ಉಡುಪಿ:(ಜೂ.18) ನಗರದಲ್ಲಿ ಖಾಸಗಿ ಬಸ್ಗಳ ಅತಿವೇಗ ಚಾಲನೆಗೆ ಮತ್ತೊಂದು ಘಟನೆ ಸಾಕ್ಷಿಯಾಗಿದೆ. ಕುಂದಾಪುರದಿಂದ ಉಡುಪಿಗೆ ಬರುತ್ತಿದ್ದ ‘ದುರ್ಗಾಂಬ’ ಹೆಸರಿನ ಖಾಸಗಿ ಬಸ್ ಚಾಲಕನೋರ್ವ, ನಗರದ ಬನ್ನಂಜೆ ಬಳಿ ಏಕಾಏಕಿ ಬ್ರೇಕ್ ಹಾಕಿ. ಬಸ್ಸನ್ನು 180 ಡಿಗ್ರಿ ತಿರುಗಿಸಿ ಪ್ರಯಾಣಿಕರಲ್ಲಿ ತೀವ್ರ ಭೀತಿ ಹುಟ್ಟಿಸಿದ ಘಟನೆ ನಡೆದಿದೆ.

ಏನಿದು ಘಟನೆ:
ಕುಂದಾಪುರದಿಂದ ಅತಿ ವೇಗವಾಗಿ ನಗರ ಪ್ರವೇಶಿಸುತ್ತಿದ್ದ ದುರ್ಗಾಂಬ ಬಸ್, ಬನ್ನಂಜೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಹುಚ್ಚಾಟ ಮೆರೆದಿದೆ. ಚಾಲಕನು ಏಕಾಏಕಿ ಬ್ರೇಕ್ ಹಾಕಿದ ರಭಸಕ್ಕೆ, ಬಸ್ ನಿಯಂತ್ರಣ ತಪ್ಪಿ ರಸ್ತೆಯಲ್ಲೇ 180 ಡಿಗ್ರಿ ಸಂಪೂರ್ಣವಾಗಿ ಸುತ್ತು ಹೊಡೆದಿದೆ.

ಈ ಅನಿರೀಕ್ಷಿತ ಘಟನೆಯಿಂದ ಬಸ್ಸಿನಲ್ಲಿದ್ದ ಹಿರಿಯರು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಎಲ್ಲಾ ಪ್ರಯಾಣಿಕರು ತೀವು ಆತಂಕಕ್ಕೊಳಗಾಗಿ, ಮುಂದೇನಾಗುವುದೋ ಎಂಬ ಭಯದಿಂದ ಚೀರಾಡಿದ್ದಾರೆ.ಆದರೆ, ಇಷ್ಟೆಲ್ಲಾ ಆದರೂ ಚಾಲಕ ತನ್ನ ತಪ್ಪಿನ ಅರಿವಿಲ್ಲದಂತೆ, ಏನೂ ಆಗೇ ಇಲ್ಲವೆಂಬಂತೆ ಬಸ್ಸನ್ನು ಮತ್ತೆ ಅತಿ ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದಾನೆ.

ಅಷ್ಟಕ್ಕೆ ನಿಲ್ಲಿಸದೆ. ಮುಂದೆ ಸಾಗಿ ರಾಂಗ್ ಸೈಡ್ನಲ್ಲಿ ಚಲಿಸಿ ಅಪಾಯಕಾರಿಯಾಗಿ ಯೂ ಟರ್ನ್ ಪಡೆದು ತನ್ನ ದಾರಿಯಲ್ಲಿ ಮುಂದುವರಿದಿದ್ದಾನೆ. ಚಾಲಕನ ಈ ಬೇಜವಾಬ್ದಾರಿ ವರ್ತನೆ ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಪೊಲೀಸರಿಗೆ ಒತ್ತಾಯಿಸಿದ್ದಾರೆ.

