Tue. Jul 1st, 2025

Subrahmanya: ಕೆಎಸ್ಆರ್‌ಟಿಸಿಯಲ್ಲಿ ಸಮಸ್ಯೆಗಳಿಲ್ಲ , ದಕ್ಷಿಣ ಕನ್ನಡ ಜಿಲ್ಲೆಗೆ ಆದ್ಯತೆ ನೀಡಲಾಗುತ್ತಿದೆ – ಸಚಿವ ರಾಮಲಿಂಗ ರೆಡ್ಡಿ

ಸುಬ್ರಹ್ಮಣ್ಯ:(ಜು.1) ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮಾದಾಯ ದತ್ತಿ ಇಲಾಖೆಯ ಅಧೀನದಲ್ಲಿರುವ ಮಹತೋಭಾರ ಕುಕ್ಕೆ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕರ್ನಾಟಕ ಸರಕಾರದ ಸಾರಿಗೆ ಮತ್ತು ಮುಜರಾಯಿ ಸಚಿವರು ಮತ್ತು ರಾಜ್ಯ ಧಾರ್ಮಿಕ ಪರಿಷತ್‌ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ರಾಮಲಿಂಗಾರೆಡ್ಡಿ ಅವರು ಭೇಟಿ ನೀಡಿ ವಿಶೇಷ ಪೂಜೆಯಲ್ಲಿ ಮತ್ತು ಸಭೆಯಲ್ಲಿ ಭಾಗವಹಿಸಿದರು.

ಇದನ್ನೂ ಓದಿ: ⭕ಬೆಳ್ತಂಗಡಿ: ಇಂದಬೆಟ್ಟು ನಿವಾಸಿ ವಜ್ರಾಕ್ಷ ಪೂಜಾರಿ ಹೃದಯಾಘಾತದಿಂದ ನಿಧನ

ಬೆಂಗಳೂರಿನ ಉದ್ಯಮಿ ಶ್ರೀ ಜೈ ಪುನೀತ್ ಇವರಿಂದ ಸೇವಾರೂಪದಲ್ಲಿ ನಿರ್ಮಾಣಗೊಳ್ಳಲಿರುವ ಆಶ್ಲೇಷ ಬಲಿಪೂಜಾ ಮಂದಿರದ ಗುದ್ದಲಿ ಪೂಜೆ ಹಾಗೂ ಶ್ರೀ ದೇವಳದ ವತಿಯಿಂದ ನೂತನವಾಗಿ ನಿರ್ಮಾಣಗೊಳ್ಳಲಿರುವ ಸುಸಜ್ಜಿತ ದಾಸೋಹ ಭವನ, ದೇವಳದ ಸುತ್ತು ಪೌಳಿ, 800 ಕೊಠಡಿಗಳ ವಸತಿ ಗೃಹ, ನೂತನ ಪಾರಂಪರಿಕ ರಥ ಬೀದಿ ನಿರ್ಮಾಣದ ಯೋಜನೆಯ ಅಂತಿಮ ಹಂತದ ಮಂಜೂರಾತಿಗಳ ಸಭೆಗಾಗಿ ಸಚಿವರು ಆಗಮಿಸಿದರು.

ಸಭೆಯ ನಂತರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವ ರಾಮಲಿಂಗ ರೆಡ್ಡಿ ಅವರು ಕುಕ್ಕೆ ಸುಬ್ರಹ್ಮಣ್ಯದ ಮಾಸ್ಟರ್ ಪ್ಲಾನ್ ವ್ಯವಸ್ಥೆಗಳು ಉದ್ದೇಶಿತ ರೀತಿಯಲ್ಲಿ ನಡೆದರೆ ಎರಡರಿಂದ ಮೂರು ವರ್ಷಗಳಲ್ಲಿ ಪೂರ್ಣಗೊಳ್ಳುತ್ತದೆ. ಇಲ್ಲಿ ಹಣಕಾಸಿನ ಕೊರತೆಯಿಲ್ಲ.ಆಶ್ಲೇಷ ಬಲಿಪೂಜಾ ಮಂದಿರದ ನಿರ್ಮಾಣ, ಶ್ರೀ ದೇವಳದ ವತಿಯಿಂದ ನೂತನವಾಗಿ ನಿರ್ಮಾಣಗೊಳ್ಳಲಿರುವ ಸುಸಜ್ಜಿತ ದಾಸೋಹ ಭವನ, ದೇವಳದ ಸುತ್ತು ಪೌಳಿ,ಸುಮಾರು 800 ಕೊಠಡಿಗಳ ವಸತಿ ಗೃಹ, ನೂತನ ಮತ್ತು ಪಾರಂಪರಿಕ ರೀತಿಯಲ್ಲಿ ನಿರ್ಮಾಣವಾಗಲಿರುವ ರಥ ಬೀದಿ ಯೋಜನೆ ಆದಷ್ಟು ಬೇಗನೇ ಪೂರ್ಣಗೊಳಿಸಲಾಗುತ್ತದೆ ಎಂದು ಅವರು ಹೇಳಿದರು. ಸುಬ್ರಹ್ಮಣ್ಯ ದೇಗುಲ ಮತ್ತು ಸಂಪುಟ ನರಸಿಂಹ ಸ್ವಾಮಿ ಮಠದ ನಡುವೆ ಇರುವ ವ್ಯಾಜ್ಯಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತಿದೆ.ದೇಗುಲದ ಎ ಮತ್ತು ಬಿ ಗ್ರೇಟ್ ಕಾರ್ಮಿಕರ ವೇತನ ಸದ್ಯದ ಪರಿಸ್ಥಿತಿಯಲ್ಲಿ ತೊಂದರೆಯಿಲ್ಲ ಆದರೆ ಸಿ ಗ್ರೇಡ್ ನೌಕರರ ವೇತನ ಪರಿಷ್ಕರಣೆ ಬಗ್ಗೆ ಚಿಂತಿಸಲಾವುದು ಎಂದು ಅವರು ಹೇಳಿದರು. ಅದೇ ರೀತಿ ಕೆಎಸ್‌ಆರ್‌ಟಿಸಿಯ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವರು ಈಗಾಗಲೇ ಎದುರಾಗಿದ್ದ ಚಾಲಕರ ಸಮಸ್ಯೆಯನ್ನು ಪರಿಹರಿಸಲಾಗಿದೆ.ಸುಮಾರು 340 ಜನ ಚಾಲಕರನ್ನು ಪುತ್ತೂರು ಡಿಪೋಗೆ ನೀಡಲಾಗಿದೆ. ಅದೇ ರೀತಿ ಮಂಗಳೂರು ಡಿಪೋಗು 200ಕ್ಕೂ ಅಧಿಕ ಚಾಲಕರನ್ನು ನೀಡಲಾಗಿದೆ. ಆದ್ದರಿಂದ ಬಸ್ ಓಡಾಟದಲ್ಲಿ ಎದುರಾಗಿದ್ದ ಸಮಸ್ಯೆ ಮುಂದೆ ಉಂಟಾಗಲ್ಲ.ನೂತನವಾಗಿ 800ಕ್ಕೂ ಹೆಚ್ಚು ಬಸ್ಸುಗಳು ಬರಲಿದೆ.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತ್ಯಧಿಕ ದೇಗುಲಗಳು, ಪ್ರವಾಸಿ ತಾಣಗಳು ಇರುವ ಹಿನ್ನೆಲೆಯಲ್ಲಿ ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದು ಹೇಳಿದರು. ಈ ವಿಷಯಗಳನ್ನು ಹೊರತುಪಡಿಸಿ ಹಲವಾರು ವಿಷಯಗಳ ಬಗ್ಗೆ ಮಾಧ್ಯಮದವರ ಪ್ರಶ್ನೆಗಳಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ಉತ್ತರಿಸಿದರು.

ಮಾಜಿ ಸಚಿವ ಬಿ. ರಮಾನಾಥ ರೈ, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ,ಧಾರ್ಮಿಕ ದತ್ತಿ ಇಲಾಖೆ ಕಮೀಷನರ್ ಡಾ. ಕೆ.ವಿ. ವೆಂಕಟೇಶ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ, ಜೈ ಪುನೀತ್ (ದಾನಿಗಳ ಪ್ರತಿನಿಧಿ),ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಧಾರ್ಮಿಕ ಪರಿಷತ್ ಸದಸ್ಯರಾದ ರವಿಶಂಕರ ಶೆಟ್ಟಿ, ಮಲ್ಲಿಕಾ ಪಕ್ಕಳ, ಸಹಾಯಕ ಕಾರ್ಯನಿರ್ವಾಹಣಾಧಿಕಾರಿ ಯೇಸುರಾಜ್,ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಪ್ರಮೋದ್, ಪಿಡಿಒ ಮಹೇಶ್, ಕಾರ್ಯದರ್ಶಿ ಮೋನಪ್ಪ, ವ್ಯವಸ್ಥಾಪನಾ ಸಮಿತಿಯ ಸದಸ್ಯರು ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *