ಬೆಳಾಲು, ಏ.03( ಯು ಪ್ಲಸ್ ಟಿವಿ): ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯ ಬೆಳಾಲು ಗ್ರಾಮದ ಕೊಡೋಳುಕೆರೆ – ಮುಂಡ್ರೋಟ್ಟು ರಸ್ತೆಯಲ್ಲಿ ಮಾರ್ಚ್ 22 ರ ಶನಿವಾರದಂದು ರಂದು ಬೆಳಗ್ಗೆ ಮೂರುವರೆ ತಿಂಗಳ ಹೆಣ್ಣು ಮಗುವನ್ನು ಬಿಟ್ಟು ಹೋದ ಪ್ರಕರಣ ಕೊನೆಗೂ ಸುಖಾಂತ್ಯ ಕಂಡಿದೆ.

ಧರ್ಮಸ್ಥಳ ಪೊಲೀಸರು ಮಗುವಿನ ತಂದೆಯನ್ನು ಪತ್ತೆ ಹಚ್ಚಿ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಇಬ್ಬರು ಕೂಡ ಸ್ವ ಇಚ್ಛೆಯಿಂದ ಮದುವೆಯಾಗುವುದಾಗಿ ಪೊಲೀಸರ ಮುಂದೆ ರಂಜಿತ್ ಗೌಡ ಒಪ್ಪಿದ್ದಾರೆ ಎನ್ನಲಾಗಿದೆ.
ಆ ಮೂಲಕ ಪ್ರಕರಣ ಸುಖಾಂತ್ಯವಾಗಿದೆ. ಬೆಳಾಲು ಗ್ರಾಮದ ಕೊಡೋಳುಕೆರೆ – ಮುಂಡ್ರೋಟ್ಟು ರಸ್ತೆಯಲ್ಲಿ ಮಗುವನ್ನು ಬಿಟ್ಟು ಹೋಗಿರುವ ಬಗ್ಗೆ ಸಾರ್ವಜನಿಕರು ನೋಡಿ ರಕ್ಷಿಸಿ ಆರೈಕೆ ಮಾಡಿ ಧರ್ಮಸ್ಥಳ ಪೊಲೀಸರು ಸಮ್ಮುಖದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದು ಪುತ್ತೂರು ಆಶ್ರಮಕ್ಕೆ ಹಸ್ತಾಂತರಿಸಿದ್ದರು.
ಅಪರಿಚಿತ ಹೆಣ್ಣು ಮಗು ಪತ್ತೆಯಾದ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಬೆಳ್ತಂಗಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಅನ್ನಪೂರ್ಣ ಅವರು ದೂರು ನೀಡಿದ್ದು ಅದರಂತೆ ಅಪರಿಚಿತ ಮಗುವನ್ನು ಯಾರೋ ಬಿಟ್ಟು ಬಗ್ಗೆ ಪ್ರಕರಣ ದಾಖಲಾಗಿತ್ತು.




