಾಂತಿಶ್ರೀ ಜೈನ ಮಹಿಳಾ ಸಮಾಜವು ಇಂದು ತಾಲೂಕಿನಲ್ಲಿ ಗುರುತಿಸುವಂತಾಗಿದೆ. ನಾವೆಲ್ಲರೂ ಆದರ್ಶ ಸಾಧಕ ಮಹಿಳೆರಾದಾಗ ಮಾತ್ರ ಸಮಾಜ ನಮ್ಮನ್ನು ಗುರುತಿಸಿ ಗೌರವಿಸುತ್ತದೆ.

ಇದನ್ನೂ ಓದಿ: ⭕ಸುಳ್ಯ: ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಗೂಡ್ಸ್ ಲಾರಿ!!

ಅಂತಹ ಗುರುತರವಾದ ಕಾರ್ಯಕ್ಕೆ ನಾವೆಲ್ಲ ಜೊತೆಯಾಗಿ ಕಾರ್ಯವನ್ನು ಮಾಡಬೇಕು ಎಂದು ವಿಶ್ವ ಮಹಿಳಾ ದಿನಾಚರಣೆಯನ್ನು ದೀಪ ಪ್ರಜ್ವಲನದೊಂದಿಗೆ ಉದ್ಘಾಟಿಸಿದ ಬೆಳ್ತಂಗಡಿ ತಾಲೂಕಿನ ಪ್ರಸಿದ್ಧ ಅಭಿಯಂತರರಾಗಿದ್ದ ಚಂದ್ರರಾಜ್ ಜೈನ್ ಇವರ ಧರ್ಮಪತ್ನಿ ಶ್ರೀಮತಿ ಸುಜಯ ಸಿ ಜೈನ್ ರವರು ಉದ್ಘಾಟಿಸಿ ಮಾತನಾಡಿದರು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಬೆಳ್ತಂಗಡಿ ತಾಲೂಕಿನ ಪ್ರಸಿದ್ಧ ನ್ಯಾಯವಾದಿ ಶ್ರೀಮತಿ ಸ್ವರ್ಣಲತಾ ಜೈನ್ ರವರು “ಇಂದಿನ ಸಮಾಜದಲ್ಲಿ ಮಹಿಳೆಯರ ಮುಂದಿರುವ ಸವಾಲುಗಳು, ಅದನ್ನು ನಿಭಾಯಿಸಬೇಕಾದ ತಂತ್ರಗಾರಿಕೆ, ಮಹಿಳೆಯರಿಗೆ ಪರವಾಗಿರುವ ಕಾನೂನುಗಳು, ಪೋಕ್ಸೋ ಕಾಯ್ದೆಯ ಮಹತ್ವ ಇತ್ಯಾದಿ ವಿಚಾರಗಳನ್ನು ಎಳೆ ಎಳೆಯಾಗಿ ಪ್ರತಿಯೊಬ್ಬರು ತಿಳಿದುಕೊಳ್ಳಲೇಬೇಕು. ಆಗ ಮಾತ್ರ ಸುಸ್ತಿರ ಸಮಾಜವನ್ನು ಕಟ್ಟಲು ಸಾಧ್ಯ ಎಂದರು.


ಈ ಕಾರ್ಯಕ್ರಮದಲ್ಲಿ ಪೂರ್ವ ಪರಂಪರೆಯಲ್ಲಿ ಸಾಧನೆಗೈದ ಹಲವಾರು ಜೈನ ಮಹಿಳಾ ಸಾಧಕೀಯರಲ್ಲಿ ಕೆಲವರ ಸಾಧನೆಯ ತುಣುಕನ್ನು ಸಭೆಯಲ್ಲಿ ಪರಿಚಯಿಸಲಾಯಿತು. ಕಾಳು ಮೆಣಸಿನ ರಾಣಿ ಚೆನ್ನಬೈರಾ ದೇವಿ ಇವರನ್ನು ಶ್ರೀಮತಿ ಉಷಾ ಹಾಗೂ ಜೈನ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿರುವ ಜೈನ ಮಹಿಳೆ ಬಿರುದಾಂಕಿತ ಶ್ರೀಮತಿ ರಾಧಮ್ಮ ಇವರ ಬಗ್ಗೆ ಶ್ರೀಮತಿ ಸುರಕ್ಷಿತ ರವರು ಸಭೆಗೆ ಪರಿಚಯಿಸಿದರು.


ಮಹಿಳೆಯರು ಪ್ರತಿ ಕ್ಷೇತ್ರದಲ್ಲೂ ತನ್ನನ್ನು ತಾನು ತೊಡಗಿಸಿಕೊಂಡು ಸಮಾಜದಲ್ಲಿ ಗುರುತಿಸಿಕೊಳ್ಳುವಂತಾಗಬೇಕು ಎನ್ನುವ ಉದ್ದೇಶದಿಂದ ಈಗಾಗಲೇ ಶಾಂತಿಶ್ರೀ ತಂಡದಿಂದ ವಲಯ ಮಟ್ಟದ ಜಿನಭಜನ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ನಾಲ್ಕು ತಂಡಗಳನ್ನು ವಿಶೇಷ ರೀತಿಯಲ್ಲಿ ಗೌರವಿಸಲಾಯಿತು.


ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬೆಳ್ತಂಗಡಿ ಶಾಂತಿಶ್ರೀ ಜೈನ ಮಹಿಳಾ ಸಮಾಜದ ಅಧ್ಯಕ್ಷರಾಗಿರುವ ಪ್ರೊಫೆಸರ್ ತ್ರಿಶಾಲ ಜೈನ್ ಕೆ ಎಸ್ ಇವರು “ಹತ್ತನೇ ಶತಮಾನದಿಂದ 21ನೇ ಶತಮಾನದವರೆಗೆ ದೇಶದ ನಾನಾ ಭಾಗಗಳಲ್ಲಿ ಆಳ್ವಿಕೆ ಮಾಡಿರುವ ಜೈನ ರಾಣಿಯರ ಧೈರ್ಯ, ಸಾಹಸ, ಚಾಣಕ್ಯತನ, ಆಡಳಿತ ಶೈಲಿ ಮುಂತಾದ ವಿಚಾರಗಳನ್ನು ನೆನಪಿಸಿಕೊಂಡರು. ಇದೇ ಸಂದರ್ಭದಲ್ಲಿ ಇಂದು ವಿಶ್ವದಲ್ಲಿ ಮಹಿಳೆಯರ ಸ್ಥಾನಮಾನ ಹಾಗೂ ಹಲವಾರು ಕ್ಷೇತ್ರಗಳಲ್ಲಿ ಮಹಿಳೆಯರು ಸಾಧಿಸುತ್ತಿರುವ ಸಾಧನೆಗಳು ನಮಗೆಲ್ಲರಿಗೂ ಹೆಮ್ಮೆಯ ವಿಚಾರವಾಗಿದೆ. ಮಾತ್ರವಲ್ಲದೆ ಇತ್ತೀಚೆಗೆ ಬಾಹ್ಯಾಕಾಶ ಯಾನವನ್ನು ಮಾಡಿ ಯಶಸ್ವಿಯಾಗಿ ಧರೆಗೆ ಬಂದಿಳಿದ ಸುನಿತಾ ವಿಲಿಯಮ್ಸ್ ಇವರ ಅದ್ಭುತ ಪೂರ್ವ ಸಾಧನೆಗೆ ಸಂಸ್ಥೆಯ ವತಿಯಿಂದ ವಿಶೇಷ ಅಭಿನಂದನೆಯನ್ನು ಸಲ್ಲಿಸಲಾಯಿತು. ನಾವೆಲ್ಲರೂ ಜೊತೆಯಾಗಿದ್ದಾಗ ಸರ್ವ ಕಾರ್ಯವನ್ನು ಮಾಡಲು ಸಾಧ್ಯ. ಅಂತಹ ಕಾರ್ಯಕ್ಕೆ ತಾವೆಲ್ಲರೂ ನಮ್ಮ ಜೊತೆ ಕೈಗೂಡಿಸಬೇಕು ಎಂದು ಹೇಳಿದರು.


ಈ ಕಾರ್ಯಕ್ರಮವು ಶ್ರೀಮತಿ ಸ್ವಪ್ನ ಬಳಗದವರ ಪ್ರಾರ್ಥನೆಯೊಂದಿಗೆ ಆರಂಭಗೊಂಡರೆ, ಸಂಸ್ಥೆ ನಡೆದು ಬಂದ ದಾರಿಯ ಕುರಿತು ಸಂಸ್ಥೆಯ ಕಾರ್ಯದರ್ಶಿ, ಶ್ರೀಮತಿ ರಾಜಶ್ರೀ ಪ್ರಸ್ತಾಪಿಸಿದರೆ, ಶ್ರೀಮತಿ ಗುಣಮ್ಮ ಪಿ ಜೈನ್ ರವರು ಸ್ವಾಗತಿಸಿ, ಶ್ರೀಮತಿ ತ್ರಿಶಾಲ ಅತಿಕಾರಿ ವಂದಿಸಿ, ಶ್ರೀಮತಿ ಅನುಪ ಕುಮಾರಿ ಮಾರಿ ಸಂಘಟಿಸಿ, ಸಂಘದ ಸದಸ್ಯರ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಶ್ರೀಮತಿ ದವಳ ಇವರ ಕಾರ್ಯಕ್ರಮ ನಿರ್ವಹಣೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

Leave a Reply

Your email address will not be published. Required fields are marked *