Thu. Apr 3rd, 2025

Gerukatte: ಗೇರುಕಟ್ಟೆಯಲ್ಲಿ ಅಪೂರ್ವವಾಗಿ ನಡೆದ ಮಾತೃ ವಂದನಾ ಕಾರ್ಯಕ್ರಮ

ಗೇರುಕಟ್ಟೆ:(ಎ.2) ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ.) ಕರ್ನಾಟಕ ಕೇಂದ್ರ ಕಚೇರಿ ತುಮಕೂರು, ನೇತ್ರಾವತಿ ವಲಯ ಮಂಗಳೂರು ವತಿಯಿಂದ ಗೇರುಕಟ್ಟೆಯ ಕ್ಷೀರ ಸಂಗಮ ಸಭಾಭವನದಲ್ಲಿ 48 ದಿನ ನಡೆದ ಯೋಗ ತರಬೇತಿ ಶಿಬಿರದ ಸಮಾರೋಪವು ಮಾತೃ ವಂದನಾ, ಮಾತೃ ಧ್ಯಾನ, ಮಾತೃ ಭೋಜನ ಕಾರ್ಯಕ್ರಮದೊಂದಿಗೆ ಹೊಸ ವರ್ಷದ ಆರಂಭದ ದಿನವಾದ ಯುಗಾದಿಯಂದು ಬಹಳ ಅರ್ಥಪೂರ್ಣವಾಗಿ ಜರಗಿತು.

ಇದನ್ನೂ ಓದಿ: ⭕Chikkamagaluru Tragedy: ಪತ್ನಿ ಮೇಲಿನ ಸಿಟ್ಟಿಗೆ ಮಗಳು, ಅತ್ತೆ, ನಾದಿನಿಯ ಕೊಲೆ ಮಾಡಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿ

ಸನಾತನ ಧರ್ಮದಲ್ಲಿ ಮಹಿಳೆಯರಿಗೆ ಬಹಳ ಗೌರವವಿದೆ. ಮನೆಯಲ್ಲಿ ಮಕ್ಕಳನ್ನು ವಾತ್ಸಲ್ಯದಿಂದ ಕಾಣುವ ತಾಯಿ, ಪತಿಗೆ ಪತ್ನಿಯಾಗಿ, ಮಗಳಾಗಿ, ತಂಗಿಯಾಗಿ, ಅಕ್ಕನಾಗಿ ಸೊಸೆ, ಅತ್ತೆಯ ರೂಪದಲ್ಲಿ ಪ್ರತಿಯೊಬ್ಬರ ಜೀವನದಲ್ಲಿ ಪ್ರಭಾವ ಬೀರುವ ದೇವತಾ ಸ್ವರೂಪಿ. ಮಾತೃ ವಂದನೆ ಮತ್ತು ಮಾತೃ ಧ್ಯಾನದ ಮೂಲಕ ಆ ದಿವ್ಯವಾದ ಶಕ್ತಿಗೆ ನಾವು ಕೃತಜ್ಞತೆ ಅರ್ಪಿಸುವುದು ಅತ್ಯಂತ ಶ್ರೇಯಸ್ಕರವೆಂದು ಮುಖ್ಯಭಾಷಣಗಾರರಾಗಿದ್ದ ತುಮಕೂರು ಕೇಂದ್ರ ಸಮಿತಿಯ ಪ್ರಾಂತ ಪ್ರಶಿಕ್ಷಣ ಪ್ರಮುಖ್ ಲಕ್ಷ್ಮೀನಾರಾಯಣ ತಿಳಿಸಿದರು.
ಮಾತೃ ಧ್ಯಾನದಲ್ಲಿ ಎಲ್ಲರು ಕಣ್ಣು ಮುಚ್ಚಿಕೊಂಡು ಬಾಲ್ಯದಲ್ಲಿ ತಾಯಿ ತೋರಿಸಿದ ಪ್ರೀತಿ, ಮಮತೆ, ಮಕ್ಕಳಿಗಾಗಿ ಮಾಡಿದ ತ್ಯಾಗದ ಬಗ್ಗೆ ಮಾತು ಮತ್ತು ಹಾಡಿನ ಮೂಲಕ ತಾಯಿ ಮಗುವಿನ ಬಾಂದವ್ಯವನ್ನು ಅವರು ಎಲ್ಲರಿಗೂ ನೆನಪಿಸಿದರು.

