ಮಂಗಳೂರು: ಹಿಂದೂ ಕಾರ್ಯಕರ್ತ, ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ 8 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಹಿಂದೂ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದ ಸುಹಾಸ್ ಶೆಟ್ಟಿ ಅವರ ಹತ್ಯೆ ನಗರದಲ್ಲಿ ಸಂಚಲನ ಮೂಡಿಸಿತ್ತು. ತಡರಾತ್ರಿ ನಡೆದ ಈ ಬರ್ಬರ ಕೃತ್ಯದ ತನಿಖೆ ಚುರುಕುಗೊಳಿಸಿದ್ದ ಪೊಲೀಸರು, ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಎಂಟು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಬಂಧಿತ ಆರೋಪಿಗಳ ವಿವರಗಳನ್ನು ಪೊಲೀಸರು ಬಿಡುಗಡೆ ಮಾಡಿದ್ದು. ಅವು ಈ ಕೆಳಗಿನಂತಿವೆ
ಅಬ್ದುಲ್ ಸಫ್ವಾನ್ (29): ಪೇಜಾವರ ನಿವಾಸಿ. ಪ್ರಸ್ತುತ ಬಜಪೆ ಕಿನ್ನಿಪದವಿನಲ್ಲಿ ವಾಸ. ವೃತ್ತಿಯಲ್ಲಿ ಡ್ರೈವರ್.
ನಿಯಾಜ್ (28): ಬಗ್ಗೆ ಶಾಂತಿಗುಡ್ಡೆ ನಿವಾಸಿ, ಮೇಸ್ತ್ರಿ ಹೆಲ್ಪರ್ ಕೆಲಸ.
ಮೊಹಮ್ಮದ್ ಮುಝಮಿಲ್ (32): ಕೆಂಜಾರು ನಿವಾಸಿ, ಹಿಂದೆ ಸೌದಿಯಲ್ಲಿ ಸೇಲ್ಸ್ ಮ್ಯಾನ್ ಆಗಿದ್ದ, ಇತ್ತೀಚೆಗೆ ವಿವಾಹವಾಗಿದ್ದ. ಈತನ ಮೇಲೆ ಈ ಹಿಂದೆ ಪಣಂಬೂರು ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿತ್ತು.
ಕಲಂದರ್ ಶಾಫಿ (31): ಕಳವಾರು ನಿವಾಸಿ, ಬೆಂಗಳೂರಿನಲ್ಲಿ ಸೇಲ್ಸ್ ಮ್ಯಾನ್. ಈತನ ಮೇಲೆ ಸುರತ್ಕಲ್ ಠಾಣೆಯಲ್ಲಿ NDPS ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ರಂಜಿತ್ (19): ಚಿಕ್ಕಮಗಳೂರು ಜಿಲ್ಲೆಯ ಕಳಸ ಮೂಲದವ, ಆದಿ ಕರ್ನಾಟಕ (SC) ಸಮುದಾಯಕ್ಕೆ ಸೇರಿದವ, ವೃತ್ತಿಯಲ್ಲಿ ಡ್ರೈವರ್. ಕೃತ್ಯಕ್ಕೆ ಬಳಸಿದ ಲಾಂಗ್ (ಮಚ್ಚು) ಅನ್ನು ಕಾರಿನಿಂದ ತೆಗೆದುಕೊಟ್ಟ ಆರೋಪ ಈತನ ಮೇಲಿದೆ.
ನಾಗರಾಜ್ (20): ಚಿಕ್ಕಮಗಳೂರು ಜಿಲ್ಲೆಯ ಕಳಸ ಮೂಲದವ, ಒಕ್ಕಲಿಗ ಗೌಡ ಸಮುದಾಯದವ, ಶಾಮಿಯಾನ ಅಂಗಡಿಯಲ್ಲಿ ಕೆಲಸ ಮಾಡುತ್ತಾನೆ.
ಮೊಹಮ್ಮದ್ ರಿಜ್ವಾನ್ (28): ಜೋಕಟ್ಟೆ ನಿವಾಸಿ. ಹಿಂದೆ ಸೌದಿ ಅರೇಬಿಯಾದಲ್ಲಿ ಆಯಿಲ್ ಪ್ಲಾಂಟ್‌ನಲ್ಲಿ ಕೆಲಸ ಮಾಡುತ್ತಿದ್ದ.
ಅದಿಲ್ ಮೆಹರೂಫ್: (ಈತನ ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ).

ಬಂಧಿತರಲ್ಲಿ ಮಂಗಳೂರು ಸ್ಥಳೀಯರು ಹಾಗೂ ಚಿಕ್ಕಮಗಳೂರು ಜಿಲ್ಲೆಯ ಯುವಕರೂ ಸೇರಿದ್ದಾರೆ. ಕೆಲವರ ಮೇಲೆ ಈ ಹಿಂದೆಯೇ ಕ್ರಿಮಿನಲ್ ಪ್ರಕರಣಗಳು ದಾಖಲಾಗಿರುವುದು ತನಿಖೆಯಿಂದ ತಿಳಿದುಬಂದಿದೆ.
ಪೊಲೀಸರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆಯುವ ಸಾಧ್ಯತೆಯಿದೆ. ಕೊಲೆಯ ಹಿಂದಿನ ನಿಖರ ಕಾರಣ, ಸಂಚು ಹಾಗೂ ಇದರಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ತನಿಖೆ ಮುಂದುವರೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.


