ಬೆಳ್ತಂಗಡಿ: (ಎ.16) ಭೂಮಿ, ಗಾಳಿ, ಬೆಂಕಿ, ನೀರು, ಆಕಾಶದಂತೆ ತಾಳ್ಮೆ, ಧೈರ್ಯ, ಪರೋಪಕಾರ, ಕ್ರಿಯಾಶೀಲತೆಯಿಂದ ಜೀವಿಸಬೇಕು, ಶ್ರೀ ರಾಮಚಂದ್ರನಂತೆ ಸಹಜೀವಿಗಳನ್ನು ಪ್ರೀತಿಸಿ, ಗೌರವಿಸಿ ಸೌಹಾರ್ದತೆಯಿಂದ ಬದುಕಬೇಕು ಎಂದು ವಿಧಾನ ಪರಿಷತ್ ಶಾಸಕರಾದ ಕಿಶೋರ್ ಕುಮಾರ್ ಬೊಟ್ಯಾಡಿ ತಿಳಿಸಿದರು.


ಇದನ್ನೂ ಓದಿ: 🟣ಬೆಳ್ತಂಗಡಿ: ಕಜಕೆ ಸ.ಹಿ.ಪ್ರಾ. ಶಾಲೆಗೆ ಬೆಸ್ಟ್ ಫೌಂಡೇಶನ್ ವತಿಯಿಂದ ಪೀಠೋಪಕರಣ ವಿತರಣೆ
ಅವರು ಬೆಳ್ತಂಗಡಿ ತಾಲೂಕು ಭಂಡಾರಿ ಸಮಾಜ ಸಂಘ ಹಾಗೂ ಭಂಡಾರಿ ಯುವ ವೇದಿಕೆ ಇದರ 14 ನೇ ವರ್ಷದ ವಾರ್ಷಿಕ ಮಹಾಸಭೆಯ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, ಪಕ್ಷ ಮತ್ತು ಸಮಾಜಕ್ಕೆ ನಿಷ್ಠೆಯಿಂದ ಬದುಕುತ್ತೇನೆ. ಸಮಾಜಕ್ಕೆ ತನ್ನಿಂದಾದ ಸಹಕಾರವನ್ನು ನೀಡಲು ಸದಾ ಸಿದ್ಧನಿದ್ದೇನೆ ಎಂದರು.

ಎ.15 ರಂದು ಸಂಘದ ಅಧ್ಯಕ್ಷರಾದ ಎಸ್. ಉಮೇಶ್ ಭಂಡಾರಿ ಉಜಿರೆ ಇವರ ಅಧ್ಯಕ್ಷತೆಯಲ್ಲಿ ಪಣೆಜಾಲು ಭಂಡಾರಿ ಸಮಾಜದ ಆವರಣದಲ್ಲಿ ಜರುಗಿತು. ವಾರ್ಷಿಕ ಮಹಾಸಭೆಯ ಪ್ರಯುಕ್ತ ಸಂಜೆ ಗೋಧೂಳಿ ಸಮಯದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯನ್ನು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕಿನ ಭಂಡಾರಿ ಸಮಾಜ ಬಾಂಧವರ ಕಷ್ಟಕ್ಕೆ ನೆರವಾಗುವ ಉದ್ಧೇಶದಿಂದ ಪ್ರಾರಂಭಿಸಲಾದ ಭಂಡಾರಿ ಸಂಜೀವಿನಿ ಎಂಬ ನೂತನ ಯೋಜನೆಯ ಅಡಿಯಲ್ಲಿ 3 ಮಂದಿಗೆ ಚಿಕಿತ್ಸೆಗಾಗಿ ಧನಸಹಾಯ ನೀಡಲಾಯಿತು.

ತಮ್ಮ ಬದುಕಿನಲ್ಲಿ ಮಾಡಿದ ಸಾಧನೆ ಮತ್ತು ಭಂಡಾರಿ ಸಂಘಕ್ಕೆ ನೀಡಿದ ಅಪಾರ ಸೇವೆಯನ್ನು ಪರಿಗಣಿಸಿ, ಸಂಘದ ಸ್ಥಾಪನೆ ಮತ್ತು ಬೆಳವಣಿಗೆಯಲ್ಲಿ ಅವಿರತ ಶ್ರಮಿಸಿದ ತಾಲೂಕಿನ ಹಿರಿಯರಾದ ಎ. ಪೂವಪ್ಪ ಭಂಡಾರಿ ಪಣೆಜಾಲು ಇವರನ್ನು ಸನ್ಮಾನಿಸಿ ಪುರಸ್ಕರಿಸಲಾಯಿತು. ನಾರಾವಿ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ 2ನೇ ಬಾರಿಗೆ ಆಯ್ಕೆಯಾಗಿರುವ ಸುಧಾಕರ ಭಂಡಾರಿ ನಾರಾವಿ, ಬೆಳ್ತಂಗಡಿ ತಾಲೂಕು ಕೃಷಿ ಉತ್ಪನ್ನ ಮಾರಾಟ ಸಂಘ, ಬೆಳ್ತಂಗಡಿ ಇದರ ಉಪಾಧ್ಯಕ್ಷರಾಗಿ ಹಾಗೂ ನಾರಾವಿ ಸೂರ್ಯನಾರಾಯಣ ದೇವಸ್ಥಾನದ ಮೊಕ್ತೇಸರರಾಗಿ ಆಯ್ಕೆಯಾಗಿರುವ, ಭಂಡಾರಿ ಸಮಾಜದ ಮಾಜಿ ಅಧ್ಯಕ್ಷರೂ ಆಗಿರುವ ದಿವಾಕರ ಭಂಡಾರಿ ನಾರಾವಿ, ಮಡಂತ್ಯಾರು ಜೆಸಿಐ ಇದರ ಪ್ರಥಮ ಮಹಿಳಾ ಅಧ್ಯಕ್ಷೆಯಾಗಿ ಆಯ್ಕೆಯಾಗಿರುವ ಶ್ರೀಮತಿ ಅಮಿತ ಅಶೋಕ ಗುಂಡ್ಯಲ್ಕೆ ಈ ಎಲ್ಲಾ
ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ದ್ವಿತೀಯ ಪಿಯುಸಿ ಮತ್ತು ಹತ್ತನೇ ತರಗತಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ವಿದ್ಯಾ ಪುರಸ್ಕಾರ ನೀಡಲಾಯಿತು. ಸಂಘದ ಅಧ್ಯಕ್ಷರಾದ ಎಸ್. ಉಮೇಶ್ ಭಂಡಾರಿ ಇವರು ಮಾತನಾಡಿ ಎಲ್ಲರೂ ಭಾಗವಹಿಸುವುದರಿಂದ ಸಂಘ ಬೆಳೆಯಲು ಸಾಧ್ಯ. ಭಂಡಾರಿ ಸಮಾಜ ಬಾಂಧವರು ಸಕ್ರೀಯವಾಗಿ ಭಾಗವಹಿಸಿದಾಗ ಮಾತ್ರ ಸಂಘದ ಅಭಿವೃದ್ದಿ ಸಾಧ್ಯ ಎಂದರು. ಯುವಪೀಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸಂಘದ ಕಾರ್ಯಚಟುವಟಿಕೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದರು.

ಅಮಿತ ಅಶೋಕ್ ಗುಂಡ್ಯಲ್ಕೆ ಇವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷರಾದ ಬಾಲಕೃಷ್ಣ ಭಂಡಾರಿ
ಕೋಡ್ಯೇಲು ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ಅಶೋಕ್ ಭಂಡಾರಿ ಗುಂಡ್ಯಲ್ಕೆ ಸಂಘದ ವಾರ್ಷಿಕ ವರದಿ ವಾಚಿಸಿದರು. ಸತೀಶ್ ನಾಳ ವಂದಿಸಿದರು.

ಸಂಘದ ಜತೆಕಾರ್ಯದರ್ಶಿ ನಾರಾಯಣ .ಬಿ ಕುಂಡದಬೆಟ್ಟು ಕಾರ್ಯಕ್ರಮ ನಿರೂಪಿಸಿದರು. ಸುಧಾಕರ ಭಂಡಾರಿ ನಾರಾವಿ, ದಿವಾಕರ ಭಂಡಾರಿ ನಾರಾವಿ, ವಿಶ್ವನಾಥ ಭಂಡಾರಿ ಉಜಿರೆ ಉಪಸ್ಥಿತರಿದ್ದರು. ಮಹಾಸಭೆಯ ಬಳಿಕ ತಾಲೂಕಿನ ವಿವಿಧ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
