Rakesh Poojary: ಕನ್ನಡ ಕಿರುತೆರೆ ಲೋಕಕ್ಕೆ ಅಚ್ಚರಿಯ ಸುದ್ದಿಯೊಂದು ಬೆಳ್ಳಂಬೆಳಗ್ಗೆ ಬಡಿದಪ್ಪಳಿಸಿದೆ. ಝೀ ಕನ್ನಡ ವಾಹಿನಿಯ ಮೂಲಕ ಕರ್ನಾಟಕದ ಜನರ ಮನೆಮನಸ್ಸಿಗೆ ತಲುಪಿದ್ದ, ಕಾಮಿಡಿ ಕಿಲಾಡಿ ಹಾಸ್ಯ ಕಾರ್ಯಕ್ರಮದ ಸೀಸನ್ 3ರ ವಿನ್ನರ್ ರಾಕೇಶ್ ಪೂಜಾರಿ ದಿಢೀರ್ ಸಾವನ್ನಪ್ಪಿದ್ದಾರೆ.


ನಿನ್ನೆಯ ತನಕವೂ ಆರೋಗ್ಯವಾಗಿ ಗಟ್ಟಿಮುಟ್ಟಾಗಿದ್ದ ಕಲಾವಿದ ರಾಕೇಶ್ ಪೂಜಾರಿ ಅವರಿಗೆ ಯಾವುದೇ ಅನಾರೋಗ್ಯ ಇರಲಿಲ್ಲ. ಅವರ ಆಪ್ತರು ನೀಡಿರುವ ಮಾಹಿತಿ ಪ್ರಕಾರ ನಿನ್ನೆ ಊರಲ್ಲಿ ನಡೆದ ಮದುವೆಯ ಮೆಹಂದಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಅಲ್ಲಿ ಡ್ಯಾನ್ಸ್ ಮಾಡಿ ಎಲ್ಲರ ಜೊತೆ ಖುಷಿಯಿಂದ ಕಾಲ ಕಳೆದಿದ್ದರು ಎನ್ನಲಾಗಿದೆ. ರಾಕೇಶ್ ನಿಧನ ಸುದ್ದಿ ಕನ್ನಡ ಕಿರುತೆರೆ ಲೋಕ, ತುಳು ರಂಗಭೂಮಿ ಕಲಾವಿದರಿಗೂ ಅಚ್ಚರಿ ತಂದಿದೆ.


ಕಾಮಿಡಿ ಕಿಲಾಡಿ ವಿನ್ನರ್ ರಾಕೇಶ್ ಪೂಜಾರಿ ಅವರ ನಿಧನದಿಂದ ಎಲ್ಲರಿಗೂ ಗರಬಡಿದಂತೆ ಆಗಿದ್ದು, ಅದೇ ಕಾರ್ಯಕ್ರಮದಲ್ಲಿ ಜಡ್ಜ್ ಆಗಿದ್ದ ನಟಿ ರಕ್ಷಿತಾ ಪ್ರೇಮ್ ಅವರು ಕೂಡ ‘ಮಿಸ್ ಯೂ ಮಗನೇ.. ನಾನು ಇನ್ಯಾವತ್ತೂ ನಿನ್ನ ಜೊತೆ ಮಾತನಾಡಲು ಆಗಲ್ಲ, ಕಾಮಿಡಿ ಕಿಲಾಡಿ ನನ್ನ ಹೃದಯಕ್ಕೆ ಹತ್ತಿರವಾದ ಕಾರ್ಯಕ್ರಮ. ನೀನು ಅದರಲ್ಲಿ ಒಂದು ಶಕ್ತಿ ಆಗಿದ್ದೆ. ನಿನ್ನಂತಹ ಅದ್ಭುತ ವ್ಯಕ್ತಿ ನಮ್ಮ ಹೃದಯಲ್ಲಿ ನೆಲೆಸಿರುತ್ತಾರೆ ಎಂದು ಪೋಸ್ಟ್ ಮಾಡಿದ್ದಾರೆ.


ಮೃತ ರಾಕೇಶ್ ಪೂಜಾರಿ ಅವರ ಆಪ್ತರೂ ಹೇಳುವ ಪ್ರಕಾರ, ರಾಕೇಶ್ ಪೂಜಾರಿ ಆರೋಗ್ಯವಾಗಿದ್ದರು. ನಿನ್ನೆ ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ಬಳಿಕ ಅವರಿಗೆ ದಿಢೀರ್ ಬಿಪಿ ಲೋ ಆಗಿದೆ ಎಂದು ತಿಳಿದು ಬಂದಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಯಿತಾದರೂ ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ನಿಧನ ಹೊಂದಿದರು ಎಂದು ವೈದ್ಯರು ಘೋಷಿಸಿದರು ಎಂದು ತಿಳಿದು ಬಂದಿದೆ.

