ಉಡುಪಿ (ಎ.05): ಓರ್ವ ಮುಸ್ಲಿಂ ಯುವಕ ನನ್ನ ಮಗಳನ್ನು ಅಪಹರಿಸಿದ್ದಾನೆ. ಇದು ಲವ್ ಜಿಹಾದ್ ಷಡ್ಯಂತ್ರವಾಗಿದೆ ಎಂದು ಯುವತಿಯ ತಂದೆ ಇತ್ತೀಚೆಗೆ ಆರೋಪಿಸಿದ್ದರು. ಈ ಪ್ರಕರಣ ಕರಾವಳಿಯಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿತ್ತು. ಸದ್ಯ ಈ ಲವ್ ಜಿಹಾದ್ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ನ್ಯಾಯಾಲಯಕ್ಕೆ ಹಾಜರಾದ ಯುವತಿ ಜೀನಾ ಮೆರಿಲ್, ಸ್ವಇಚ್ಛೆಯಿಂದ ಮೊಹಮ್ಮದ್ ಅಕ್ರಮ್ ಜೊತೆ ಹೋಗಿರುವುದಾಗಿ ಒಪ್ಪಿಕೊಂಡಿದ್ದಾಳೆ.

ಇದನ್ನೂ ಓದಿ: ⭕ವಿಟ್ಲ: ಯುವತಿಯರ ಮೊಬೈಲ್ ನಂಬರ್ ಪಡೆದು ಅಶ್ಲೀಲ ಮೆಸೇಜ್
ನನ್ನನ್ನು ಯಾರೂ ಅಪಹರಿಸಿಲ್ಲ ಎಂದ ಯುವತಿ:
ಈ ಪ್ರಕರಣದ ವಿಚಾರಣೆಗಾಗಿ ಯುವತಿ ಜೀನಾ ಮೆರಿಲ್ ಮತ್ತು ಅಕ್ರಮ್ ತಮ್ಮ ಲಾಯರ್ ಜೊತೆಗೆ ನ್ಯಾಯಾಲಯಕ್ಕೆ ಹಾಜರಾಗಿದ್ದರು. ತನ್ನನ್ನು ಯಾರೂ ಕೂಡ ಅಪಹರಿಸಿರುವುದಿಲ್ಲ. ನಾನು ಸ್ವಇಚ್ಛೆಯಿಂದ ಅಕ್ರಮ್ ಜೊತೆ ತೆರಳಿರುವುದಾಗಿ ಹೇಳಿದ್ದಾಳೆ. ಈ ವೇಳೆ ಹುಡುಗಿ ಜೊತೆ ಮಾತನಾಡಲು ತಾಯಿ ಅನುಮತಿ ಕೇಳಿದಾಗ ನ್ಯಾಯಾಧೀಶರು ಕೊಠಡಿಯಲ್ಲೇ ಅವಕಾಶ ನೀಡಿದ್ದು, ಬಳಿಕ ವಿಚಾರಣೆಯಲ್ಲಿ ಮಗಳನ್ನು ತನ್ನ ಜೊತೆ ಕಳಿಸುವಂತೆ ನ್ಯಾಯಾಧೀಶರಲ್ಲಿ ತಾಯಿ ಮನವಿ ಮಾಡಿದರು. ಆದರೆ ಇದಕ್ಕೆ ಯುವತಿ ಒಪ್ಪಿಲ್ಲ.

ತಾನು ಅಕ್ರಮ್ ಜೊತೆ ಏಪ್ರಿಲ್ 19 ರಂದು ರಿಜಿಸ್ಟರ್ ಮದುವೆ ಮಾಡಿಕೊಳ್ಳುತ್ತೇನೆ. ಮದುವೆ ನಂತರ ತಾಯಿಯನ್ನು ಭೇಟಿಯಾಗುವುದಾಗಿ ಯುವತಿ ಭರವಸೆ ನೀಡಿದ್ದು, ತಾಯಿ ಜೊತೆಗೆ ಉತ್ತಮ ಬಾಂಧವ್ಯದೊಂದಿಗೆ ಇರುತ್ತೇನೆ ಎಂದಿದ್ದಾಳೆ. ಸದ್ಯ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಏಪ್ರಿಲ್ 22 ರಂದು ನಿಗದಿಪಡಿಸಿದೆ.

ಜೀನಾ 9ನೇ ತರಗತಿಯಲ್ಲಿರುವಾಗಲೇ ಅಕ್ರಮ್ ಇನ್ಸ್ಟಾಗ್ರಾಂ ಮೂಲಕ ಪರಿಚಯವಾಗಿದ್ದ. ಆ ಸಂದರ್ಭ ಚಿನ್ನದ ಸರ ಕಳ್ಳತನ, ಪೋಕ್ಸೋ ಕೇಸ್ ದಾಖಲಾಗಿತ್ತು. ಆ ನಂತರ ನಿರಂತರ ಸಂಪರ್ಕದಲ್ಲಿದ್ದು, ಆ ಸೇಡನ್ನು ಈಗ ತೀರಿಸುತ್ತಿದ್ದಾನಂತೆ. ಮಾರ್ಚ್ 19ರಂದು ಯುವತಿ ಕಣ್ಮರೆಯಾಗಿದ್ದಳು. ಇದಕ್ಕೂ ಒಂದು ದಿನ ಮೊದಲು ಸಬ್ ರಿಜಿಸ್ಟರ್ ಆಫೀಸ್ನಲ್ಲಿ ಅಕ್ರಮ್ ಮತ್ತು ಜೀನಾ ಮದುವೆ ನೋಂದಣಿ ಮಾಡಿಕೊಂಡಿದ್ದರು.


