Fri. May 16th, 2025

Ujire: ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದಲ್ಲಿ “ಶರಸೇತು ಬಂಧನ” ಹರಿಕಥೆ ಪ್ರಸ್ತುತಿ

ಉಜಿರೆ, (ಮೇ.16): ವರ್ತಮಾನದ ಅಗತ್ಯಗಳಿಗೆ ಅನುಗುಣವಾಗಿ ವಿನೂತನ ಕಲಾತ್ಮಕ ಆಯಾಮದೊಂದಿಗೆ ಒಳಿತಿನ ಮಾದರಿಗಳ ಪರವಾದ ನೀತಿ ಪ್ರಜ್ಞೆಯನ್ನು ದಾಟಿಸುವ ಶಕ್ತಿ ಜನಪದೀಯ ಕಲಾಪ್ರಕಾರ ಹರಿಕಥೆಗೆ ಇದೆ ಎಂದು ಹರಿಕಥೆ ಕಲಾವಿದ, ಹಿರಿಯ ಪತ್ರಕರ್ತ ಶೇಣಿ ಮುರಳಿ ಅಭಿಪ್ರಾಯಪಟ್ಟರು.

ಇದನ್ನೂ ಓದಿ: 🔴ಮಂಗಳೂರು: ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ

ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗವು ಆಯೋಜಿಸಿದ ಕಾರ್ಯಕ್ರಮದಲ್ಲಿ ಅರ್ಜುನ ಮತ್ತು ಆಂಜನೇಯ ಪಾತ್ರಕೇಂದ್ರಿತ ‘ಶರಸೇತು ಬಂಧನ’ ಹರಿಕಥೆ ಪ್ರಸ್ತುತಪಡಿಸಿ ವಿದ್ಯಾರ್ಥಿಗಳೊಂದಿಗೆ ಸಂವಾದಿಸಿ ಅವರು ಮಾತನಾಡಿದರು. ಅಹಂಕಾರವನ್ನು ಮೀರಿದಾಗಲೇ ವ್ಯಕ್ತಿತ್ವದ ಸಕಾರಾತ್ಮಕ ಪ್ರಭೆ ವ್ಯಾಪಕವಾಗುತ್ತದೆ ಎಂಬ ತತ್ವವನ್ನು ಪ್ರತಿಪಾದಿಸಿದರು.

ಯಕ್ಷಗಾನದ ಹಾಗೆ ಹರಿಕಥೆಯ ಪ್ರಕಾರಕ್ಕೆ ಸಿದ್ಧಪಠ್ಯಗಳಿರುವುದಿಲ್ಲ. ಛಂದೋಬದ್ಧ ವ್ಯಾಕರಣದ ಕಠಿಣ ಚೌಕಟ್ಟುಗಳಿರುವುದಿಲ್ಲ. ಇದರ ಬದಲು ಹರಿಕಥೆಯು ಸಾಂದರ್ಭಿಕ ಅಗತ್ಯಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಆ ಕ್ಷಣಕ್ಕೆ ನಿರೂಪಿತವಾಗುವ ಕಲಾತ್ಮಕ ಕೌಶಲ್ಯವನ್ನು ಆಧರಿಸಿರುತ್ತದೆ. ಒಂದೇ ಕಥೆ ಮತ್ತು ಆಶಯದ ಪ್ರಸ್ತುತಿ ಹರಿಕಥಾದಾಸರ ವ್ಯಕ್ತಿಗತ ಕೌಶಲ್ಯವನ್ನು ಆಧರಿಸಿ ಹೊಸದೊಂದು ರೂಪ ಪಡೆದುಕೊಳ್ಳುತ್ತದೆ. ಇದೇ ಹರಿಕಥೆಯ ವಿಶೇಷತೆ ಎಂದರು.

