ಬೆಳ್ತಂಗಡಿ:(ಎ.11) ಕರಾಯ ಗ್ರಾಮದ ಕಲ್ಲೇರಿ ಎಂಬಲ್ಲಿ ಖಾಸಗಿ ಕಂಪೆನಿಯ ಎಟಿಎಂ ಕೇಂದ್ರವೊಂದಕ್ಕೆ ನುಗ್ಗಿ ಕಳ್ಳತನಕ್ಕೆ ಯತ್ನಿಸಿದ್ದ ಪ್ರಕರಣದಲ್ಲಿ ಆರೋಪಿ ಮಹಮ್ಮದ್ ರಫೀಕ್ (35) ಎಂಬಾತನನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.

ಕಲ್ಲೇರಿಯಲ್ಲಿನ ತಣ್ಣೀರುಪಂತ ಕೃಷಿ ಪತ್ತಿನ ಸಹಕಾರಿ ಸಂಘದ ಕಟ್ಟಡದಲ್ಲಿ ಇಂಡಿಯಾ ವನ್ ಎಂಬ ಹೆಸರಿನ ಖಾಸಗಿ ಸಂಸ್ಥೆಯ ಎಟಿಎಂ ಕೇಂದ್ರಕ್ಕೆ ನುಗ್ಗಿದ ಕಳ್ಳ ಅಲ್ಲಿನ ಸಿ ಸಿ ಕ್ಯಾಮರಾ ವನ್ನು ಕಿತ್ತೆಗೆಯಲು ಯತ್ನಿಸಿ, ಎ.ಟಿ.ಎಂ ಮೆಷಿನ್ ನನ್ನು ತೆರೆಯಲು ಯತ್ನಿಸಿ ಎ.ಟಿ.ಎಂ ಮೆಷಿನ್ ಗೆ ಹಾನಿಯನ್ನುಂಟು ಮಾಡಿದ್ದ.

ಈ ಬಗ್ಗೆ ಪ್ರಶಾಂತ್ ಡಿ ಕೋಸ್ಟಾ ರವರು ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸರು ಪ್ರಕರಣವನ್ನು ದಾಖಲಿಸಿ ತನಿಖೆ ನಡೆಸಿದಾಗ ಪರಿಸರದ ಸಿಸಿ ಕ್ಯಾಮರಾದ ದೃಶ್ಯಾವಳಿಯಲ್ಲಿ ಶಂಕಿತ ಆರೋಪಿಯ ಸುಳಿವು ಪಡೆದುಕೊಂಡರು. ಈ ಸುಳಿವಿನ ಆಧಾರದಲ್ಲಿ ಮೂಲತಃ ಕಾಜೂರಿನ ನಿವಾಸಿಯಾಗಿರುವ, ಕುಪ್ಪೆಟ್ಟಿಯಲ್ಲಿ ವಾಸಿಸುತ್ತಿರುವ ಮಹಮ್ಮದ್ ರಫೀಕ್ ನನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.



