ಅಹಮದಾಬಾದ್(ಜೂ.13): ಅಹಮದಾಬಾದ್ ವಿಮಾನ ಪತನ ದುರಂತ ಇಡೀ ದೇಶವನ್ನೇ ಆಘಾತಕ್ಕೊಳಗಾಗಿಸಿದೆ. ಈ ವಿಮಾನ ಅಪಘಾತದಲ್ಲಿ 265 ಜನ ಮೃತಪಟ್ಟಿದ್ದು, ಇದರಲ್ಲಿ ಗುಜರಾತ್ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಕೂಡ ಸೇರಿದ್ದಾರೆ. ಅವರು ಪತ್ನಿ ಅಂಜಲಿ ಮತ್ತು ಮಗಳನ್ನು ಭೇಟಿಯಾಗಲು ಲಂಡನ್ಗೆ ತೆರಳುತ್ತಿದ್ದರು.

ವಿಜಯ್ ರೂಪಾನಿ ಅವರ ಸಾವಿನ ದಿನಾಂಕದ ಬಗ್ಗೆ ಇದೀಗ ಅಚ್ಚರಿಯ ಅಂಶವೊಂದು ಬೆಳಕಿಗೆ ಬಂದಿದೆ. ಜೀವನದುದ್ದಕ್ಕೂ ಅದೃಷ್ಟ ಎಂದೇ ಅವರು ಭಾವಿಸಿಕೊಂಡು ಬಂದಿದ್ದ ಆ ಸಂಖ್ಯೆಯೇ ಅವರಿಗೆ ಮುಳುವಾಗಿದೆ. ಅಷ್ಟೇ ಅಲ್ಲ, ಅವರ ಸಾವಿನ ದಿನಾಂಕವಾಗಿ ಮಾರ್ಪಟ್ಟಿದೆ!ವಿಜಯ್ ರೂಪಾನಿಗೆ 1206 ಎಂಬುದು ಕೇವಲ ಒಂದು ಸಂಖ್ಯೆಯಾಗಿರಲಿಲ್ಲ.


ಬದಲಿಗೆ, ನಂಬಿಕೆಯ ಸಂಕೇತವಾಗಿತ್ತು. ಅದನ್ನು ಅವರು ಅದೃಷ್ಟವೆಂದೇ ಭಾವಿಸಿದ್ದರು. ವಿಜಯ್ ರೂಪಾನಿ ಈ ಸಂಖ್ಯೆಯನ್ನು ಎಷ್ಟರ ಮಟ್ಟಿಗೆ ಅದೃಷ್ಟವೆಂದು ಪರಿಗಣಿಸಿದ್ದರು ಎಂದರೆ, ತಾವು ಖರೀದಿ ಮಾಡಿದ ಮೊದಲ ಸ್ಕೂಟರ್ನಿಂದ ಕಾರಿನವರೆಗೆ ಎಲ್ಲಾ ವಾಹನಗಳ ಸಂಖ್ಯೆ 1206 ರಿಂದಲೇ ಪ್ರಾರಂಭವಾಗುವಂತಿತ್ತು. ಆದರೆ ಅದೇ ಸಂಖ್ಯೆ ಅವರಿಗೆ ಅಶುಭಕರವಾಗಿ ಪರಿಣಮಿಸಿತು. 1206 (ದಿನಾಂಕ 12-6-25) ರಂದು ಅವರು ಪ್ರಾಣವನ್ನೇ ಕಳೆದುಕೊಂಡರು.

ರೂಪಾನಿ ಅವರ ಅದೃಷ್ಟ ಸಂಖ್ಯೆ 1206 ಅವರಿಗೆ ಮಾತ್ರವಲ್ಲದೆ ಅವರ ಕುಟುಂಬಕ್ಕೂ ದುರದೃಷ್ಟಕರವೆಂಬುದು ಜೂನ್ 12, ಅಂದರೆ 12-06 ರಂದು ಸಾಬೀತಾಯಿತು. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ವಿಜಯ್ ರೂಪಾನಿ ಅವರ ಸ್ಕೂಟರ್ ಮತ್ತು ಮೊದಲ ಕಾರು 1206 ನೋಂದಣಿ ಸಂಖ್ಯೆಯನ್ನು ಹೊಂದಿವೆ. ಈ ಕಾರು ಮತ್ತು ಸ್ಕೂಟರ್ ಈಗಲೂ ಅವರ ಮನೆಯ ಪಾರ್ಕಿಂಗ್ ಜಾಗದಲ್ಲಿವೆ.

