Thu. Jul 3rd, 2025

Belthangady: ಕಾರಿನಲ್ಲೇ ಮಹಿಳೆಗೆ ಪ್ರಥಮ ಹೆರಿಗೆ! – ಆಪದ್ಬಾಂಧವನಾಗಿ ತಾಯಿ ಮಗುವಿನ ಪ್ರಾಣ ರಕ್ಷಿಸಿದ ಜಮಾಲ್ ಕರಾಯ

ಬೆಳ್ತಂಗಡಿ:(ಜು.2)ಅಗತ್ಯ ಕೆಲಸದ ನಿಮಿತ್ತ ತನ್ನ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಜಮಾಲ್ ಕರಾಯ ಅವರು ಹೆರಿಗೆ ಬೇನೆಯಿಂದ ಚಡಪಡಿಸುತ್ತಿದ್ದ ಮಹಿಳೆಯೊಬ್ಬರಿಗೆ ಸ್ಪಂದಿಸುವ ಮೂಲಕ ಅವರನ್ನು ಆಸ್ಪತ್ರೆಗೆ ಕರೆತರುತ್ತಿದ್ದ ಮಧ್ಯೆಯೇ ಕಾರಿನಲ್ಲೇ ಮಹಿಳೆಗೆ ಹೆರಿಗೆಯಾದ ಘಟನೆ ಜು. 1 ರ. ವೈದ್ಯರ ದಿನದಂದು ನಡೆದಿದೆ.

ಇದನ್ನೂ ಓದಿ: 🟢ಮುಂಡಾಜೆ: ಮುಂಡಾಜೆ ಪ.ಪೂ. ಕಾಲೇಜಿನಲ್ಲಿ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ

ಜಮಾಲ್ ಅವರ ಕಾರಿನಲ್ಲೇ ತನ್ನ ಚೊಚ್ಚಲ ಗಂಡು ಮಗುವಿಗೆ ಜನ್ಮ ನೀಡಿರುವ ಮಹಿಳೆ ಮತ್ತು ಅವರ ಮಗು ಇಬ್ಬರೂ ಆರೋಗ್ಯವಂತರಾಗಿದ್ದು ಇದೀಗ ಬೆಳ್ತಂಗಡಿ ಸಾರ್ವಜನಿಕ ಸಮುದಾಯ ಆಸ್ಪತ್ರೆಯಲ್ಲಿ ಪ್ರಸವ ನಂತರದ ಆರೈಕೆಯಲ್ಲಿದ್ದಾರೆ.

ಸುನ್ನತ್‌ಕೆರೆ ನಿವಾಸಿ ಇಕ್ಬಾಲ್ ಅವರ ಪತ್ನಿ ತುಂಬು ಗರ್ಬಿಣಿ ಸಫಿಯಾ ಅಳದಂಗಡಿ ಅವರು ತೀವ್ರವಾದ ಹೆರಿಗೆ ನೋವಿನೊಂದಿಗೆ ರಸ್ತೆ ಬದಿ‌ನಿಂತುಕೊಂಡಿದ್ದರು. ಇದನ್ನು ಗಮನಿಸಿದ ಜಮಾಲ್ ಅವರು ತನ್ನ ಕಾರನ್ನು ತಿರುಗಿಸಿ ಬಂದು ವಿಚಾರಿಸಿದರು. ದಂಪತಿಯ ಸಂಕಷ್ಟ ಅರಿತ ಅವರು ತನ್ನ ಪ್ರಯಾಣ ಮೊಟಕುಗೊಳಿಸಿ ತಕ್ಷಣ ಮಹಿಳೆಯನ್ನು ತನ್ನ ಕಾರಿನಲ್ಲಿ ಕುಳ್ಳಿರಿಸಿ ಆಸ್ಪತ್ರೆಯತ್ತ ಪ್ರಯಾಣ ಬೆಳೆಸಿದರು. ಆದರೆ ಅದಾಗಲೇ ಸಫಿಯಾ ಅವರು ಕಾರಿನಲ್ಲೇ ಪ್ರಸವಿಸಿದ್ದಾರೆ.


ಪ್ರಸವದ ವೇಳೆ ಪತಿ ಇಕ್ಬಾಲ್ ಅವರು ಮತ್ತು ಜಮಾಲ್ ಅವರು ಮಹಿಳೆಗೆ ತುರ್ತು ಸ್ಪಂದಿಸಿದ್ದು ಬಳಿಕ ಆಸ್ಪತ್ರೆಗೆ ಸೇರಿಸಿದ್ದಾರೆ. ಒಂದು ವೇಳೆ ಜಮಾಲ್ ಆ ಸಂದರ್ಭದಲ್ಲಿ ಬರದೇ ಹೋಗುತ್ತಿದ್ದರೆ ಅನಾಹುತ ಆಗುವ ಸಂಭವ ಕೂಡ ಇತ್ತು. ಅಂತೂ ವೈದ್ಯರ ದಿನದಂದು ಸಫಿಯಾ ಪಾಲಿಗೆ ತನ್ನ ಪತಿ ಮತ್ತು ಜಮಾಲ್ ಅವರೇ ವೈದ್ಯರಂತೆ ಬಂದು ಪ್ರಾಣ‌ ಕಾಪಾಡಿದ್ದಂತೂ‌ ಸತ್ಯ. ಇದೀಗ ಜಮಾಲ್ ಅವರ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *