ಪುತ್ತೂರು:(ಜು.8) ಪ್ರೀತಿಸಿ ಮದುವೆಯಾಗುವುದಾಗಿ ಪ್ರಮಾಣ ಮಾಡಿ ಲೈಂಗಿಕ ದೌರ್ಜನ್ಯ ಎಸಗಿ ಬಳಿಕ ಕೊಲೆ ಬೆದರಿಕೆಯೊಡ್ಡಿರುವ ಆರೋಪಿಗೆ ಜಿಲ್ಲಾ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಈ ಹಿಂದೆ ಉಪ್ಪಿನಂಗಡಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿ ಪ್ರಸ್ತುತ ಹಾಸನದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳೆ ನೀಡಿರುವ ದೂರಿನ ಮೇರೆಗೆ ಹಾಸನದ ವಿಶ್ವೇಶ್ವರಯ್ಯ ಬಡಾವಣೆಯ ಸಚಿನ್ ಎನ್.ಆರ್.ಎಂಬಾತನ ವಿರುದ್ಧ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ತನಗೆ ವಿವಾಹ ವಿಚ್ಚೇದನವಾದ ಬಳಿಕ ಆರೋಪಿ ಸಚಿನ್ ಎನ್.ಆರ್., ಸಹಾಯ ಮಾಡುವ ನೆಪದಲ್ಲಿ ಉಪ್ಪಿನಂಗಡಿಯಲ್ಲಿದ್ದ ನನ್ನ ಮನೆಗೆ ಬಂದು, ನನ್ನ ತಂಗಿ ಮದುವೆಯಾದ ಬಳಿಕ ನಿನ್ನನ್ನು ಮದುವೆಯಾಗುವುದಾಗಿ ಹೇಳಿ ಬಲವಂತದ ದೈಹಿಕ ಸಂಪರ್ಕ ಬೆಳೆಸಿದ್ದ. ಆತನ ತಂಗಿಗೆ ಮದುವೆಯಾದ ಬಳಿಕ ನನ್ನನ್ನು ಕಡೆಗಣಿಸಲು ಶುರು ಮಾಡಿ ಹಾಸನಕ್ಕೆ ನನ್ನ ವರ್ಗಾವಣೆ ಮಾಡಿಕೊಂಡಿದ್ದ. ಆರೋಪಿ 2024ರ ಆ.27ರಂದು ಹಾಸನದ ಬಾಡಿಗೆ ಮನೆಗೆ ಬಂದು ಲೈಂಗಿಕ ದೌರ್ಜನ್ಯ ಮಾಡಿದ್ದಾಗಿ ದೂರಿನಲ್ಲಿ ಆರೋಪಿಸಿದ್ದರು

ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ಆರೋಪಿಗೆ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಆರೋಪಿ ಪರ ವಕೀಲರಾದ ದೇವಾನಂದ ಕೆ., ವಿಜಯ ಕುಮಾರ್, ಹರಿಣಿ ವಾದಿಸಿದ್ದರು.

