Thu. Jul 10th, 2025

Chikkamagaluru: ಮೊರಾರ್ಜಿ‌ ಶಾಲೆಯಲ್ಲಿ 9ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ – ವಸತಿ ಶಾಲೆಯ ಇಬ್ಬರು ಅಮಾನತು

ಚಿಕ್ಕಮಗಳೂರು (ಜು.10): ಕೊಪ್ಪ ಪಟ್ಟಣದಲ್ಲಿನ ಮೊರಾರ್ಜಿ ವಸತಿ ಶಾಲೆಯಲ್ಲಿ 9ನೇ ತರಗತಿಯ ಇಬ್ಬರು ವಿದ್ಯಾರ್ಥಿನಿಯರು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಪ್ರಕರಣವನ್ನು ನಿವೃತ್ತ ನ್ಯಾಯಾಧೀಶೆ ಶೋಭಾ ನೇತೃತ್ವದಲ್ಲಿ ತನಿಖೆ ನಡೆಸಲು ಸರ್ಕಾರ ಆದೇಶಿಸಿದೆ.

ಇದನ್ನೂ ಓದಿ: 🔴ಉಜಿರೆ: ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯ ವಿದ್ಯಾರ್ಥಿಗಳಿಗೆ ವಿಜ್ಞಾನ ಮಾದರಿ ತಯಾರಿ ಸ್ಪರ್ಧೆಯಲ್ಲಿ ಬಹುಮಾನ

ಇಬ್ಬರು ಅಮಾನತು
ವಸತಿ ಶಾಲೆಯ ಪ್ರಾಂಶುಪಾಲೆ ಹಾಗೂ ವಸತಿ ನಿಲಯದ ವಾರ್ಡನ್​ನನ್ನು ಸರ್ಕಾರ ಅಮಾನತು ಮಾಡಿದೆ. ಪ್ರಾಂಶುಪಾಲೆ ರಜನಿ ಮತ್ತು ವಾರ್ಡನ್ ಸುಂದರ್ ನಾಯಕ್ ಅವರನ್ನು ಅಮಾನತು ಮಾಡಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (ಕ್ರೈಸ್​)ದ ಕಾರ್ಯನಿರ್ವಾಹಕ ನಿರ್ದೇಶಕ ಕಾಂತರಾಜು ಆದೇಶ ಹೊರಡಿಸಿದ್ದಾರೆ.

ಏನಿದು ಪ್ರಕರಣ?
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಬೊಮ್ಲಾಪುರ ಸಮೀಪದ ಹೊಕ್ಕಳಿಕೆ ಗ್ರಾಮದ ಶಮಿತಾ ಎಂಬುವರು ಕೊಪ್ಪದ ಮೊರಾರ್ಜಿ ವಸತಿ ಶಾಲೆಯಲ್ಲಿ 9 ನೇತರಗತಿ ಓದುತ್ತಿದ್ದರು. ವಿದ್ಯಾರ್ಥಿನಿ ಶಮಿತಾ 2025ರ ಜೂನ್ 29ರಂದು ಶಾಲೆಯ ಶೌಚಾಲಯದಲ್ಲಿ ವೇಲ್​ನಿಂದ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ರಾತ್ರಿ ಮಲಗುವವರೆಗೂ ಸ್ನೇಹಿತರ ಜೊತೆ ಖುಷಿ ಖುಷಿಯಾಗಿ ಮಾತನಾಡಿದ್ದ ಶಮಿತಾ ಬೆಳಗಾಗುವಷ್ಟರಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು.

ಇಂತಹದ್ದೇ ಪ್ರಕರಣ 2023ರಲ್ಲಿ ಇದೇ ವಸತಿ ನಿಲಯದಲ್ಲಿ ನಡೆದಿತ್ತು. 2023 ಜುಲೈ 27ರಂದು ವಿದ್ಯಾರ್ಥಿನಿ ಅಮೂಲ್ಯ ವಸತಿ ಶಾಲೆಯ ಬಾತ್​ರೂಂನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಇಬ್ಬರೂ ವಿದ್ಯಾರ್ಥಿನಿಯರು ಒಂದೇ ಸ್ಥಳದಲ್ಲಿ, ಒಂದೇ ಕಬ್ಬಿಣಕ್ಕೆ, ಒಂದೇ ಶೈಲಿಯಲ್ಲಿ ನೇಣು ಹಾಕಿಕೊಂಡಿದ್ದರು. ಇದು ವಿದ್ಯಾರ್ಥಿನಿಯರ ಪೋಷಕರಲ್ಲಿ ಮತ್ತು ಸಾರ್ಜನಿಕರಲ್ಲಿ ಅನುಮಾನ ಹುಟ್ಟುಹಾಕಿತ್ತು. ಈ ಹಿನ್ನೆಲೆಯಲ್ಲಿ ಪೋಷಕರು ಸೂಕ್ತ ತನಿಖೆಗೆ ಒತ್ತಾಯಿಸಿದ್ದಾರೆ. ವಿದ್ಯಾರ್ಥಿನಿಯರ ಹಿತದೃಷ್ಟಿಯಿಂದ ವಸತಿ ಶಾಲೆಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸುವಂತೆ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *