ಮಂಗಳೂರು:(ಎ.17) ಒಂದೊಮ್ಮೆ ದೇಶದಲ್ಲಿ ಅತ್ಯುತ್ತಮ ಗುಣಮಟ್ಟದ ವಿದ್ಯಾಭ್ಯಾಸಕ್ಕೆ ಹೆಸರುವಾಸಿಯಾಗಿದ್ದ ಮಂಗಳೂರು ವಿ.ವಿ , ಕಳೆದ ಕೆಳ ವರ್ಷಗಳಿಂದ ಭ್ರಷ್ಟ ಅಧಿಕಾರಿಗಳ ಹಾಗೂ ಆಡಳಿತ ಮಂಡಳಿಯ ಕೈಗೆ ಸಿಲುಕಿ ಭ್ರಷ್ಟಾಚಾರದ ಕೂಪವಾಗಿ ಹೊರ ಹೊಮ್ಮಿದೆ. ಮಾರ್ಕ್ಸ್ ಕಾರ್ಡ್ ಹಗರಣ, ಸೋಲಾರ್ ಹಗರಣ,ಲ್ಯಾಪ್ಟಾಪ್ ಹಗರಣ ಹೀಗೆ ಅನೇಕ ಹಗರಣಗಳ ಮೂಲಕ ಮಂಗಳೂರು ವಿ.ವಿ ಕುಖ್ಯಾತಿಗೆ ಒಳಗಾಗಿರುವುದು ಮಂಗಳೂರಿನಂತಹ ವಿದ್ಯಾವಂತ ಜಿಲ್ಲೆಯ ದೌರ್ಭಾಗ್ಯ.

ಇದನ್ನೂ ಓದಿ: ⭕ಉಜಿರೆ: ಬೈಕ್ ಹಾಗೂ ರಿಕ್ಷಾ ನಡುವೆ ಭೀಕರ ಅಪಘಾತ!
ಇದೀಗ ಮತ್ತೊಂದು ಹಗರಣ ಬೆಳಕಿಗೆ ಬಂದಿದ್ದು 2013 ರಿಂದ 2017 ರವರೆಗೆ ರಾಷ್ಟ್ರೀಯ ಉಚ್ಚತ್ತರ್ ಶಿಕ್ಷಾ ಅಭಿಯಾನದ (ರೂಸ 1) ಮೂಲಕ ಬಿಡುಗಡೆಯಾದ 20 ಕೋಟಿ ಹಣದಲ್ಲಿ ಸುಮಾರು ಏಳು ಕೋಟಿ ವೆಚ್ಚದಲ್ಲಿ ಬಾಲಕರ ಹಾಗೂ ಬಾಲಕಿಯರ ಪ್ರತ್ಯೇಕ ವಸತಿ ನಿಲಯವನ್ನು ನಿರ್ಮಾಣ ಮಾಡಲಾಗಿದೆ ಎಂಬ ಸುಳ್ಳು ದಾಖಲೆಯನ್ನು ಮಂಗಳೂರು ವಿ.ವಿ ಆಡಳಿತ ಮಂಡಳಿ ಅಧಿಕೃತವಾಗಿ ದಾಖಲಿಸಿದ್ದು, ಈ ಕುರಿತು ಪರಿಶೀಲನೆಗೆ ಬಂದ ತಜ್ಞರ ಸಮಿತಿ ಮಂಗಳೂರು ವಿವಿಯಲ್ಲಿ ಯಾವುದೇ ಹೊಸ ಹಾಸ್ಟೆಲ್ ನಿರ್ಮಾಣವಾಗದೆ ಇರುವುದನ್ನು ಕಂಡು ದಿಗ್ಬ್ರಮೆಗೊಂಡು ಶಿಕ್ಷಣ ಇಲಾಖೆಯ ಮುಖ್ಯ ಕಾರ್ಯದರ್ಶಿಗೆ ವರದಿಯನ್ನು ನೀಡಿ ದೂರು ದಾಖಲು ಮಾಡಿದ್ದಾರೆ, ಈ ಕುರಿತು ಉತ್ತರಿಸುವಂತೆ ಮಂಗಳೂರು ವಿವಿ ಆಡಳಿತ ಮಂಡಳಿಯ ಅಧಿಕಾರಿಗಳಿಗೆ ಮುಖ್ಯ ಕಾರ್ಯದರ್ಶಿಯಿಂದ ಸಮನ್ಸ್ ನೀಡಲಾಗಿದೆ.
ಈ ಬಗ್ಗೆ ಉಪಕುಲಪತಿಗಳು ವಿಚಾರಣೆಯನ್ನು ಎದುರಿಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದೆ, ಈ ರೀತಿಯಾದಂತಹ ಭ್ರಷ್ಟಾಚಾರದ ಪ್ರಕರಣಗಳು ಮಂಗಳೂರು ವಿ.ವಿಯ ಗೌರವವನ್ನು ಗಣನೀಯವಾಗಿ ಕುಸಿಯುವಂತೆ ಮಾಡಿದೆ.


