Mon. May 19th, 2025

Belthangady: ಪಂಜಾಬ್​ನಲ್ಲಿ ಧರ್ಮಸ್ಥಳದ ಯುವತಿ ಸಾವು ಪ್ರಕರಣ – ಇನ್ನೂ ನಡೆಯದ ಮರಣೋತ್ತರ ಪರೀಕ್ಷೆ

ಬೆಳ್ತಂಗಡಿ:(ಮೇ.19) ಧರ್ಮಸ್ಥಳದ ಯುವತಿ ಪಂಜಾಬ್ ನಲ್ಲಿ ಕಾಲೇಜು ಕಟ್ಟಡದಿಂದ ಬಿದ್ದು ಸಾವನ್ನಪ್ಪಿದ ಘಟನೆಯ ಬಗ್ಗೆ ಗೊಂದಲ ಮುಂದುವರಿದಿದ್ದು ಮನೆಯವರನ್ನು ವಂಚಿಸುವ ಪ್ರಯತ್ನ ಸ್ಥಳೀಯ ಪೊಲೀಸರಿಂದ ನಡೆಯುತ್ತಿದೆ ಎಂದು ಮೃತ ಆಕಾಂಕ್ಷಳ ತಂದೆ ಸುರೇಂದ್ರನ್ ಆರೋಪಿಸಿದ್ದಾರೆ.

ಇದನ್ನೂ ಓದಿ: 🔴ಗೋವಾ: ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದಲ್ಲಿ ಹಿಂದೂ ಧರ್ಮಕ್ಕಾಗಿ ಜೀವನವನ್ನು ಮುಡಿಪಾಗಿಟ್ಟು ಕಾರ್ಯ ನಿರ್ವಹಿಸುತ್ತಿರುವ 4 ಜನರಿಗೆ


ಆಕಾಂಕ್ಷ ಸಾವನ್ನಪ್ಪಿದ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ತಂದೆ ಹಾಗೂ ಮನೆಯವರು ಪೊಲೀಸರಿಗೆ ದೂರು ನೀಡಿ ತಮ್ಮ ಮಗಳ ಅಸಹಜ ಸಾವಿನ ಬಗ್ಗೆ ಅನುಮಾನವಿದ್ದು ಈ ಬಗ್ಗೆ ಸಮಗ್ರವಾದ ತನಿಖೆ ನಡೆಸುವಂತೆ ದೂರನ್ನು ನೀಡಿದ್ದರು.


ಆದರೆ ಸೋಮವಾರ ಸುರೇಂದ್ರನ್ ಅವರ ಕೈಗೆ ಸ್ಥಳೀಯ ಪೊಲೀಸರು ಎಫ್.ಐ.ಆರ್ ಪ್ರತಿಯನ್ನು ನೀಡಿದ್ದಾರೆ. ಸ್ಥಳೀಯ ಪಂಜಾಬಿ ಭಾಷೆಯಲ್ಲಿದ್ದ ಈ ಎಫ್.ಐ.ಆರ್ ವರದಿಯನ್ನು ಸ್ಥಳೀಯರ ಸಹಕಾರದಿಂದ ಓದಿ ತಿಳಿದುಕೊಂಡಾಗ ಅದರಲ್ಲಿ ತನ್ನ ಮಗಳ ಸಾವಿನ ಬಗ್ಗೆ ಯಾವುದೇ ಅನುಮಾನವಿಲ್ಲ ಖಿನ್ನತೆಗೆ ಒಳಗಾಗಿ ಆಕೆ‌ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ದಾಖಲಿಸಿರುವುದು ತಿಳಿದು ಬಂದಿದೆ.
ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಮನೆಯವರು ಇದನ್ನು ಒಪ್ಪಲು ಸಾಧ್ಯವಿಲ್ಲ. ನಾವು ನೀಡಿರುವ ದೂರಿನಂತೆಯೇ ಪ್ರಕರಣ‌ ದಾಖಲಿಸಬೇಕು ಎಂದು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ. ಇದಾದ ಬಳಿಕ ಇದೀಗ ಮತ್ತೆ ಮೃತಳ ತಂದೆ ಸುರೇಂದ್ರ ಅವರಿಂದ ಮತ್ತೊಂದು ದೂರನ್ನು ಪಡೆದುಕೊಂಡಿದ್ದಾರೆ.


ಈ ದೂರಿನಲ್ಲಿ ತಮಗೆ ಮಗಳ ಸಾವಿಗೆ ಸಂಸ್ಥೆಯಲ್ಲಿ ಪ್ರಾಧ್ಯಾಪಕನಾಗಿರುವ ಮ್ಯಾಥ್ಯೂ ಕಾರಣನಾಗಿದ್ದಾನೆ ಎಂದು ತಿಳಿಸಿದ್ದಾರೆ. ಆಕೆಯ ಸಾವಿನ ಬಗ್ಗೆ ಹಲವಾರು ಅನುಮಾನಗಳಿದ್ದು ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.
ಇದೀಗ ಆಕಾಂಕ್ಷ ತಂದೆ ತಿಳಿಸುವ ಮಾಹಿತಿಯಂತೆ ಕಾಲೇಜಿನ ಸಿ.ಸಿ ಕ್ಯಾಮರಾ ಫೂಟೇಜ್ ಗಳನ್ನು ಸರಿಯಾಗಿ ನೀಡುತ್ತಿಲ್ಲ. ಕೇವಲ ಆಕೆ‌ ಕೆಳಗೆ ಬೀಳುವ ದೃಶ್ಯಗಳನ್ನು ಮಾತ್ರ ತೋರಿಸಲಾಗುತ್ತಿದೆ. ಆಕೆ ಹೇಗೆ ಕೆಳಗೆ ಬಿದ್ದಳು ಯಾರಾದರೂ ದೂಡಿರುವುದಾ ಅಥವಾ ಆಕೆ ಹಾರಿರುವುದಾ ಎಂದು ಎಲ್ಲಿಯೂ ಕಾಣಿಸುತ್ತಿಲ್ಲ. ಸಿ.ಸಿ.ಕ್ಯಾಮರಾದ ಪೂರ್ಣ ದಾಖಲೆಗಳನ್ನು ತೋರಿಸುವಂತೆ ಕೇಳಿದರೆ ಅದನ್ನು ನೀಡಲು ಸಿದ್ದರಾಗುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಆರಂಭದಲ್ಲಿ ತನಿಖೆಯ ಭರವಸೆ ನೀಡಿದ್ದ ಪೊಲೀಸರು ಇದೀಗ ತಮಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸುತ್ತಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವ ಭರವಸೆ ನೀಡಿರುವುದಾಗಿ ತಿಳಿಸಿದ ಅವರು ಇದೀಗ ಎರಡನೇ ಬಾರಿಗೆ ದೂರನ್ನು ಪೊಲೀಸರು ಸ್ವೀಕರಿಸಿದ್ದು ಯಾವ ರೀತಿ ಪ್ರಕರಣ ದಾಖಲಿಸುತ್ತಾರೆ ಎಂದು ಕಾದು ನೋಡಬೇಕಾಗಿದೆ.

ಇನ್ನೂ ನಡೆಯದ ಮರಣೋತ್ತರ ಪರೀಕ್ಷೆ;
ಪ್ರಕರಣ ದಾಖಲಿಸುವ ಬಗ್ಗೆ ಇರುವ ಗೊಂದಲದಿಂದಾಗಿ ಇನ್ನೂ ಮರಣೋತ್ತರ ಪರೀಕ್ಷೆ ನಡೆದಿಲ್ಲ.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು