Fri. Jul 11th, 2025

ಉಜಿರೆ: ಉಜಿರೆಯಲ್ಲಿ ಗುರುಪೂರ್ಣಿಮಾ ಮಹೋತ್ಸವ ಸಂಪನ್ನ!

ಉಜಿರೆ:(ಜು.11) ಪ್ರಸ್ತುತ ಹಿಂದೂ ಧರ್ಮದ ಮೇಲಿನ ಸಮಸ್ಯೆಗಳಿಗೆ ಪರಿಹಾರಕ್ಕಾಗಿ ಹಿಂದೂಗಳ ಸಂಘಟನೆ ಆವಶ್ಯಕತೆಯಿದೆ. ಆದರೆ ‘ಸಾಧನೆ ಮತ್ತು ಧರ್ಮ’ ಇದು ಸಂಘಟನೆಯ ಅಡಿಪಾಯವಾಗಿದ್ದರೆ ಮಾತ್ರ ರಾಷ್ಟ್ರ-ಧರ್ಮ ಕಾರ್ಯದ ಕಟ್ಟಡ ಭದ್ರವಾಗಿರಲು ಸಾಧ್ಯ. ಸಾಧನೆಯಿಂದಲೇ ಯಾವುದೇ ಪರಿಸ್ಥಿತಿಯನ್ನು ಎದುರಿಸುವ, ಯಾವುದೇ ಪರಿಸ್ಥಿತಿಯಲ್ಲಿ ಸ್ಥಿರವಾಗಿರುವ, ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಕ್ಷಮತೆ ನಿರ್ಮಾಣವಾಗುತ್ತದೆ, ಹಾಗಾಗಿ ಎಲ್ಲರೂ ಆಧ್ಯಾತ್ಮಿಕ ಸಾಧನೆಯೊಂದಿಗೆ ರಾಷ್ಟ್ರ-ಧರ್ಮದ ಕಾರ್ಯ ಮಾಡುವ ಸಂಕಲ್ಪ ಮಾಡೋಣ ಎಂದು ಸನಾತನ ಸಂಸ್ಥೆಯ ಸೌ. ಸಂಗೀತ ಶಶಿಧರ್ ಆಚಾರ್ಯ‌ ಇವರು ಕರೆ ನೀಡಿದರು.

ಇದನ್ನೂ ಓದಿ: 🟣ಉಜಿರೆ: ಉಜಿರೆಯ ಶ್ರೀ ಧ.ಮಂ.ಪ.ಪೂ.ಕಾಲೇಜಿನ ಹಿಂದಿ ಸಂಘದ 2025-26ನೇ ಶೈಕ್ಷಣಿಕ ವರ್ಷದ ಕಾರ್ಯಚಟುವಟಿಕೆಗಳ ಉದ್ಘಾಟನೆ

ಅವರು 10 ಜುಲೈ 2025, ಗುರುವಾರದಂದು ಉಜಿರೆಯಲ್ಲಿ ನಡೆದ ಗುರುಪೂರ್ಣಿಮಾ ಮಹೋತ್ಸವದಲ್ಲಿ ಮಾತನಾಡುತ್ತಿದ್ದರು. ಈ ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ಶ್ರೀ. ಕಿರಣ್ ಡಿ. ಪುಷ್ಪಗಿರಿ, ಬೆಳ್ತಂಗಡಿಯ ವಕೀಲರ ಸಂಘದ ಅಧ್ಯಕ್ಷರಾದ ಶ್ರೀ. ವಸಂತ ಮರಕಡ, ಪ್ರಗತಿ ಮಹಿಳಾ ಮಂಡಳಿ, ಉಜಿರೆಯ ಅಧ್ಯಕ್ಷರಾದ ಸೌ. ಜಯ ಪ್ರಕಾಶ್ ಅಪ್ರಮೇಯ ಹಾಗೂ ಗುರಿಪಳ್ಳ ಮಹಿಳಾ ಮಂಡಳಿಯ ಅಧ್ಯಕ್ಷರಾದ ಸೌ. ಸೌಮ್ಯಲತಾ ಇವರು ಉಪಸ್ಥಿತರಿದ್ದರು.