ಒಂದೆಡೆ ಈ ರೀತಿಯಾದಂತಹ ಭ್ರಷ್ಟಾಚಾರದ ಪ್ರಕರಣಗಳು ಮತ್ತೊಂದೆಡೆ ಆರ್ಥಿಕ ಸಂಕಷ್ಟದ ನೆಪವೊಡ್ಡಿ ಹಲವಾರು ವಿಭಾಗಗಳನ್ನು ಮುಚ್ಚುತ್ತಿರುವ ಮಂಗಳೂರು ವಿವಿ, ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಮತ್ತಷ್ಟು ವಿಭಾಗಗಳನ್ನು ಮುಚ್ಚಿ, ಶುಲ್ಕಗಳನ್ನ ಏರಿಸಿ, ಕ್ಯಾಂಪಸ್ಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸದೆ ಬಡ ವಿದ್ಯಾರ್ಥಿಗಳ ಜೀವನದಲ್ಲಿ ಚೆಲ್ಲಾಟ ಆಡುತ್ತಿದೆ.

ಆದರೆ ಈ ಆರ್ಥಿಕ ಸಂಕಷ್ಟಕ್ಕೆ ಮಂಗಳೂರು ವಿ.ವಿಯಲ್ಲಿ ನಡೆದ ಇಂತಹ ಅನೇಕ ಭ್ರಷ್ಟಾಚಾರದ ಪ್ರಕರಣಗಳೇ ಕಾರಣವಾಗಿದ್ದು ಈ ಬಗ್ಗೆ ಶೀಘ್ರ ಹಾಗೂ ಸಮಗ್ರ ತನಿಖೆ ಮಾಡಬೇಕು ಜೊತೆಗೆ ಮಂಗಳೂರು ವಿವಿಯ ಹಗರಣ ಹಾಗೂ ಪ್ರಸ್ತುತ ಸ್ಥಿತಿಗತಿಯನ್ನು ಗಮನದಲ್ಲಿರಿಸಿಕೊಂಡು ರಾಜ್ಯಪಾಲರ ಮಧ್ಯ ಪ್ರವೇಶಕ್ಕೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆಗ್ರಹಿಸುತ್ತದೆ. ಒಂದು ವೇಳೆ ಈ ಕುರಿತು ತನಿಖೆ ನಡೆಸಲು ಸರ್ಕಾರ ವಿಫಲವಾದರೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ವಿಭಾಗದಾದ್ಯಂತ ತೀವ್ರ ಹೋರಾಟವನ್ನು ಸಂಘಟಿಸುವ ಎಚ್ಚರಿಕೆಯನ್ನು ಈ ಮೂಲಕ ನೀಡುತ್ತಿದೆ ಎಂದು ಎಬಿವಿಪಿ ಮಂಗಳೂರು ಜಿಲ್ಲಾ ಸಂಚಾಲಕರಾದ ಸುವಿತ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

