ಉಜಿರೆ:(ಮೇ.7) ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಡಾ. ನಾಯಕ್ಸ್ ಫರ್ಟಿಲಿಟಿ ಕ್ಲಿನಿಕ್ ಮತ್ತು ಐವಿಎಫ್ ಸೆಂಟರ್ ಸಹಯೋಗದಲ್ಲಿ ಮೇ. 7ರಂದು ಉಚಿತ ಸ್ತ್ರೀರೋಗ ಮತ್ತು ಬಂಜೆತನ ತಪಾಸಣಾ ಶಿಬಿರ ನಡೆಯಿತು.


ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ.ಜನಾರ್ದನ್ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮತ್ತು ಹೇಮಾವತಿ ವಿ. ಹೆಗ್ಗಡೆಯವರ ಮಾರ್ಗದರ್ಶನದಂತೆ ಹಾಗೂ ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಇವರ ಸಹಕಾರದಲ್ಲಿ ಈ ಆಸ್ಪತ್ರೆಯಲ್ಲಿ ಹಲವಾರು ಉಚಿತ ವೈದ್ಯಕೀಯ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ನೂರಾರು ಉಚಿತ ಶಿಬಿರಗಳಿಂದ ಜನಮನ ಗೆದ್ದಿರುವ ನಮ್ಮ ಆಸ್ಪತ್ರೆಯಲ್ಲಿ ಈ ದಿನ ವಿಶೇಷವಾಗಿ ಮಹಿಳೆಯರ ಆರೋಗ್ಯ ಸಮಸ್ಯೆಗಳ ನಿವಾರಣೆಗಾಗಿ ಉಚಿತ ಸ್ತ್ರೀರೋಗ ಮತ್ತು ಬಂಜೆತನ ತಪಾಸಣಾ ಶಿಬಿರ ನಡೆಸಲಾಗುತ್ತಿದೆ ಎಂದರು.
ಕೆನರಾ ಬ್ಯಾಂಕ್ ಡಿ.ಜಿ.ಎಂ, ನಾಗಪುರ ಇದರ ರೀಜನಲ್ ಹೆಡ್ ಆಗಿರುವ ಸುರೇಂದ್ರಬಾಬು ಇವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಗ್ರಾಮೀಣ ಭಾಗದಲ್ಲಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಹೈಟೆಕ್ ಸೌಲಭ್ಯವಿರುವ ಆಸ್ಪತ್ರೆ ತೆರೆದು ವೈದ್ಯಕೀಯ ಸೇವೆ ಒದಗಿಸಿರುವ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಕಾರ್ಯ ನಿಜವಾಗಲೂ ಶ್ಲಾಘನೀಯ. ಎಲ್ಲರೂ ಈ ಆಸ್ಪತ್ರೆಯ ಮತ್ತು ಇಂತಹ ಶಿಬಿರಗಳ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.

ಡಾ. ನಾಯಕ್ಸ್ ಫರ್ಟಿಲಿಟಿ ಕ್ಲಿನಿಕ್ ಮತ್ತು ಐವಿಎಫ್ ಸೆಂಟರ್ ಸಂತಾನೋತ್ಪತ್ತಿ ಔಷಧ ಕನ್ಸಲ್ಟೆಂಟ್ ಆಗಿರುವ ಡಾ. ಪ್ರಮೋದ ಲಕ್ಷ್ಮಣ್ ಮಾತನಾಡಿ, ಪೂಜ್ಯ ಡಾ. ಡಿ.ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ವೈದ್ಯಕೀಯ ಸೇವೆ ನೀಡುತ್ತಿರುವ ಗ್ರಾಮೀಣ ಭಾಗದ ಈ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುವುದು ನನ್ನ ಸೌಭಾಗ್ಯ ಎಂದರು.

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ. ಸ್ವರ್ಣಲತಾ ಇವರು ಮಾತನಾಡಿ, ಗರ್ಭಕಂಠದ ಕ್ಯಾನ್ಸರ್ ಮತ್ತು ಸ್ತನದ ಕ್ಯಾನ್ಸರ್ ಇತ್ಯಾದಿಗಳನ್ನು ಪ್ರಾರಂಭಿಕ ಹಂತದಲ್ಲಿ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ಪಡೆದುಕೊಂಡರೆ ರೋಗಿಗಳು ಗುಣಮುಖರಾಗುತ್ತಾರೆ. ಇದೇ ಉದ್ದೇಶದಿಂದ ನಡೆಸಲ್ಪಡುವ ಈ ಶಿಬಿರದ ಪ್ರಯೋಜನವನ್ನು ಎಲ್ಲರೂ ಪಡೆದುಕೊಳ್ಳುವಂತೆ ವಿನಂತಿಸಿದರು.

ಸ್ಕ್ಯಾನಿಂಗ್ ತಜ್ಞರಾದ ಡಾ| ಮಹೇಶ್, ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ದೇವೇಂದ್ರ ಕುಮಾರ್.ಪಿ, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ. ಪ್ರಿಯಾಂಕ, ಡಾ. ಅನ್ವಿತಾ ರಾವ್ ಉಪಸ್ಥಿತರಿದ್ದು, ಶಿಬಿರಕ್ಕೆ ಶುಭ ಹಾರೈಸಿದರು.
100ಕ್ಕೂ ಅಧಿಕ ಮಂದಿ ಶಿಬಿರದ ಸದುಪಯೋಗ ಪಡೆದುಕೊಂಡರು. ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಸುಮಂತ್ ರೈ ಕಾರ್ಯಕ್ರಮ ಸಂಯೋಜಿಸಿ, ಸಂಪರ್ಕ ಅಧಿಕಾರಿ ಚಿದಾನಂದ ಕಾರ್ಯಕ್ರಮ ನಡೆಸಿಕೊಟ್ಟರು.

