Sun. Apr 6th, 2025

Bengaluru: ಬಾಲಕಿ ಮೇಲೆ ಬ್ಯಾಡ್ಮಿಂಟನ್ ಕೋಚ್​ ಅತ್ಯಾಚಾರ – ಫೋನ್​ ನಲ್ಲಿ ಹಲವು ಹುಡುಗಿಯರ ವಿಡಿಯೋ ಪತ್ತೆ

ಬೆಂಗಳೂರು (ಎ.05): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೊಂದು ಬೆಚ್ಚಿ ಬೀಳಿಸುವ ಘಟನೆಯೊಂದು ಬೆಳಕಿಗೆ ಬಂದಿದೆ. ಬ್ಯಾಡ್ಮಿಂಟನ್ ತರಬೇತುದಾರ​ ಅಪ್ರಾಪ್ತೆ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತಮಿಳುನಾಡು ಮೂಲದ ಸುರೇಶ್ ಬಾಲಾಜಿ (26) ಬ್ಯಾಡ್ಮಿಂಟನ್ ಕೋಚ್ ಆಗಿದ್ದು, ಬ್ಯಾಡ್ಮಿಂಟನ್ ಹೇಳಿಕೊಡುವ ನೆಪದಲ್ಲಿ ಅಪ್ರಾಪ್ತ ಬಾಲಕಿಯರನ್ನು ಕೋಚ್‌ ಲೈಂಗಿಕವಾಗಿ ಬಳಸಿಕೊಂಡಿರುವುದು ಬೆಳಕಿಗೆ ಬಂದಿದೆ. ಕಳೆದ ಎರಡು ವರ್ಷಗಳ ಹಿಂದೆ ಬ್ಯಾಡ್ಮಿಂಟನ್ ಕೋಚಿಂಗ್​ ಸೇರಿದ್ದ ಬಾಲಕಿಯನ್ನು ಆಗಾಗ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ. ಈ ಬಗ್ಗೆ ಯಾರ ಬಳಿಯೂ ಬಾಯಿ ಬಿಡದಂತೆ ಬಾಲಕಿಗೆ ಹೇಳಿದ್ದ.

ಇದನ್ನೂ ಓದಿ; 🔴ಉಜಿರೆ: ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಕರಾಟೆ ತರಬೇತಿ

ಹೀಗೆ ಒಂದು ದಿನ ಬಾಲಕಿ ರಜೆಗೆ ಅಜ್ಜಿಯ ಮನೆಗೆ ಬಂದಾಗ ಮೊಬೈಲ್ ನಿಂದ ತನ್ನ ನಗ್ನ ಪೋಟೋವನ್ನು ಸುರೇಶ್​ಗೆ ಶೇರ್ ಮಾಡಿದ್ದಾಳೆ. ಬಳಿಕ ಮೊಬೈಲ್​ ನೋಡಿದಾಗ ಕೋಚ್​ಗೆ ನಗ್ನ ಫೋಟೋ ಕಳುಹಿಸಿರುವುದು ಪತ್ತೆಯಾಗಿದೆ. ಇದನ್ನು ನೋಡಿ ಅಜ್ಜಿ ಶಾಕ್ ಆಗಿದ್ದಾಳೆ. ಬಾಲಕಿ ತನ್ನ ನಗ್ನ ಫೋಟೋವನ್ನು ಕೋಚ್​ಗೆ ಕಳುಹಿಸಿರುವುದನ್ನು ಕಂಡು ಬೆಚ್ಚಿಬಿದ್ದಿರುವ ಅಜ್ಜಿ ಕೂಡಲೇ ಆಕೆಯ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಆಗ ಬಾಲಕಿಯನ್ನ ವಿಚಾರಿಸಿದಾಗ ಕೋಚ್​ ಸುರೇಶನ ಕಾಮದಾಟ ಬಟಾಬಯಲಾಗಿದೆ.

ಬಳಿಕ ಪೋಷಕರು ಕೋಚ್ ಸುರೇಶ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ಈ ದೂರಿನ ಮೇರೆಗೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ. ಇದೇ ವೇಳೆ ಆರೋಪಿ ಮೊಬೈಲ್​ ಪರಿಶೀಲನೆ ಮಾಡಿದಾಗ ಕ್ರೀಡಾ ತರಬೇತಿ ಕೇಂದ್ರದಲ್ಲಿ ಹಲವು ಬಾಲಕಿಯರಿಗೆ ಲೈಂಗಿಕ ದೌರ್ಜನ್ಯ ಕಿರುಕುಳ ನೀಡಿರುವುದು ಕಂಡುಬಂದಿದೆ.

ಅಲ್ಲದೇ ಮೊಬೈಲ್​ನಲ್ಲಿ 13 ರಿಂದ 16 ವರ್ಷ ವಯಸ್ಸಿನ ಹಲವು ಹುಡುಗಿಯರ ನಗ್ನ ಫೋಟೋಗಳು ಮತ್ತು ವೀಡಿಯೊಗಳು ಸಹ ಪತ್ತೆಯಾಗಿವೆ. ಹೀಗಾಗಿ ಇನ್ನಷ್ಟು ತನಿಖೆ ನಡೆಸಲು ಪೊಲೀಸರು, ಆರೋಪಿ ಸುರೇಶ್ ಬಾಲಾಜಿ ಕೋರ್ಟ್​ ಮೂಲಕ ಎಂಟು ದಿನಗಳ ಕಾಲ ಕಸ್ಟಡಿಗೆ ಪಡೆದುಕೊಂಡಿದ್ದಾರೆ.

ಬ್ಯಾಡ್ಮಿಂಟನ್ ಕೋಚಿಂಗ್ ಬರುತ್ತಿದ್ದ ಬಾಲಕಿಯರೊಂದಿಗೆ ತನ್ನ ಕಾಮತೃಷೆ ತೀರಿಸಿಕೊಳ್ಳುತ್ತಿದ್ದ. ಇದನ್ನು ಯಾರಿಗೂ ಹೇಳದಂತೆ ಹೆದರಿಸಿದ್ದ. ಹೀಗಾಗಿ ಇದುವರೆಗೂ ಬಾಲಕಿಯರು ಬಾಯ್ಬಿಟ್ಟಿಲ್ಲ. ಆದ್ರೆ, ಓರ್ವ ಬಾಲಕಿ ಅಜ್ಜಿ ಮೊಬೈಲ್​ನಿಂದ ತನ್ನ ನಗ್ನ ಫೋಟೋವನ್ನು ಕಳುಹಿಸಿದಾಗ ಕೋಚರ್​ ಸುರೇಶನ ನವರಂಗಿ ಆಟ ಬಯಲಿಗೆ ಬಿದ್ದಿದ್ದು, ಬಳಿಕ ಇನ್ನುಳಿದ ಬೇರೆ ಬಾಲಕಿಯರ ಮೇಲೆ ಲೈಂಗಿಕದ ದೌರ್ಜನ್ಯ ಎಸಗಿರುವುದು ಗೊತ್ತಾಗಿದೆ. ಹೀಗಾಗಿ ಪೊಲೀಸರು ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಅಪ್ರಾಪ್ತೆ ಬಾಲಕಿಯರ ಹೇಳಿಕೆ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *