ದೆಹಲಿ (ಎ.1) ಮಹಾಕುಂಭ ಮೇಳದಲ್ಲಿ ವೈರಲ್ ಆದ ಬೆಡಕಿ ಮೊನಾಲಿಸಾಳಿಗೆ ಬಾಲಿವುಡ್ ಸಿನಿಮಾ ಆಫರ್ ಮಾಡಿದ ನಿರ್ದೇಶಕ ಸನೋಜ್ ಮಿಶ್ರಾ ಇದೀಗ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಯುವತಿಯನ್ನು ಲೈಂಗಿಕವಾಗಿ ಬಳಸಿಕೊಂಡ ಪ್ರಕರಣದಡಿ ನಿರ್ದೇಶಕ ಸನೋಜ್ ಮಿಶ್ರಾ ಅರೆಸ್ಟ್ ಆಗಿದ್ದಾರೆ. ಈ ಪ್ರಕರಣದಡಿ ದೆಹಲಿ ಹೈಕೋರ್ಟ್ ಮೆಟ್ಟೇಲೇರಿದ್ದ ಸನೋಜ್ ಮಿಶ್ರಾಗೆ ಕೋರ್ಟ್ ನಿರೀಕ್ಷಣಾ ಜಾಮೀನು ನಿರಾಕರಿಸಿತ್ತು. ಇದರ ಬೆನ್ನಲ್ಲೇ ಪೊಲೀಸರು ಸನೋಜ್ ಮಿಶ್ರಾ ಅರೆಸ್ಟ್ ಮಾಡಿದ್ದಾರೆ.

ನಟಿಯಾಗಲು ಅವಕಾಶ ಕೇಳಿ ಬಂದು ಮೋಸ ಹೋಗಿದ್ದೇನೆ ಎಂದು ಯುವತಿಯೊಬ್ಬಳು ನೀಡಿದ್ದ ದೂರಿನ ಆಧಾರದಲ್ಲಿ ದೆಹಲಿ ಪೊಲೀಸರು ಸನೋಜ್ ಮಿಶ್ರಾರನ್ನು ಬಂಧಿಸಿದ್ದಾರೆ. ಈ ಮೂಲಕ ಮೊನಾಲಿಸಾ ಸಿನಿಮಾ ಕರಿಯರ್ ಕೂಡ ಅರ್ಧಕ್ಕೆ ಮೊಟಕುಗೊಳ್ಳುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ. ಇಷ್ಟೇ ಅಲ್ಲ ನಿರ್ದೇಶಕ ಸನೋಜ್ ಮಿಶ್ರಾ ವಿರುದ್ದ ಕೇಳಿಬಂದ ಆರೋಪ ಹಲವರನ್ನು ದಿಗ್ಬ್ರಮೆಗೊಳಿಸಿದೆ. ಮುಗ್ದ ಹುಡುಗಿ ಮೊನಾಲಿಸಾಗೆ ಬಣ್ಣದ ಬದುಕಿನ ಆಸೆ ತೋರಿಸಿ ಕರಿಯರ್ ಹಾಳುವ ಮಾಡುವ ಸಾಧ್ಯತೆ ಇದೆ ಎಂದು ಹಲವರು ಸೋಶಿಯಲ್ ಮೀಡಿಯಾದಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಸನೋಜ್ ಮಿಶ್ರಾ ಮೇಲಿನ ಪ್ರಕರಣವೇನು?
ಪುಟ್ಟ ಗ್ರಾಮದ ಯುವತಿಗೆ ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ಮಹಾ ನಗರಿಗೆ ಕರೆಯಿಸಿಕೊಂಡಿದ್ದ ನಿರ್ದೇಶಕ ಸನೋಜ್ ಮಿಶ್ರಾ, ಆಕೆಯ ಮೇಲೆ ಸತತ ಬಳಸಿಕೊಂಡಿದ್ದಾರೆ ಎಂದು ಆರೋಪಿದ್ದಾಳೆ. ಇಷ್ಟೇ ಅಲ್ಲ ಆಕೆಯ ವಿಡಿಯೋ, ಫೋಟೋಗಳನ್ನು ಸೆರೆ ಹಿಡಿದು ಬೆದರಿಸಿದ ಆರೋಪವಿದೆ. ನಿರ್ದೇಶಕ ಸಿನಿಮಾದಲ್ಲಿ ಚಾನ್ಸ್ ಕೊಡಿಸುವ ನೆಪ, ಆಡಿಶನ್ ನೆಪದಲ್ಲಿ ಹಲವು ಹೋಟೆಲ್‌ಗಳಲ್ಲಿ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ದೂರಿದ್ದಾಳೆ. ಇಷ್ಟೇ ಅಲ್ಲ ಇದೇ ಕಾರಣದಿಂದ ಹಲವು ಬಾರಿ ಅಬಾರ್ಶನ್ ಮಾಡಿಸಿಕೊಂಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಇದಕ್ಕೆ ಕೆಲ ದಾಖಲೆಯನ್ನು ಒದಗಿಸಿದ್ದಾಳೆ.
ದೆಹಲಿ ಹೈಕೋರ್ಟ್ ಹೇಳಿದ್ದೇನು?
ಬಂಧನ ಭೀತಿಯಿಂದ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದ ಸನೋಜ್ ಮಿಶ್ರಾಗೆ ಹಿನ್ನಡೆಯಾಗಿದೆ. ಯುವತಿಗೆ ಅವಕಾಶ ಕೊಡಿಸುವ ನೆಪದಲ್ಲಿ ಸತತ ಲೈಂಗಿಕವಾಗಿ ಬಳಸಿಕೊಂಡ ಆರೋಪ ಇದೆ. ಲಭ್ಯವಿರುವ ದಾಖಲೆ ಹಾಗೂ ಮೇಲ್ನೋಟಕ್ಕೆ ಈ ಗಂಭೀರ ಆರೋಪವನ್ನು ತಳ್ಳಿಹಾಕಲು ನಿರ್ದೇಶಕರ ಬಳಿ ಸೂಕ್ತ ಪುರಾವೆಗಳಿಲ್ಲ. ಇನ್ನು ನಿರ್ದೇಶಕರ ವಾದವನ್ನು ಒಪ್ಪಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನಿರೀಕ್ಷಣಾ ಜಾಮೀನು ನೀಡಿದರೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ದೆಹಲಿ ಹೈಕೋರ್ಟ್ ಹೇಳಿತ್ತು. ನಿರೀಕ್ಷಣಾ ಜಾಮೀನು ನಿರಾಕರಣೆಯಾದ ಬೆನ್ನಲ್ಲೇ ಸನೋಜ್ ಮಿಶ್ರಾರನ್ನು ಪೊಲೀಸರು ಬಂಧಿಸಿದ್ದಾರೆ.



ನಿರ್ದೇಶಕ ಸನೋಜ್ ಮಿಶ್ರಾ ವಾದವೇನು?
ದೆಹಲಿ ಹೈಕೋರ್ಟ್‌ನಲ್ಲಿ ಸನೋಜ್ ಮಿಶ್ರಾ ಪರ ವಕೀಲರು ವಾದ ಮಂಡಿಸಿದ್ದಾರೆ. ಯುವತಿ ಜೊತೆ ಒಪ್ಪಿಗೆಯ ಸಂಬಂಧವಿತ್ತು ಎಂದಿದ್ದಾರೆ. ಇಷ್ಟೇ ಅಲ್ಲ ಸಂಬಂಧದಲ್ಲಿ ತಪ್ಪು ಕಲ್ಪನೆಯಿಂದ ಎಫ್ಐಆರ್ ದಾಖಲಿಸಿದ್ದರು. ಯುವತಿಗೆ ಯಾವುದೇ ಮೋಸ ಮಾಡುವ ಪ್ರಯತ್ನ ಮಾಡಿಲ್ಲ. ಇಷ್ಟೇ ಅಲ್ಲ ಜಾಮೀನು ನೀಡಲು ತನ್ನ ಅಭ್ಯಂತರವಿಲ್ಲ ಎಂದು ಉಲ್ಲೇಖಿಸಿದ್ದಾಳೆ ಅನ್ನೋ ವಾದವನ್ನು ನಿರ್ದೇಶಕ ಸನೋಜ್ ಮಿಶ್ರಾ ವಕೀಲರು ಮಂಡಿಸಿದ್ದಾರೆ. ಆದರೆ ಕೋರ್ಟ್ ಈ ವಾದಕ್ಕೆ ಮನ್ನಣೆ ಹಾಕಿಲ್ಲ.

ಮೊನಾಲಿಸಾಗೆ ನಟನಾ ತರಬೇತಿ ಮೇಲೆ ಅನುಮಾನ
ಸನೋಜ್ ಮಿಶ್ರಾ ಬಂಧನ ಮಾಹಿತಿ ಹೊರಬೀಳುತ್ತಿದ್ದಂತೆ ಮಹಾಕುಂಭದ ವೈರಲ್ ಬೆಡಗಿ ಮೊನಾಲಿಸಾ ಸಿನಿಮಾ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಹಲವು ಅನುಮಾನಗಳು ವ್ಯಕ್ತವಾಗುತ್ತಿದೆ. ಸನೋಜ್ ಮಿಶ್ರಾ ಈ ಸಿನಿಮಾ ಹೆಸರಿಗಷ್ಟೇ ಮಾಡಿದ್ದಾರಾ? ಎಂದು ಪ್ರಶ್ನಿಸಿದ್ದಾರೆ. ಮುಗ್ದ ಹುಡುಗಿ ಮೊನಾಲಿಸಾಳಿಗೆ ನಟನೆ ತರಬೇತಿ ನೀಡುತ್ತಿರುವ ಸನೋಜ್ ಮಿಶ್ರಾ ಮೇಲೆ ಹಲವರು ಅನುಮಾನ ವ್ಯಕ್ತಪಡಿಸಿದ್ದಾರೆ.
