ಬೆಳ್ತಂಗಡಿ:(ಮೇ.13) ಮೊದಲ ಗಂಡನ ಜೊತೆಗಿನ ವಿಚ್ಛೇದನ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವಾಗಲೇ ಮಹಿಳೆ ಗುಟ್ಟಾಗಿ ಎರಡನೇ ಮದುವೆಯಾಗಿದ್ದು ಮಾತ್ರವಲ್ಲದೇ ಮೊದಲ ಗಂಡನಿಂದ ಲಕ್ಷಾಂತರ ರೂಪಾಯಿ ಜೀವನಾಂಶ ಕೇಳಿದ ಪತ್ನಿಗೆ ಮಂಗಳೂರಿನ ಕುಟುಂಬ ನ್ಯಾಯಾಲಯವು ಶಿಕ್ಷೆಯನ್ನು ನೀಡಿದೆ.

ಮಹಿಳೆಯ ಜೀವನಾಂಶದ ಹಕ್ಕನ್ನು ರದ್ದು ಮಾಡಲಾಗಿದ್ದು, 30,000 ರೂ. ದಂಡವನ್ನು ಕೋರ್ಟ್ ವಿಧಿಸಿ ಆದೇಶ ಹೊರಡಿಸಿರುವ ಘಟನೆ ನಡೆದಿದೆ.

2018 ರಲ್ಲಿ ಪಣಕಜಿ ನಿವಾಸಿ ಉದಯ ನಾಯಕ್ ಮತ್ತು ಮಂಗಳೂರಿನ ಮೇರಿಹಿಲ್ನ ಅನಿತಾ ನಾಯಕ್ ಇವರಿಬ್ಬರು ಮದುವೆಯಾಗಿದ್ದು, ನಂತರ ಇವರ ವೈವಾಹಿಕ ಜೀವನದಲ್ಲಿ ವೈಮನಸ್ಸು ಉಂಟಾಗಿತ್ತು. ಪತಿ ಉದಯ ನಾಯಕ್ ವಿಚ್ಛೇದನಕ್ಕೆಂದು ಕೋರ್ಟ್ ಮೆಟ್ಟಿಲೇರಿದ್ದರು.

ಇದರ ಮಧ್ಯದಲ್ಲಿಯೇ ವಿಚ್ಛೇದನ ಪ್ರಕ್ರಿಯೆ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿರುವಾಗಲೇ, ಪತ್ನಿ ಅನಿತಾ ಯಾರಿಗೂ ತಿಳಿಯದೆ ಇನ್ನೊಂದು ಮದುವೆಯಾಗಿದ್ದಾರೆ. ನಂತರ ಮೊದಲ ಪತಿ ಉದಯ ನಾಯಕ್‌ನಿಂದ ಪ್ರತಿ ತಿಂಗಳು ರೂ.60000 ಜೀವನಾಂಶ, ಜೊತೆಗೆ 3 ಕೋಟಿ ರೂಪಾಯಿ ಪರಿಹಾರಕ್ಕೆ ನ್ಯಾಯಾಲಯದಲ್ಲಿ ದಾವೆ ಹಾಕಿದ್ದಾರೆ.

ಆದರೆ ಅದ್ಹೇಗೋ ಪತಿ ಉದಯ ನಾಯಕ್‌ಗೆ ಪತ್ನಿಯ ಎರಡನೇ ಮದುವೆ ವಿಷಯ ಗೊತ್ತಾಗಿದೆ. ಇದನ್ನು ಕೂಡಲೇ ಅವರು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ತನಿಖೆಯಲ್ಲಿ ಅನಿತಾ ಅವರು ಕಾನೂನುಬದ್ಧ ವಿವಾಹ ಚಾಲ್ತಿಯಲ್ಲಿರುವ ಸಂದರ್ಭದಲ್ಲಿಯೇ ಸುಳ್ಳು ಅಫಿಡವಿಟ್ ಸಲ್ಲಿಸಿ ಎರಡನೇ ಮದುವೆಯಾಗಿರುವುದು ಸಾಬೀತುಗೊಂಡಿದೆ.

ನ್ಯಾಯಾಲಯದ ದಾರಿತಪ್ಪಿಸಲು ಪ್ರಯತ್ನ ಪಟ್ಟ ಅನಿತಾ ಅವರ ನಡೆಯನ್ನು ತೀವ್ರ ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯವು ಆಕೆಯ ಎಲ್ಲಾ ಬೇಡಿಕೆಯನ್ನು ನಿರ್ದಾಕ್ಷಿಣ್ಯವಾಗಿ ತಿರಸ್ಕರಿಸಿದೆ. ಜೀವನಾಂಶ ಪಡೆಯುವ ಹಕ್ಕನ್ನು ರದ್ದುಗೊಳಿಸಿದೆ. ಹಾಗೂ ಸತ್ಯವನ್ನು ಮರೆಮಾಚಿ, ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿದ ಕಾರಣಕ್ಕೆ ರೂ.30000 ದಂಡ ವಿಧಿಸಿ ಖಡಕ್ ಆದೇಶ ಹೊರಡಿಸಿದೆ.

