Mon. Apr 21st, 2025

Pope Francis: ಕ್ಯಾಥೋಲಿಕ್​ ಕ್ರೈಸ್ತ ಧರ್ಮದ ಪರಮೋಚ್ಛ ನಾಯಕ ಪೋಪ್ ಫ್ರಾನ್ಸಿಸ್‌ ನಿಧನ

ವ್ಯಾಟಿಕನ್ ಸಿಟಿ:(ಎ. 21) ಕೆಲ ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ರೋಮನ್ ಕ್ಯಾಥೋಲಿಕ್ ಚರ್ಚ್‌ನ ಮುಖ್ಯಸ್ಥ , ಕ್ರೈಸ್ತ ಧರ್ಮದ ಪರಮೋಚ್ಚ ನಾಯಕ ಪೋಪ್ ಫ್ರಾನ್ಸಿಸ್ ಅವರು ನಿಧನರಾಗಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು. ಪೋಪ್ ಫ್ರಾನ್ಸಿಸ್ ಅವರು ಈಸ್ಟರ್ ಸೋಮವಾರವಾಗಿರುವ ಇಂದು ವ್ಯಾಟಿಕನ್‌ನ ಕಾಸಾ ಸಾಂತಾ ಮಾರ್ಟಾದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.

ವ್ಯಾಟಿಕನ್ ನ್ಯೂಸ್ ಟ್ವಿಟ್ಟರ್‌ ಪೇಜ್ ಈ ವಿಚಾರವನ್ನು ಖಚಿತಪಡಿಸಿದೆ. ಪೋಪ್ ಫ್ರಾನ್ಸಿಸ್ ಅವರು ಈಸ್ಟರ್ ಸೋಮವಾರ, ಏಪ್ರಿಲ್ 21, 2025 ರಂದು ತಮ್ಮ 88 ನೇ ವಯಸ್ಸಿನಲ್ಲಿ ವ್ಯಾಟಿಕನ್‌ನ ಕಾಸಾ ಸಾಂತಾ ಮಾರ್ಟಾದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ ಎಂದು ಅದು ತಿಳಿಸಿದೆ. ಅಸೋಸಿಯೇಟೆಡ್ ಪ್ರೆಸ್ ವರದಿಯ ಪ್ರಕಾರ, ವ್ಯಾಟಿಕನ್‌ನ ಕ್ಯಾಮೆರ್ಲೆಂಗೊ ಕಾರ್ಡಿನಲ್ ಕೆವಿನ್ ಫಾರೆಲ್ ಅವರು ಪೋಪ್ ನಿಧಾನದ ಸುದ್ದಿಯನ್ನು ಘೋಷಣೆ ಮಾಡಿದ್ದಾರೆ. ಪೋಪ್ ಅವರ ನಿಧನದಿಂದ ಜಗತ್ತಿನೆಲ್ಲೆಡೆ ಇರುವ ಕ್ರೈಸ್ತ ಸಮುದಾಯದಲ್ಲಿ ಶೋಕ ಮಡುಗಟ್ಟಿದೆ.

ಪೋಪ್ ಪ್ರಾನ್ಸಿಸ್‌ ನಿಧನಕ್ಕೆ ಜಗತ್ತಿನ ವಿವಿಧ ದೇಶಗಳ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಹಾಗೆಯ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಕೂಡ ಸಂತಾಪ ವ್ಯಕ್ತಪಡಿಸಿದ್ದು, ಪವಿತ್ರ ಪೋಪ್ ಫ್ರಾನ್ಸಿಸ್ ಅವರ ನಿಧನದಿಂದ ತೀವ್ರ ನೋವಾಗಿದೆ. ಈ ದುಃಖದ ಮತ್ತು ಸ್ಮರಣೆಯ ಘಳಿಗೆಯಲ್ಲಿ, ಜಾಗತಿಕ ಕ್ಯಾಥೋಲಿಕ್ ಸಮುದಾಯಕ್ಕೆ ನನ್ನ ಹೃತ್ಪೂರ್ವಕ ಸಂತಾಪಗಳು. ಪೋಪ್ ಫ್ರಾನ್ಸಿಸ್ ಅವರನ್ನು ಪ್ರಪಂಚದಾದ್ಯಂತ ಲಕ್ಷಾಂತರ ಜನರು ಕರುಣೆ, ನಮ್ರತೆ ಮತ್ತು ಆಧ್ಯಾತ್ಮಿಕ ಧೈರ್ಯದ ದೀಪಸ್ತಂಭವಾಗಿ ಯಾವಾಗಲೂ ಸ್ಮರಿಸುತ್ತಾರೆ.

ಚಿಕ್ಕ ವಯಸ್ಸಿನಿಂದಲೂ, ಅವರು ಭಗವಂತ ಕ್ರಿಸ್ತನ ಆದರ್ಶಗಳನ್ನು ಅರಿತುಕೊಳ್ಳಲು ತಮ್ಮನ್ನು ತಾವು ಅರ್ಪಿಸಿಕೊಂಡರು. ಅವರು ಬಡವರು ಮತ್ತು ದೀನದಲಿತರಿಗೆ ಶ್ರದ್ಧೆಯಿಂದ ಸೇವೆ ಸಲ್ಲಿಸಿದರು. ಬಳಲುತ್ತಿರುವವರಿಗೆ, ಅವರು ಭರವಸೆಯ ಮನೋಭಾವವನ್ನು ಬೆಳಗಿಸಿದರು. ಈ ಸಂದರ್ಭದಲ್ಲಿ ನಾನು ಅವರೊಂದಿಗಿನ ನನ್ನ ಭೇಟಿಗಳನ್ನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತೇನೆ ಮತ್ತು ಸಮಗ್ರ ಮತ್ತು ಸರ್ವತೋಮುಖ ಅಭಿವೃದ್ಧಿಗೆ ಅವರ ಬದ್ಧತೆಯಿಂದ ಹೆಚ್ಚು ಪ್ರೇರಿತನಾಗಿದ್ದೆ. ಭಾರತದ ಜನರ ಮೇಲಿನ ಅವರ ವಾತ್ಸಲ್ಯ ಯಾವಾಗಲೂ ಸ್ಮರಿಸಲ್ಪಡುತ್ತದೆ. ಅವರ ಆತ್ಮವು ದೇವರ ಅಪ್ಪುಗೆಯಲ್ಲಿ ಶಾಶ್ವತ ಶಾಂತಿಯನ್ನು ಪಡೆಯಲಿ ಎಂದು ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *