Thu. May 15th, 2025

Thekkatte: ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಯತ್ನ – ತಂದೆ, ಮಗ ಸಾವು – ತಾಯಿ ಸ್ಥಿತಿ ಗಂಭೀರ

ತೆಕ್ಕಟ್ಟೆ:(ಮೇ.15) ಒಂದೇ ಕುಟುಂಬದ ಮೂವರು ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕುಂದಾಪುರ ತಾಲೂಕಿನ ತೆಕ್ಕಟ್ಟೆ ಮೀನು ಮಾರುಕಟ್ಟೆ ಸಮೀಪ ನಡೆದಿದೆ. ಘಟನೆಯಲ್ಲಿ ತಂದೆ, ಮಗ ಸಾವನ್ನಪ್ಪಿ ತಾಯಿ ಬದುಕುಳಿದಿದ್ದಾರೆ.

ಇದನ್ನೂ ಓದಿ: ⭕ರಾಮನಗರ: ರಾಮನಗರದಲ್ಲಿ ಅಮಾನುಷ ಕೃತ್ಯ

ಮೃತರನ್ನು ಮಾಧವ ದೇವಾಡಿಗ (55), ಪ್ರಸಾದ್ ದೇವಾಡಿಗ (22) ಎಂದು ಗುರುತಿಸಲಾಗಿದೆ.

ತಾಯಿ ತಾರಾ ದೇವಾಡಿಗ ಅವರನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಲಾಗಿದೆ. ಮೂಲತಃ ಕುಂದಾಪುರದವರಾದ ಇವರು ತೆಕ್ಕಟ್ಟೆ ಮೀನು ಮಾರುಕಟ್ಟೆ ಸಮೀಪ ಶಂಕರ್ ಶೆಟ್ಟಿ ಅವರ ಕಟ್ಟಡದಲ್ಲಿ ಸುಮಾರು ಏಳು ವರ್ಷದಿಂದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.


ತಂದೆ ಮತ್ತು ಮಗ ಕುಂದಾಪುರ ರಿಲಯನ್ಸ್ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿದ್ದು, ತಾಯಿ ಕುಂಭಾಸಿ ಚಂಡಿಕಾ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಅಡುಗೆ ಕೆಲಸದ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.ಗುರುವಾರ ಬೆಳಿಗ್ಗೆ 6 ಗಂಟೆ ಸುಮಾರಿಗೆ ಪಕ್ಕದ ಮನೆಯ ಮಹಿಳೆ ರಂಗೋಲಿ ಹಾಕಲೆಂದು ಮನೆಯಿಂದ ಹೊರಗಡೆ ಬಂದಾಗ ಮನೆಯ ಎದುರುಗಡೆ ಇದ್ದ ಬಾವಿಯಲ್ಲಿ ಕಿರುಚುವ ಶಬ್ದ ಕೇಳಿ ಬಾವಿಯಲ್ಲಿ ಇಣುಕಿ ನೋಡುವಾಗ ಮಹಿಳೆ ಬಾವಿಯಲ್ಲಿ ಒದ್ದಾಡುತ್ತಿರುವುದನ್ನು ಕಂಡು ಅಕ್ಕ ಪಕ್ಕದವರನ್ನು ಕರೆದು ತಕ್ಷಣ ಮಹಿಳೆಯನ್ನು ರಕ್ಷಿಸಲಾಯಿತು.


ಅಷ್ಟರಲ್ಲಿ ಪತಿ, ಮತ್ತು ಮಗ ಮೃತಪಟ್ಟಿರುತ್ತಾರೆ. ಅಗ್ನಿ ಶಾಮಕದಳ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಮೃತ ದೇಹಗಳನ್ನು ಬಾವಿಯಿಂದ ಹೊರಗೆ ತೆಗೆದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಕೋಟ ಠಾಣೆ ಪಿಎಸ್ಐ ರಾಘವೇಂದ್ರ ಸಿ. ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕುಂದಾಪುರಕ್ಕೆ ಸಾಗಿಸಲಾಗಿದೆ ಎಂದು ತಿಳಿದು ಬಂದಿದೆ.
ಕೋಟ ಜೀವನ್ ಮಿತ್ರ ನಾಗರಾಜ್ ಪುತ್ರನ್ ಮೃತದೇಹ ಸಾಗಿಸುವಲ್ಲಿ ಸಹಕರಿಸಿದರು. ತೆಕ್ಕಟ್ಟೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಕೋಟ ಠಾಣಾ ಸಿಬ್ಬಂದಿಗಳು ಹಾಗೂ ಅಗ್ನಿಶಾಮಕ ದಳದವರು ಇದ್ದರು.

Leave a Reply

Your email address will not be published. Required fields are marked *