Tue. May 20th, 2025

Belthangady:‌ ರಾಜ್ಯವನ್ನು ಸಾಲದ ಕೂಪಕ್ಕೆ ತಳ್ಳಿದ ಕಾಂಗ್ರೆಸ್‌ ಸರಕಾರ – ಪ್ರತಾಪ್‌ ಸಿಂಹ ನಾಯಕ್

ಬೆಳ್ತಂಗಡಿ: (ಮೇ.20) ರಾಜ್ಯದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜನತೆಗೆ ಉಚಿತ ಗ್ಯಾರಂಟಿಗಳ ಆಮಿಷ ಒಡ್ಡಿ ಅನೈತಿಕ ಮತ್ತು ಪ್ರಜಾಪ್ರಭುತ್ವ ವಿರೋಧಿ ನೀತಿಯ ಮೂಲಕ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದು ಎರಡು ವರ್ಷ ಪೂರ್ತಿ ಮಾಡುತ್ತಿದೆ. ಅಧಿಕಾರಕ್ಕೆ ಬರಬೇಕು ಎನ್ನುವ ಹಪಾಹಪಿಯಲ್ಲಿ ಉಚಿತಗಳ ಕಾರಣಕ್ಕೆ ಆರ್ಥಿಕವಾಗಿ ಆಗುವ ಹೊರೆಯ ಮುಂದಾಲೋಚನೆ ಮಾಡದ ಪರಿಣಾಮ ರಾಜ್ಯವನ್ನು ಸಾಲದ ಕೂಪಕ್ಕೆ ತಳ್ಳಿದೆ. ಗ್ಯಾರಂಟಿಯ ಆರ್ಥಿಕ ಹೊರೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮತ್ತು ಅಭಿವೃದ್ಧಿ ಶೂನ್ಯಕ್ಕೆ ಕಾರಣ ಆಗಿದೆ.

ಇದನ್ನೂ ಓದಿ: 🟣ಬೆಳ್ತಂಗಡಿ: ದಕ್ಷಿಣ ಕನ್ನಡ, ಜಿಲ್ಲೆಗೆ ರೆಡ್‌, ಆರೆಂಜ್ ಅಲರ್ಟ್‌

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೆಳಗೆ ಬಿದ್ದರೂ ಮೀಸೆ ಮಣ್ಣು ಆಗಲಿಲ್ಲ ಅಂತ ತಮ್ಮ ಆರ್ಥಿಕ ನೀತಿಯನ್ನು ಎಷ್ಟೇ ಸಮರ್ಥನೆ ಮಾಡಿದರೂ ಜನತೆಗೆ ವಾಸ್ತವ ಅರಿವಾಗಿದೆ. ಕಳೆದ ಎರಡು ವರ್ಷಗಳಲ್ಲಿ ಎರಡೂವರೆ ಲಕ್ಷ ಕೋಟಿ ಸಾಲ ಪಡೆದು ಅನುತ್ಪಾದಕ ವಿಷಯಗಳಿಗೆ ವೆಚ್ಚ ಮಾಡಿರುವುದೇ ರಾಜ್ಯ ಸರಕಾರದ ಸಾಧನೆ. ಕರ್ನಾಟಕದ ಇತಿಹಾಸದಲ್ಲಿ ಅತಿ ಹೆಚ್ಚು ಸಾಲ ಮಾಡಿದ ಕೀರ್ತಿ ಸಿ ಎಂ ಸಿದ್ದರಾಮಯ್ಯರಿಗೆ ಸಲ್ಲುತ್ತದೆ. ದಿನ ಬೆಳಗಾದರೆ ಹೊಸ ತೆರಿಗೆಯ ಹೊರೆ ಬೆಲೆ ಏರಿಕೆಯ ಬರೆ ಜನಜೀವನ ದುಸ್ತರಗೊಳಿಸಿದೆ. ಆಡಳಿತ ಪಕ್ಷದ ಶಾಸಕರ ಸರಕಾರ ವಿರೋಧಿ ಹೇಳಿಕೆಗಳು ಇದಕ್ಕೆ ಹಿಡಿದ ಕೈಗನ್ನಡಿ ಆಗಿದೆ.

ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ಸಿಗರು ನೀಡಿದ ಭರವಸೆಯ ವರಸೆ ನೋಡಿದರೆ ರಾಜ್ಯದಲ್ಲಿ ರಾಮರಾಜ್ಯ ನಿರ್ಮಿಸಲಿದ್ದಾರೆ ಎಂದು ಅಂದುಕೊಂಡಿದ್ದೆವು. ಅಭಿವೃದ್ಧಿ ಕೆಲಸ ಮಾಡುತ್ತಾರೆ; ರೈತರ ಕಣ್ಣೀರು ಒರೆಸುತ್ತಾರೆ. ದೀನದಲಿತರ, ಪರಿಶಿಷ್ಟ ಪಂಗಡದವರು, ಹಿಂದುಳಿದ ವರ್ಗಗಳಿಗೆ ನ್ಯಾಯ ಕೊಡಲಿದ್ದಾರೆ ಎಂದು ಭಾವಿಸಿದ್ದೆವು. ಆದರೆ, ಅದ್ಯಾವ ಕೆಲಸವನ್ನೂ ಮಾಡಿಲ್ಲ. ಬದಲಾಗಿ ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವ ಆಡುತ್ತಿದೆ. ಪರಿಶಿಷ್ಟರ ಹಿಂದುಳಿದವರ ಅಭಿವೃದ್ಧಿಗೆ ಇಟ್ಟ ಹಣವನ್ನೇ ನುಂಗಿ ನೀರು ಕುಡಿದ್ದಿದ್ದಾರೆ. ಕಾಂಗ್ರೆಸ್ ಸರಕಾರ ಬ್ರಾಂಡ್ ಬೆಂಗಳೂರನ್ನು ನೀರಲ್ಲಿ ಕರ್ನಾಟಕವನ್ನು ಭ್ರಷ್ಟಾಚಾರದಲ್ಲಿ ಮುಳುಗಿಸಿದೆ.

ರಾಜ್ಯದ ಕಾನೂನು ಪರಿಸ್ಥಿತಿ ಕೋಮಾ ಸ್ಥಿತಿಗೆ ತಲುಪಿದೆ. ಸಮಾಜಘಾತುಕ, ಭಯೋತ್ಪಾದಕ ಶಕ್ತಿಗಳ ವಿಜೃಂಭಣೆ ನೋಡುವಾಗ ಸರಕಾರ ಜೀವಂತ ಇದೆಯೋ ಸತ್ತಿದೆಯೋ ಅನ್ನುವ ಅನುಮಾನ ಬರುತ್ತದೆ. ಗೃಹಮಂತ್ರಿಗಳ ವಿಚಿತ್ರ ಹೇಳಿಕೆಗಳು ಸರಕಾರದ ನಂಪುಸಕತೆಗೆ ಸಾಕ್ಷಿ ಆಗಿದೆ. ಒಟ್ಟಾರೆ ರಾಜ್ಯದ ಕಾಂಗ್ರೆಸ್ ಸರಕಾರದ ಎರಡು ವರ್ಷದ ಆಡಳಿತ ನೋಡುವಾಗ ಯಾಕಾದರೂ ಇವರನ್ನು ಅಧಿಕಾರ ಕ್ಕೆ ತಂದೆವೋ ಅಂತ ಜನತೆ ಪಶ್ಚಾತ್ತಾಪ ಪಡುವಂತೆ ಆಗಿದೆ. ಕಾಂಗ್ರೆಸ್ ಯಾವ ಪುರುಷಾರ್ಥಕ್ಕೆ ಸಾಧನಾ ಸಮಾವೇಶ ಮಾಡುತ್ತಿದೆ ಎಂದು ಅರ್ಥ ಆಗುತ್ತಿಲ್ಲ ಎಂದು ಕರ್ನಾಟಕ ವಿಧಾನ ಪರಿಷತ್ ಶಾಸಕರಾದ ಕೆ ಪ್ರತಾಪಸಿಂಹ ನಾಯಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *