Thu. Apr 3rd, 2025

Bantwal:(ಎ.5 – ಎ.6) ನೇರಂಬೋಳು ಶ್ರೀ ರಕ್ತೇಶ್ವರಿ ಯುವಕ ಸಂಘದ ರಜತ ಸಂಭ್ರಮ

ಬಂಟ್ವಾಳ:(ಎ.2) ನೇರಂಬೋಳು ಶ್ರೀ ರಕ್ತೇಶ್ವರಿ ಯುವಕ ಸಂಘ( ರಿ.) ಇದರ ರಜತ ಸಂಭ್ರಮ ಕಾರ್ಯಕ್ರಮ ಎ.5 ಮತ್ತು ಎ.6 ರಂದು ಎರಡು ದಿನಗಳ ಕಾಲ ನಡೆಯಲಿದೆ ಎಂದು ಸಂಘಧ ಗೌರವಾಧ್ಯಕ್ಷ ಮನೋಹರ್ ನೇರಂಬೋಳು ತಿಳಿಸಿದರು. ಅವರು ಬಿಸಿರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಇದನ್ನೂ ಓದಿ: 🔴ಉಜಿರೆ: ಉಜಿರೆ ಎಸ್.ಡಿ.ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸಂಧಿವಾತ, ಅಟೋ ಇಮ್ಯೂನ್ ತೊಂದರೆಗಳ ಚಿಕಿತ್ಸಾ ಶಿಬಿರ


ಶಾಸಕ ರಾಜೇಶ್ ನಾಯ್ಕ್ ಅವರು ರಜತ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸಂಸದ ಕ್ಯಾ.ಬ್ರಿಜೇಶ್ ಚೌಟ, ಸ್ಪೀಕರ್ ಯು.ಟಿ.ಖಾದರ್, ಮಾಜಿ ಸಚಿವ ಬಿ‌.ರಮಾನಾಥ ರೈ ಪುರಸಭೆ ಅಧ್ಯಕ್ಷ ವಾಸುಪೂಜಾರಿ ಸಹಿತ ಅನೇಕ ರಾಜಕೀಯ ಹಾಗೂ ಸಾಮಾಜಿಕ ನೇತಾರರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.


ಸಭಾ ಕಾರ್ಯಕ್ರಮದ ಬಳಿಕ ಸ್ಥಳೀಯ ಹಾಗೂ ಜಿಲ್ಲೆಯ ಪ್ರತಿಷ್ಠಿತ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ತಿಳಿಸಿದರು.

ಸಂಘದ ಸಾಧನೆಯ ಕಿರುನೋಟ:
ಊರಿನ ಅಭಿವೃದ್ಧಿಗಾಗಿ ಒಂದು ಸಂಘಟನೆಯ ಅಗತ್ಯವಾಗಿರುವುದರಿಂದ ಬಂಟ್ವಾಳ ತಾಲೂಕಿನ ಬಂಟ್ವಾಳ ಕಸ್ಬಾ ಗ್ರಾಮದ ಗ್ರಾಮೀಣ ಭಾಗದಲ್ಲಿರುವ ನೇರಂಬೋಳು ಎಂಬಲ್ಲಿ ಕಳೆದ ಸುಮಾರು ಇಪ್ಪತ್ತೈದು ವರ್ಷಗಳ ಗ್ರಾಮದ ಸಮಾನ ಮನಸ್ಕರೆಲ್ಲರೂ ಸೇರಿಕೊಂಡು ಸೇರಿ 1999ರಲ್ಲಿ ಶ್ರೀ ರಕ್ತೇಶ್ವರಿ ಯುವಕ ಸಂಘ (ರಿ.) ನೇರಂಬೋಳು ಎಂಬ ಶಿರೋನಾಮೆಯೊಂದಿಗೆ ಸ್ಥಾಪನೆಯಾಯಿತು. ನಂತರದ ದಿನಗಳಲ್ಲಿ ನಿರಂತರವಾಗಿ ಕಳೆದ 25 ವರ್ಷಗಳಿಂದ ಸಮಾಜಮುಖಿ ಚಟುವಟಿಕೆಗಳ ಮೂಲಕ ಒಂದು ಅತ್ಯುತ್ತಮ ಸಂಘಟನೆಯಾಗಿ ಬೆಳೆದು ನಿಂತಿದೆ.

25 ವರ್ಷಗಳಿಂದ ನಿರಂತರವಾಗಿ ಸಾಮಾಜಿಕ, ಸಾಂಸ್ಕೃತಿಕ, ಕ್ರೀಡಾತ್ಮಕ ಮತ್ತು ಸಂಘಟನಾತ್ಮಕ ಚಟುವಟಿಕೆಗಳನ್ನು ನಡೆಸುತ್ತಾ ಊರಿನ ಜನರನ್ನು ಒಟ್ಟು ಗೂಡಿಸುತ್ತಾ ಒಂದು ಧನಾತ್ಮಕ ಸಂಘಟನೆಯಾಗಿ ಬೆಳೆದಿದೆ. ಪ್ರತಿ ತಿಂಗಳಿಗೊಂದು ಸಭೆ ನಡೆಸುತ್ತಾ ಮುಂದಿನ ಕಾರ್ಯಗಳ ಬಗ್ಗೆ ಚರ್ಚಿಸುತ್ತಾ ಅತ್ಯುತ್ತಮ ಯೋಜನೆಗಳನ್ನು ರೂಪಿಸುವ ಸಂಘಟನೆಯಾಗಿ ಬೆಳೆದಿದೆ. ಊರಿನಲ್ಲಿ ಆರ್ಥಿಕವಾಗಿ ಹಿಂದುಳಿದವರ ಮನೆಯಲ್ಲಿ ಪ್ರತಿ ಎರಡನೇ ಆದಿತ್ಯವಾರ ಶ್ರಮದಾನ ಮಾಡುವ ಯೋಜನೆಯನ್ನು ರಂತರವಾಗಿ ಮಾಡುತ್ತಾ ಬಂದಿದ್ದಾರೆ. ಮಕ್ಕಳಿಗಾಗಿ ಪುಸ್ತಕ ವಿತರಣೆ ಸಂಘದ ನಿರಂತರ ಕಾರ್ಯ ಚಟುವಟಿಕೆಗಳಲ್ಲಿ ಒಂದಾಗಿದೆ.

ಪ್ರತಿ ವರ್ಷ ಒಂದನೇ ತರಗತಿಯ ಒಬ್ಬ ವಿದ್ಯಾರ್ಥಿಯನ್ನು ದತ್ತು ತೆಗೆದುಕೊಂಡು ಹತ್ತನೇ ತರಗತಿಯವರೆಗೆ ಅವರ ಸಂಪೂರ್ಣ ಶೈಕ್ಷಣಿಕ ವೆಚ್ಚವನ್ನು ಭರಿಸುತ್ತಿರುವುದು ಸಂಘದ ಒಂದು ಅತ್ಯುತ್ತಮ ಯೋಜನೆಯಾಗಿದೆ. ತಮ್ಮ ಊರಿನ ಬಡ ಹೆಣ್ಣುಮಕ್ಕಳಿಗೆ ಮದುವೆ ಆಗುವ ಸಂದರ್ಭದಲ್ಲಿ ಆರ್ಥಿಕ ಸಹಾಯವನ್ನೂ ಮಾಡುತ್ತಿದೆ. ಜೊತೆಗೆ ಔಷಧೀಯ ವೆಚ್ಚವನ್ನು ಭರಿಸಲು ಕಷ್ಟಪಡುವವರಿಗೂ ಧನ ಸಹಾಯವನ್ನು ನೀಡುತ್ತಾ ಬಂದಿದೆ. ಜೊತೆಗೆ ಊರಿನ ಜನರ ಆರೋಗ್ಯಕ್ಕಾಗಿ ವೈದ್ಯಕೀಯ ಸಂಸ್ಥೆಗಳ ಸಹಯೋಗದೊಂದಿಗೆ ಆರೋಗ್ಯ ಶಿಬಿರಗಳನ್ನೂ ಆಯೋಜಿಸುತ್ತಾ ಬಂದಿದೆ. ಇಷ್ಟೆಲ್ಲಾ ಚಟುವಟಿಕೆಗಳನ್ನು ಆಯೋಜಿಸಲು ಸ್ವಂತ ಜಾಗ ಹಾಗೂ ಕಟ್ಟಡ ಬೇಕೆಂಬ ನಿಟ್ಟಿನಲ್ಲಿ ನೇರಂಬೋಳಿನಲ್ಲಿ ಸುಮಾರು 25 ಸೆಂಟ್ಸ್ ಜಾಗ ತೆಗೆದುಕೊಂಡು ಶಾಸಕರ ಪ್ರದೇಶಾಭಿವೃದ್ಧಿಯ ನಿಧಿಯಿಂದ 2010ರಲ್ಲಿ ಸ್ವಂತ ಕಟ್ಟಡವನ್ನು ನಿರ್ಮಿಸಿದೆ.


ಕೇವಲ ಸಮಾಜಮುಖಿ ಕಾರ್ಯ ಮಾತ್ರವಲ್ಲದೆ ಊರಿನ ಮಕ್ಕಳ ಪ್ರತಿಭೆಯನ್ನು ಅನಾವರಣ ಗೊಳಿಸುವುದಕ್ಕೋಸ್ಕರ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳನ್ನೂ ಆಯೋಜಿಸುತ್ತಾ ಬಂದಿದೆ. ಪ್ರತಿ ಆದಿತ್ಯವಾರ ಯಕ್ಷಗಾನ ತರಬೇತಿಯನ್ನು ನಡೆಸುತ್ತಿದ್ದು ಸುಮಾರು ೩೦ಕ್ಕೂ ಹೆಚ್ಚು ಮಕ್ಕಳು ತರಬೇತಿಯನ್ನು ಪಡೆಯುತ್ತಿದ್ದಾರೆ. ಪ್ರತಿವರ್ಷ ವಾರ್ಷಿಕೋತ್ಸವದಂದು ಯಕ್ಷಗಾನ ಪ್ರದರ್ಶನವನ್ನೂ ಆಯೋಜಿಸುತ್ತಾ ಬಂದಿದೆ. ಅಲ್ಲದೆ ಇನ್ನಿತರ ಸಾಂಸ್ಕೃತಿಕ ಚಟುವಟಿಕೆಗಳನ್ನೂ ನಡೆಸುತ್ತಾ ಬಂದಿದೆ. ಆಟಿದ ಕೂಟ, ದೀಪಾವಳಿ ಆಚರಣೆ ಕ್ರೀಡಾ ಕೂಟವನ್ನು ಆಯೋಜಿಸುತ್ತಾ ಬಂದಿದೆ.
ಶೈಕ್ಷಣಿಕ ಕಾರ್ಯಕ್ರಮ ಪ್ರತಿವರ್ಷ ಊರಿನ ಬಡ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ ಹಾಗೂ ವರ್ಷಕ್ಕೆ ಒಂದು ವಿದ್ಯಾರ್ಥಿಯ ಶಾಲಾ ಸಂಪೂರ್ಣ ಶೈಕ್ಷಣಿಕ ವೆಚ್ಚವನ್ನು ಒಂದರಿಂದ ಹತ್ತರವರೆಗೆ ಸಂಘದಿಂದ ಬಾರಿಸುವುದು. ಪ್ರತೀ ವರ್ಷ ದೀಪಾವಳಿ ಹಬ್ಬದ ಸಂದರ್ಭ ಸಂಘದ ವತಿಯಿಂದ ನೇರಂಬೋಳು ಪರಿಸರದ ಒಂದು ಕುಟುಂಬಕ್ಕೆ ಒಂದು ತಿಂಗಳ ಮನೆಯ ಖರ್ಚಿನ ಜೀನಸಿ ಸಾಮಾಗ್ರಿಗಳನ್ನು ನೀಡುತ್ತಾ ಬಂದಿದ್ದೇವೆ.

ಸಮಾಜ ಸೇವೆಗಾಗಿ ವಿವಿಧ ಪ್ರಶಸ್ತಿ :
ಪ್ರತಿ ವರ್ಷ ವಾರ್ಷಿಕೋತ್ಸವದ ಸಂದರ್ಭ ಸಮಾಜದಲ್ಲಿ ಸಾಧನೆ ಮಾಡಿದವರಿಗೆ ಹಾಗೂ ಗ್ರಾಮದಲ್ಲಿರುವ ಹಿರಿಯರಿಗೆ ಸನ್ಮಾನವನ್ನು ಮಾಡುತ್ತಾ ಅವರನ್ನು ಗುರುತಿಸುತ್ತಾ ಬಂದಿದೆ. ಉತ್ತಮ ಕಾರ್ಯ ವೈಖರಿಗಾಗಿ ಹಲವಾರು ಪ್ರಶಸ್ತಿಗಳೂ ಲಭಿಸಿವೆ. ನೆಹರೂ ಯುವಕೇಂದ್ರದಿಂದ ಪ್ರಶಸ್ತಿ, ಯುವಜನಾ ಇಲಾಖೆಯಿಂದ ಪ್ರಶಸ್ತಿ ಹಾಗೂ ಸ್ವಸ್ತಿಕ್ ಪುಂಜಾಲಟ್ಟೆ ಇವರಿಂದಲೂ ಪ್ರಶಸ್ತಿಗಳು ಲಭಿಸಿವೆ. ಹೀಗೆ ಕಳೆದ 25 ವರ್ಷಗಳಿಂದ ನಿರಂತರವಾಗಿ ಗ್ರಾಮದ ಅಭಿವೃದ್ಧಿಗೆ ನಮ್ಮ ಸಂಘಟನೆಯನ್ನು ತೊಡಗಿಸಿಕೊಂಡಿರುವುದರಿಂದ 2024-25ರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯೂ ಪಡೆದಿರುತ್ತದೆ.


ರಜತ ಸಂಭ್ರಮ : ಹೀಗೆ ಒಂದು ಗ್ರಾಮೀಣ ಭಾಗದಲ್ಲಿ ಕಳೆದ 24 ವರ್ಷಗಳಿಂದ ಸಮಾಜ ಸೇವೆ ಹೀಗೆ ಇತರ ಚಟುವಟಿಕೆಯನ್ನು ನಡೆಸುತ್ತಾ ಬಂದಿದ್ದು, ಇದರ ರಜತ ಸಂಭ್ರಮವು ಎಪ್ರಿಲ್ 5 ಮತ್ತು 6 ರಂದು ವಿಶಿಷ್ಟವಾಗಿ ನಡೆಯಲಿದೆ. ವಿವಿಧ ಗಣ್ಯರುಗಳು ಈ ಸಭೆಗೆ ಆಗಮಿಸಲಿದ್ದಾರೆ. ಎರಡು ದಿನಗಳ ಕಾರ್ಯಕ್ರಮಗಳು ನಡೆಯಲಿದ್ದು, ಎಪ್ರಿಲ್ 5ರಂದು ಸಭಾಕಾರ್ಯಕ್ರಮ, ಸನ್ಮಾನ ಕಾರ್ಯಕ್ರಮ ಹಾಗೂ ಎರಡು ಯಕ್ಷಗಾನ ಕಾರ್ಯಕ್ರಮಗಳು ನಡೆಯಲಿದೆ. ಎಪ್ರಿಲ್ 6ರಂದು ಸಭಾಕಾರ್ಯಕ್ರಮ, ಸನ್ಮಾನ ಕಾರ್ಯಕ್ರಮ ಹಾಗೂ ನಾಟಕ ಪ್ರದರ್ಶನ ನಡೆಯಲಿದೆ.

ಸಂಘದ ಅಧ್ಯಕ್ಷ ಹರೀಶ್ ಕುಲಾಲ್ , ಕೋಶಾಧಿಕಾರಿ ಜನಾರ್ಧನ ಸುವರ್ಣ , ಕಾರ್ಯಕಾರಿ ಸಮಿತಿ ಸದಸ್ಯ ರವೀಂದ್ರ ಕುಲಾಲ್ , ಮಾಜಿ ಅಧ್ಯಕ್ಷ
ಹರೀಶ್ಚಂದ್ರ ಪೂಜಾರಿ, ಜತೆ ಕಾರ್ಯದರ್ಶಿ ಪದ್ಮನಾಭ ಪೂಜಾರಿ, ಸಾಂಸ್ಕೃತಿಕ ಕಾರ್ಯದರ್ಶಿ ಗಣೇಶ್ ಆಚಾರ್ಯ ನೆರಂಬೋಳು ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *