ಮಂಗಳೂರು:(ಎ. 30) ಕುಡುಪಿನಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು 15 ಜನ ಆರೋಪಿಗಳನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ☘ಬೆಳ್ತಂಗಡಿ: ಲಾಯಿಲ ಸೈಂಟ್ ಮೇರಿಸ್ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ರಜತ ಮಹೋತ್ಸವ ಸಂಭ್ರಮ
ದಿನಾಂಕ 27-04-2025 ರಂದು ಸಂಜೆ ಸುಮಾರು 5:30 ಗಂಟೆಗೆ ಮಂಗಳೂರು ನಗರದ ಕುಡುಪು ಭಟ್ರ ಕಲ್ಲುರ್ಟಿ
ದೈವಸ್ಥಾನದ ಸಮೀಪದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾದ ಬಗ್ಗೆ, ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ ಲಭಿಸಿದಂತೆ, ಸ್ಥಳೀಯ ಪೊಲೀಸರು ಮತ್ತು ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಳಿಕ ಅಪರಾಧ ಸ್ಥಳ ಪರಿಶೀಲನಾ ತಜ್ಞರು ಹಾಗೂ ಮೊಬೈಲ್ ಫೋರೆನ್ಸಿಕ್ ತಂಡಗಳನ್ನು ಸ್ಥಳಕ್ಕೆ ಕರೆಯಲಾಯಿತು. ಸ್ಥಳ ಪರಿಶೀಲನೆ ವೇಳೆ ಮೃತದೇಹದ ಮೈಮೇಲೆ ಸ್ಪಷ್ಟವಾದ ಹಾಗೂ ಗಂಭೀರ ಗಾಯಗಳು ಕಂಡುಬಾರದ ಕಾರಣ, ಅಪರಾಧ ಸ್ಥಳ ಪರಿಶೀಲನಾ ತಜ್ಞರು ಮತ್ತು ಪೊರೆನ್ಸಿಕ್ ತಂಡಗಳು ಶವ ಪರೀಕ್ಷೆ ನಡೆಸುವಂತೆ ಶಿಫಾರಸು ಮಾಡಿದರು.
ಅದರಂತೆ, ಪ್ರಾಥಮಿಕವಾಗಿ, ಅಪರಿಚಿತ ಮೃತದೇಹ ಕಂಡುಬಂದ ಬಗ್ಗೆ ಸ್ವೀಕೃತ ದೂರಿನಂತೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅನುಮಾನಾಸ್ಪದ ಅಸ್ವಾಭಾವಿಕ ಸಾವು ಪ್ರಕರಣವನ್ನು ದಾಖಲಿಸಲಾಗಿತ್ತು ಹಾಗೂ ಮೃತದೇಹವನ್ನು ಮರಣೋತ್ತರ ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವ ಸಲುವಾಗಿ ಮಂಗಳೂರು ಜಿಲ್ಲಾ ವೆನ್‌ಲಾಕ್ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಯಿತು. ಬಳಿಕ ಮೃತನ ಗುರುತು ಪತ್ತೆ ಹಚ್ಚುವ ಸಲುವಾಗಿ, ಮೃತನ ಫೋಟೋಗಳನ್ನು ವ್ಯಾಪಕವಾಗಿ ಹಂಚಲಾಗಿತ್ತು. ಘಟನೆಯ ಸಮಯದಲ್ಲಿ ಸ್ಥಳದಲ್ಲಿದ್ದ ಸಾಕ್ಷಿದಾರರು ಮತ್ತು ಅನುಮಾನಿತ ವ್ಯಕ್ತಿಗಳನ್ನು ವಿಚಾರಣೆ ಮಾಡುವ ಮತ್ತು ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳು ಹಾಗೂ ಮೊಬೈಲ್ ಡೇಟಾ ಸಂಗ್ರಹಿಸಿ ವಿಶ್ಲೇಷಿಸಲು ಹಲವು ತಂಡಗಳನ್ನು ರಚಿಸಲಾಯಿತು.


ತನಿಖೆಯಲ್ಲಿ ಲಭ್ಯವಾದ ಮಾಹಿತಿ ಹಾಗೂ ಸ್ಥಳೀಯ ವ್ಯಕ್ತಿಗಳ ಭಾಗವಹಿಸುವಿಕೆಯ ಬಗ್ಗೆ ಹೆಚ್ಚುತ್ತಿರುವ ಅನುಮಾನಗಳ ಆಧಾರದಲ್ಲಿ ದಿನಾಂಕ 28-04-2025ರಂದು ಅಪರಿಚಿತ ಮೃತದೇಹದ ಶವ ಪರೀಕ್ಷೆ ನಡೆಸಲಾಯಿತು. ಮರಣೋತ್ತರ ವೈದ್ಯಕೀಯ ಪರೀಕ್ಷೆ ನಡೆಸಿದ ವೈದ್ಯರು ನೀಡಿದ ಪ್ರಾಥಮಿಕ ವರದಿ ಪ್ರಕಾರ, ಮೃತನ ಬೆನ್ನು ಭಾಗದಲ್ಲಿ ಬಹಳಷ್ಟು ಬಲವಾದ ಹೊಡೆತದ ಗಾಯಗಳ ಕಾರಣದಿಂದ ಉಂಟಾದ ರಕ್ತಸ್ರಾವ, ಶಾಕ್ ಮತ್ತು ಸೂಕ್ತ ಸಮಯದಲ್ಲಿ ಸರಿಯಾದ ಚಿಕಿತ್ಸೆ ಸಿಗದಿರುವುದರಿಂದ ಮರಣ ಸಂಭವಿಸಿರುವುದು ಕಂಡುಬಂದಿದೆ.
ತನಿಖೆಯಲ್ಲಿ ತಿಳಿದುಬಂದಂತೆ, ದಿನಾಂಕ 27-04-2025 ರಂದು ಮಧ್ಯಾಹ್ನ ಸುಮಾರು 3:00 ಗಂಟೆಗೆ ಭಟ್ರ ಕಲ್ಲುರ್ಟಿ ದೈವಸ್ಥಾನದ ಬಳಿ ಮೈದಾನದಲ್ಲಿ ನಡೆಯುತ್ತಿದ್ದ ಕ್ರಿಕೆಟ್ ಪಂದ್ಯಾವಳಿಯ ಸಮಯದಲ್ಲಿ, ಸದ್ರಿ ಅಪರಿಚಿತ ವ್ಯಕ್ತಿಗೆ ಕೆಲವರು ಗುಂಪು ಸೇರಿ ಕೈಯಿಂದ ಮತ್ತು ಕಟ್ಟಿಗೆಯಿಂದ ಹೊಡೆದು, ಕಾಲಿನಿಂದ ತುಳಿದು ಹಲ್ಲೆ ನಡೆಸಿದ್ದು, ಈ ಸಮಯ ಕೆಲವರು ತಡೆಯಲು ಯತ್ನಿಸಿದರೂ, ಆತನ ಮೇಲೆ ನಿರಂತರ ಹಲ್ಲೆ ನಡೆಸಿದ ಕಾರಣ ಅಪರಿಚಿತ ವ್ಯಕ್ತಿಯು ಮೃತಪಟ್ಟಿರುವುದು ಕಂಡುಬಂದಿರುತ್ತದೆ. ಪ್ರಕರಣಕ್ಕೆ ಸಂಬಂಧಿಸಿ 15 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.