ಮುಖ್ಯ ಅತಿಥಿಯಾಗಿದ್ದ ಕಳಿಯ ಹಾಲು ಉತ್ಪಾದಕರ ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಗುಲಾಬಿ ಮಾತನಾಡಿ ಪ್ರತಿಯೊಬ್ಬರೂ ತಮ್ಮ ಮಾತಾ ಪಿತರನ್ನು ಗೌರವಿಸಿ ಅತ್ಯಂತ ಶ್ರದ್ದೆಯಿಂದ ಅವರನ್ನು ನೋಡಿಕೊಳ್ಳುಬೇಕೆಂದು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಯೋಗ ತರಬೇತಿ ಮುಖ್ಯ ಶಿಕ್ಷಕಿ ಶ್ರೀಮತಿ ಪ್ರೇಮಲತಾ ಗಣೇಶ್ ಮಾತನಾಡಿ 48 ದಿನಗಳ ಶಿಬಿರ ಯಶಸ್ವಿಯಾಗಲು ಸಹಕರಿಸಿದ ಎಲ್ಲರನ್ನೂ ನೆನಪಿಸಿಕೊಂಡು ಕಳಿಯ ಶಾಖೆಯಲ್ಲಿ ಯೋಗ ತರಬೇತಿಯು ನಿರಂತರವಾಗಿ ನಡೆಯಬೇಕೆಂದು ತಿಳಿಸಿದರು.

ಶಿಬಿರಾರ್ಥಿಗಳಾದ ಪದ್ಮಲತಾ, ತುಕಾರಾಮ,ರೇಖಾ,ದಿವಾಕರ ಆಚಾರ್ಯ,ಶಿವಣ್ಣ ಅನುಭವ ಹಂಚಿಕೊಂಡರು.ಆರಂಭದಲ್ಲಿ ಭಜನೆ, ಆಟೋಟಗಳು, ನಗುವೇ ಯೋಗ ನಡೆಯಿತು. ಬಳಿಕ ಮುಖ್ಯ ಶಿಕ್ಷಕಿ ಪ್ರೇಮಲತಾ ಗಣೇಶ್,ಕಾವ್ಯ, ಅನುಪಮಾ,ದಿವ್ಯ, ಪದ್ಮಲತಾ, ಸುಭಾಷಿಣಿ, ಭಾರತಿ ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕುಮಾರಿ ವೈಷ್ಣವಿ ಪ್ರಾರ್ಥನೆ ಮಾಡಿದರು. ರೂಪ ಸ್ವಾಗತಿಸಿ ಶುಭಾಷಿಣಿ ವರದಿ ವಾಚಿಸಿದರು ದಿವ್ಯ ವಂದಿಸಿ ಮೀರಾ ಕಾರ್ಯಕ್ರಮ ನಿರೂಪಿಸಿದರು.


ಅತ್ಯಂತ ಭಾವನಾತ್ಮಕವಾದ ರೀತಿಯಲ್ಲಿ ಮಾತೃ ಭೋಜನ ಕಾರ್ಯಕ್ರಮ ನಡೆಯಿತು. ಯೋಗ ಬಂಧುಗಳು ಮತ್ತು ಅವರ ಮನೆಯವರು ಹಾಗೂ ಸಮುದಾಯದ ಗಣ್ಯರು ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ ಎಲ್ಲರೂ ಹಿರಿಯರಿಂದ ಆಶೀರ್ವಾದವನ್ನು ಪಡೆದು ವಿಶೇಷವಾಗಿ ಸಿದ್ಧಪಡಿಸಿದ ಪ್ರಸಾದವನ್ನು ಮಾತೆಯ ಕೈತುತ್ತಿನಂತೆ ಎಲ್ಲರೂ ಸ್ವೀಕರಿಸಿದರು. ನೂರಾರು ಹಣತೆ ದೀಪದ ಬೆಳಕಿನಲ್ಲಿ ಪ್ರಕೃತಿದತ್ತವಾಗಿ ಸಿಗುವ ವಸ್ತುಗಳಿಂದಲೇ ಅಲಂಕರಿಸಲ್ಪಟ್ಟ ವೇದಿಕೆ ಮತ್ತು ಸಭಾಂಗಣ ಎಲ್ಲರ ಆಕರ್ಷಣೆಯ ಕೇಂದ್ರವಾಗಿತ್ತು.

Leave a Reply

Your email address will not be published. Required fields are marked *