ಬಂದಾರು: ಬಂದಾರು ಗ್ರಾಮದಲ್ಲಿ ವಾಂತಿ ಭೇದಿ ಯಿಂದ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಶುಕ್ರವಾರ ಸಂಭವಿಸಿದೆ.
ಬಂದಾರು ಗ್ರಾಮದಲ್ಲಿ ಮೇ 12 ರಂದು ನಡೆದ ಆರತಕ್ಷತೆ ಊಟದ ಬಳಿಕ ಹಲವರಿಗೆ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು ಹಲವರು ಆಸ್ಪತ್ರೆಗೆ ದಾಖಲಾಗಿದ್ದರು. ಇವರಲ್ಲಿ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಆಸ್ಪತ್ರೆಯಲ್ಲಿ ಶುಕ್ರವಾರ ಮೃತಪಟ್ಟಿದ್ದಾರೆ.

ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ 5 ಮಂದಿ ದಾಖಲಾಗಿರುವುದಾಗಿ ತಿಳಿದು ಬಂದಿದ್ದು ಇವರ ಪೈಕಿ ಓರ್ವ ಮಹಿಳೆಯ ಸ್ಥಿತಿ ಗಂಭೀರವಾಗಿ ರುವುದಾಗಿ ತಿಳಿದು ಬಂದಿದೆ.
ಬಂದಾರು ಗ್ರಾಮದಲ್ಲಿ ಸಾರ್ವತ್ರಿಕವಾಗಿ ವಾಂತಿ ಭೇದಿ ಕಾಣಿಸಿಕೊಂಡಿದ್ದು, ಆರೋಗ್ಯ ಇಲಾಖೆ ಅಧಿಕಾರಿಗಳು ಬಂದಾರಿನ ಸುಮಾರು 40 ಹೆಚ್ಚು ಮನೆಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಆರತಕ್ಷತೆಯ ಭೋಜನ ಸೇವಿಸಿದ ಮಂದಿ ಅಸ್ವಸ್ಥರಾಗುತ್ತಿರುವುದಾಗಿ ತಿಳಿದು ಬಂದಿದೆ. ಘಟನೆಗೆ ನಿಖರ ಕಾರಣ ವೇನು ಎಂಬುದು ತಿಳಿದು ಬಂದಿಲ್ಲ.



ಕಾರ್ಯಕ್ರಮದಲ್ಲಿ ಊಟ ಮಾಡಿದ್ದರಿಂದಲೇ ಈ ಸಾಂಕ್ರಾಮಿಕ ರೋಗ ಕಾಣಿಸಿಕೊಂಡಿದೆಯೋ ಅಥವಾ ಇನ್ಯಾವುದೇ ಕಾರಣವಿದೆಯೇ ಎಂಬ ಬಗ್ಗೆಯೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಬಂದಾರು ಪರಿಸರದಲ್ಲಿ ಕಾಣಿಸಿಕೊಂಡಿರುವ ವಾಂತಿ ಭೇದಿ ಯಿಂದ ಹಲವರು ಆಸ್ಪತ್ರೆಗೆ ದಾಖಲಾಗಿದ್ದು ಹಲವರ ಸ್ಥಿತಿ ಗಂಭೀರವಾಗಿರುವ ಹಿನ್ನಲೆಯಲ್ಲಿ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಇಂದು ಬಂದಾರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.