ಸೌ. ಸಂಗೀತಾ ಶಶಿಧರ್ ಆಚಾರ್ಯ ಇವರು ಮುಂದುವರೆಸಿ, ಗುರುಪೂರ್ಣಿಮೆ ಗುರುಗಳ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವ ಮತ್ತು ಗುರುಸೇವೆಗಾಗಿ ಸಂಕಲ್ಪ ಮಾಡುವ ಪವಿತ್ರ ದಿನ. ಭಾರತದ ಒಂದು ಪ್ರಮುಖ ವೈಶಿಷ್ಟ್ಯವೆಂದರೆ ಗುರು-ಶಿಷ್ಯ ಪರಂಪರೆ ! ಈ ದೈವೀ ಪರಂಪರೆಯು ಕೇವಲ ಗುರು ಮತ್ತು ಶಿಷ್ಯ, ಅಧ್ಯಾತ್ಮ ಮತ್ತು ಮೋಕ್ಷಕ್ಕೆ ಮಾತ್ರ ಸೀಮಿತವಾಗಿಲ್ಲ, ಬದಲಾಗಿ ಅದು ವಿಶ್ವ ಕಲ್ಯಾಣದ ಕಾರ್ಯ ಮಾಡುತ್ತಿದೆ. ಧರ್ಮಸಂಸ್ಥಾಪನೆ ಮತ್ತು ರಾಷ್ಟ್ರರಕ್ಷಣೆಯ ಕಾರ್ಯವನ್ನೂ ಮಾಡಿದೆ. ತ್ರೇತಾಯುಗ, ದ್ವಾಪರಯುಗ ಹೀಗೆ ಪ್ರತಿ ಯುಗದಲ್ಲಿ ಧರ್ಮ ಮತ್ತು ನ್ಯಾಯದ ಪರವಾಗಿ ಹೋರಾಡುವವರಿಗಿಂತ ಅಧರ್ಮಿಗಳ ಸಂಖ್ಯೆ ಮತ್ತು ಶಸ್ತ್ರಬಲ ಎರಡೂ ಹೆಚ್ಚಿತ್ತು; ಆದರೆ ಅಂತಿಮ ವಿಜಯವು ಧರ್ಮದ್ದೇ ಆಯಿತು; ಏಕೆಂದರೆ ಭಗವಂತನ ಆಶೀರ್ವಾದವು ಧರ್ಮದ ಪರವಾಗಿ ಹೋರಾಡುವವರ ಮೇಲಿತ್ತು.

ಇಂದು ಸಮಾಜದಲ್ಲಿ ಅಂಥದ್ದೇ ಅಧರ್ಮ, ಕೊಲೆ, ಸುಲಿಗೆ, ವಂಚನೆ, ಭ್ರಷ್ಟಾಚಾರ ಹೆಚ್ಚಿದೆ, ಆದರೆ ಇಂದಿಗೂ ಪರಮ ಕಲ್ಯಾಣಕಾರಿ ಗುರುತತ್ವವು ಸನಾತನ ಧರ್ಮದ ರಕ್ಷಣೆಗಾಗಿ ಹಾಗೂ ಭವ್ಯ ಭಾರತದ ನಿರ್ಮಾಣಕ್ಕಾಗಿ ಕಾರ್ಯನಿರತವಾಗಿದೆ. ನಮ್ಮ ಕರ್ತವ್ಯವೇನೆಂದರೆ, ಒಬ್ಬ ವ್ಯಕ್ತಿಯಾಗಿ ಕೇವಲ ತನ್ನ ಕುಟುಂಬದ ಬಗ್ಗೆ ಮಾತ್ರ ಯೋಚಿಸದೆ, ರಾಷ್ಟ್ರ ಮತ್ತು ಧರ್ಮಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದು ಅತ್ಯಂತ ಮಹತ್ವದಾಗಿದೆ. ನಿಜವಾದ ಅರ್ಥದಲ್ಲಿ ಸುಖ-ಸಂತೋಷವನ್ನು ಪಡೆಯಬೇಕಾದರೆ, ಧರ್ಮವನ್ನು ನಿಷ್ಠೆಯಿಂದ ಪಾಲಿಸಬೇಕು. ಕೇವಲ ವೈಯಕ್ತಿಕ ಉಪಾಸನೆಗೆ ಸೀಮಿತವಾಗದೆ ಸಮಾಜದಲ್ಲಿ ಧರ್ಮ ಪ್ರಸಾರ ಮತ್ತು ಧರ್ಮ ಜಾಗೃತಿ ಮಾಡುವುದು ಕಾಲದ ಅವಶ್ಯಕತೆಯಾಗಿದೆ. ಅದಕ್ಕಾಗಿ ನಮ್ಮ ಕ್ಷೇತ್ರಗಳನ್ನು ವಿಸ್ತರಿಸಿ, ವೃತ್ತಿ-ವ್ಯವಹಾರ, ಮನೆ-ಕೆಲಸಗಳಿಂದ ಸಮಯ ತೆಗೆದು ಅದನ್ನು ರಾಷ್ಟ್ರ ಧರ್ಮದ ಕಾರ್ಯಕ್ಕಾಗಿ ಸಮರ್ಪಣೆ ಮಾಡೋಣ. ಇತಿಹಾಸದಲ್ಲಿ ವೈಯಕ್ತಿಕ ಸ್ವಾರ್ಥವನ್ನು ಬದಿಗಿಟ್ಟು ರಾಷ್ಟ್ರ-ಧರ್ಮ ಯಜ್ಞ ಕಾರ್ಯದಲ್ಲಿ ಸಮಿಧೆಯಾಗಿ ತಮ್ಮನ್ನು ಅರ್ಪಿಸಿಕೊಂಡವರ ಹೆಸರುಗಳೇ ಸುವರ್ಣಾಕ್ಷರಗಳಲ್ಲಿ ದಾಖಲಾಗಿದೆ, ಹಾಗಾಗಿ ಇಂದೇ ನಾವು ಈ ದಿಶೆಯಲ್ಲಿ ಧೃಢ ಸಂಕಲ್ಪ ಮಾಡೋಣ ಎಂದರು.

ಹಿಂದೂ ಜಾಗರಣ ವೇದಿಕೆಯ ಪ್ರಾಂತೀಯ ಕಾರ್ಯಕಾರಿಣಿ ಸದಸ್ಯರಾದ ಶ್ರೀ. ರಾಧಾಕೃಷ್ಣ ಅಡ್ಯಂತಾಯ ಇವರು ಮಾತನಾಡಿ ಈ ಜಗತ್ತಿನಲ್ಲಿ ಇರುವಂತಹದ್ದು ಕೇವಲ ಹಿಂದೂ ಧರ್ಮ ಮಾತ್ರ, ಉಳಿದವುಗಳೆಲ್ಲವೂ ಪಂಥಗಳಾಗಿವೆ. ಅದೇ ರೀತಿ ನಮ್ಮ ಭಾರತವು ಪವಿತ್ರ ಭೂಮಿಯಾಗಿದೆ. ಭಕ್ತ ಪ್ರಹ್ಲಾದ, ಭಕ್ತ ಮಾರ್ಕಂಡೇಯ, ದ್ರೌಪದಿ ಮಾತೆ, ಛತ್ರಪತಿ ಶಿವಾಜಿ ಮಹಾರಾಜರು, ಸ್ವಾಮಿ ವಿವೇಕಾನಂದರಂತವರು ಜನ್ಮ ತಾಳಿದಂತಹ ದೇಶ ಭಾರತ ಭೂಮಿ. ಅದೇ ರೀತಿ ಗುರು-ಶಿಷ್ಯ ಪರಂಪರೆಯು ಭಾರತ ದೇಶ ಹಾಗೂ ಹಿಂದೂ ಧರ್ಮದ ಮೂಲ ಧ್ಯೇಯವಾಗಿದೆ. ಗುರು ಪರಂಪರೆಯು ಶಿಷ್ಯನಲ್ಲಿ ಬ್ರಾಹ್ಮತೇಜವನ್ನು ನೀಡುವುದರೊಂದಿಗೆ ಕ್ಷಾತ್ರ ತೇಜವನ್ನು ನೀಡಿ ಧರ್ಮ ಹಾಗೂ ಜಗತ್ತಿನ ಉದ್ಧಾರ ಮಾಡಿದೆ ಎಂದು ಹೇಳಿದರು.

Leave a Reply

Your email address will not be published. Required fields are marked *