ಮಂಡ್ಯ:(ಎ.2) ಒಬ್ಬನ ಜೊತೆ ಪ್ರೀತಿ ಮಾಡಿ, ಇನ್ನೊಬ್ಬನ ಜೊತೆ ಮದುವೆಯಾಗಿ, ಮತ್ತೊಬ್ಬನ ಜೊತೆ ಸಂಸಾರ ಮಾಡಿ ಮೂರು ಜನ ಹುಡುಗರ ಬಾಳನ್ನು ಯುವತಿ ಒಬ್ಬಳು ಹಾಳು ಮಾಡಿದ ವಿಚಿತ್ರ ಘಟನೆ ಮಂಡ್ಯದಲ್ಲಿ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ⭕ಬಂಟ್ವಾಳ : ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಆಟೋರಿಕ್ಷಾ
ಮದ್ದೂರು ತಾಲೂಕಿನ ಕೆಸ್ತೂರಿನ ಯುವತಿ ವೈಷ್ಣವಿ ಎಂಬ ಮಲ್ಲಿಯೊಬ್ಬಳು ಏಕಕಾಲದಲ್ಲಿ ಮೂವರಿಗೆ ಪಂಗನಾಮ ಎಳೆಯುವ ಮೂಲಕ ಪ್ರೇಮ ಕಥಾನಕಕ್ಕೆ ಹೊಸ ಭಾಷ್ಯವನ್ನೇ ಬರೆದಿದ್ದಾಳೆ. ಹಿಂದೆ ಹಾಸನದ ರಘು ಎಂಬ ಯುವಕನ ಜೊತೆ ವೈಷ್ಣವಿ ಪ್ರೀತಿಯ ನಾಟಕವಾಡುತ್ತಿದ್ದಳು. ಜೊತೆಜೊತೆಯಲ್ಲೇ ಶಿವು ಎಂಬ ಯುವಕನನ್ನೂ ಬುಟ್ಟಿಗೆ ಕೆಡವಿಕೊಂಡಿದ್ದಳು. ರಘು ಈಕೆಯೊಂದಿಗೆ ಮದುವೆ ನಿಶ್ಚಿತಾರ್ಥ ಮಾಡಿಕೊಂಡು ಧರ್ಮಸ್ಥಳದಲ್ಲಿ ವಿವಾಹಕ್ಕೆ ಸಿದ್ಧತೆ ನಡೆಸಿದ್ದ. ಆದರೆ ರಾತ್ರೋ ರಾತ್ರಿ ಗಂಡಿನ ಮನೆಯವರು ಕೊಟ್ಟ ಚಿನ್ನ, ಸೀರೆ, ಹಣದೊಂದಿಗೆ ನಾಪತ್ತೆಯಾಗಿದ್ದಳು.
ನಾಪತ್ತೆಯಾದ ಕಿಲಾಡಿ ವೈಷ್ಣವಿ ಶಿವು ಎಂಬುವವನನ್ನು ಮದುವೆಯಾಗಿದ್ದಳು. ಈ ಮದುವೆ ಒಂದು ವರ್ಷದಲ್ಲೇ ಕಿತ್ತು ಹೋಗಿ ತವರು ಮನೆ ಸೇರಿಕೊಂಡಿದ್ದಳು.


ಬಳಿಕ ತಾನು ಬೆಂಗಳೂರಿನಲ್ಲಿ ಓದುತ್ತಿರುವ ವಿದ್ಯಾರ್ಥಿನಿ ಎಂದು ಶಶಿ ಎಂಬ ಯುವಕನನ್ನು ಯಾಮಾರಿಸಿದ್ದ ವೈಷ್ಣವಿ ಆತನನ್ನೂ ಆದಿಚುಂಚನಗಿರಿಯಲ್ಲಿ ಮದುವೆಯಾಗಿದ್ದಳು. ನಂತರ ತಾನು ಬೆಂಗಳೂರಿಗೆ ಓದಲು ಮರಳುವುದಾಗಿ ಹೇಳಿ ಆತನಿಂದ ಪಿಜಿ, ಮೊಬೈಲು ಖರ್ಚಿಗೆ ಪ್ರತಿ ತಿಂಗಳೂ ಹಣ ಪೀಕುತ್ತಿದ್ದಳು. 15 ಲಕ್ಷ ಕೈಬಿಟ್ಟ ಬಳಿಕ ಶಶಿಗೆ ಅನುಮಾನ ಶುರುವಾಗಿ, ವಿಚಾರಿಸಿದಾಗ ಈಕೆಯ ಸ್ಟಡಿ ಬಗ್ಗೆ ಜ್ಞಾನೋದಯವಾಗಿತ್ತು. ಈಗ ಶಶಿ ಮಂಡ್ಯ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿ ತನಗೆ ನ್ಯಾಯ ಕೊಡಿಸುವಂತೆ ಪೊಲೀಸರ ಮೊರೆ ಹೋಗಿದ್ದಾನೆ.


