Wed. Jul 2nd, 2025

Ujire: ಉಜಿರೆಯ ಬೆನಕ ಆಸ್ಪತ್ರೆಯಲ್ಲಿ ಅಂತರಾಷ್ಟ್ರೀಯ ದಾದಿಯರ ದಿನಾಚರಣೆ

ಉಜಿರೆ:(ಮೇ.13) ಅಂತರಾಷ್ಟ್ರೀಯ ದಾದಿಯರ ದಿವಸವನ್ನು ಪ್ರತಿ ವರ್ಷ ಮೇ 12 ನೇ ದಿನಾಂಕದಂದು ಜಗತ್ತು ಕಂಡ ಅತ್ಯುತ್ತಮ ದಾದಿ ಫ್ಲೋರೆನ್ಸ್ ನೈಟಿಂಗೇಲ್ ಸ್ಮರಣಾರ್ಥ ಆಚರಿಸಿ ಅವರನ್ನು ನೆನಪಿಸಿಕೊಳ್ಳುವುದು ವೈದ್ಯಕೀಯ ಕ್ಷೇತ್ರದ ಪರಂಪರೆ. ಅದೇ ರೀತಿ ಪ್ರತಿ ವರ್ಷ ಉಜಿರೆ ಬೆನಕ ಸೆಂಟರ್ (NABH ಪುರಸ್ಕೃತ ) ನಲ್ಲಿ ದಾದಿಯರ ದಿನಾಚರಣೆ ನಡೆಸಿಕೊಂಡು ಬರುತ್ತಿದ್ದು,

ಈ ವರ್ಷ ನಡೆದ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಗೋಪಾಲಕೃಷ್ಣ ರವರು ದೇಶ ಕಾಯುವ ಸೈನಿಕರು ಹೇಗೆ ಕಾರ್ಯನಿರ್ವಹಿಸುತ್ತಾರೋ ಹಾಗೆಯೇ ದೇಹ ಕಾಯುವವರು ನಮ್ಮ ದಾದಿಯರು ಎಂದು ಅಭಿಪ್ರಾಯಪಟ್ಟರು ಮತ್ತು ದಾದಿಯರು ವೈದ್ಯಕೀಯ ಕ್ಷೇತ್ರದ ಆಧಾರ ಸ್ತಂಭ ಎಂದು ಅವರ ಸೇವೆಯನ್ನು ಶ್ಲಾಘಿಸಿದರು.


ಅತಿಥಿಯಾಗಿ ಆಗಮಿಸಿದ ಹಿರಿಯ ದಾದಿ ಮತ್ತು ನರ್ಸಿಂಗ್ ಕಾಲೇಜುಗಳಲ್ಲಿ ಪ್ರಬೋಧಕರಾಗಿ ಮತ್ತು ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ, ಪ್ರಸ್ತುತ ವಿಶ್ರಾಂತ ಜೀವನ ಸಾಗಿಸುತ್ತಿರುವ ಶ್ರೀಮತಿ ಗುಣವತಿಯವರು ಮಾತನಾಡುತ್ತ ದಾದಿಯರ ಕೆಲಸವೆಂದರೆ ದೇವರ ಪೂಜೆ ಮಾಡಿದಂತೆ, ಅತ್ಯಂತ ಪವಿತ್ರ ವಾದ ಮತ್ತು ನಿಜವಾದ ಅರ್ಥದಲ್ಲಿ ಸೇವೆ ಎಂದು ತನ್ನ 31ವರ್ಷಗಳ ಅನುಭವಗಳನ್ನು ಸವಿಸ್ತಾರವಾಗಿ ತಿಳಿಸಿದರು.

ದಾದಿಯರ ದಿನಾಚರಣೆಯ ಪ್ರಸ್ತುತಿ ಮತ್ತು ಮಾಹಿತಿಯನ್ನು ಹಿರಿಯ ಸಿಸ್ಟರ್ ಶ್ರೀಮತಿ ಉಷಾ ಗೌಡ ವಿವರಿಸಿದರು. ಎಲ್ಲ ದಾದಿಯರಿಗೂ ನರ್ಸಿಂಗ್ ಸುಪರಿಟೆಂಡೆಂಟ್ ಸಿಸ್ಟೆರ್ ವಸಂತ ಕುಮಾರಿಯವರು ಕರ್ತವ್ಯದ ಪ್ರತಿಜ್ಞಾ ವಿಧಿ ಬೋಧಿಸಿದರು. ದಾದಿಯರ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಸ್ಪರ್ಧೆ ಮತ್ತು ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಣೆ ಮಾಡಲಾಯಿತು . ಕಾರ್ಯಕ್ರಮದ ಕೊನೆಯಲ್ಲಿ ಡಾ. ಭಾರತಿ ಜಿ. ಕೆ ಇವರು ಧನ್ಯದಾದ ಅರ್ಪಿಸಿದರು.

Leave a Reply

Your email address will not be published. Required fields are marked *