ನಿರ್ದಿಷ್ಟ ಘಟನೆ, ಈಗಾಗಲೇ ಆಗಿಹೋದ ಆದರ್ಶ ವ್ಯಕ್ತಿತ್ವ ಮತ್ತು ಕಾಲ್ಪನಿಕ ಅಂಶಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಹರಿಕಥೆಯ ನಿರೂಪಣಾ ಪಠ್ಯವನ್ನು ರೂಪಿಸಿಕೊಳ್ಳಲಾಗುತ್ತದೆ. ಆದರೆ, ಸಿದ್ಧಪಠ್ಯದ ಮಾದರಿಯಲ್ಲಿ ಈ ಪಠ್ಯವಿರುವುದಿಲ್ಲ ಹರಿಕಥೆ ಪ್ರಸ್ತುತಪಡಿಸುವ ಕಲಾವಿದರು ನಿರೂಪಣೆಯ ಅವಧಿಯ ವೇಳೆ ಸಾಂದರ್ಭಿಕ ಪ್ರೇಕ್ಷಕ ಸ್ಪಂದನೆಯ ಆಯಾಮ ಪರಿಗಣಿಸಿ ಸೃಜನಶೀಲ ಅಭಿವ್ಯಕ್ತಿ ಸಾಧಿಸುತ್ತಾರೆ. ಈ ಬಗೆಯ ಅಭಿವ್ಯಕ್ತಿಯ ಮೂಲಕವೇ ಹರಿಕಥೆ ಆಪ್ತವೆನ್ನಿಸುತ್ತದೆ ಎಂದರು.

ಈ ಸಾಧ್ಯತೆಯನ್ನು ಪರಿಗಣಿಸಿ ಸಂತ ಶಿಶುನಾಳ ಷರೀಫ, ಮಹಾತ್ಮಾ ಗಾಂಧಿಯವರ ಅಸ್ಮಿತೆಯನ್ನು ಧ್ವನಿಸುವ ಹರಿಕಥೆಯ ಪ್ರಯೋಗ ತಾವು ನಡೆಸಿರುವುದಾಗಿ ಈ ಸಂದರ್ಭದಲ್ಲಿ ತಿಳಿಸಿದರು. ಹರಿಕಥೆ ಎಂದರೆ ಹರಿಯ ಕಥೆ ಎಂದು ತಪ್ಪಾಗಿ ಗ್ರಹಿಸಲಾಗುತ್ತದೆ. ಹರಿ ಎಂದರೆ ದೇವರು ಎಂದರ್ಥ. ದೇವರ ಕಥೆಯು ನಿರೂಪಿತವಾಗುತ್ತಾ ನೀತಿ ಬೋಧೆಯ ಎತ್ತರವನ್ನು ಪಡೆದುಕೊಳ್ಳುತ್ತದೆ. ಹೀಗಾಗಿಯೇ ಹರಿಕಥೆಯು ವಿವಿಧ ಕಾಲಗಳ ಪೀಳಿಗೆಯನ್ನು ಆದರ್ಶಗಳ ನೆಲೆಗಟ್ಟಿನಲ್ಲಿ ಪ್ರಭಾವಿಸುವ ಪ್ರೇರಣಾತ್ಮಕ ಗುಣವನ್ನು ಹೊಂದಿದೆ. ನೈತಿಕ ಎಚ್ಚರವು ನಿಜವಾದ ಜ್ಞಾನಾರ್ಜನೆಯ ಪ್ರಕ್ರಿಯೆಯನ್ನು ನಮ್ಮೊಳಗೆ ಆರಂಭಿಸುತ್ತದೆ. ಇದು ಹರಿಕಥೆಯಂತಹ ಕಲಾಪ್ರಕಾರಗಳ ಮುಖಾಂತರ ಅಧಿಕೃತಗೊಳ್ಳುತ್ತದೆ ಎಂದು ನುಡಿದರು.

ಶ್ರೀಪತಿ ಭಟ್ ಬೆಳ್ಳೇರಿ ಅವರು ಹಾರ್ಮೋನಿಯಂ, ಶ್ರೀವತ್ಸ ಆಚಾರ್ಯ ಮುಡಿಪು ಅವರು ತಬಲಾ ಸಾಥ್ ನೀಡಿದರು. ವಿಭಾಗದ ಸಹಾಯಕ ಪ್ರಾಧ್ಯಾಪಕ ವಿರಾಟ್ ಪದ್ಮನಾಭ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮವನ್ನು ದಿವ್ಯಶ್ರೀ ಹೆಗಡೆ ನಿರೂಪಿಸಿದರು.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು