ಪುತ್ತೂರು:(ಜು.16) ನಗರದ ಸರಕಾರಿ ಸಾರ್ವಜನಿಕ ಆಸ್ಪತ್ರೆ ರಸ್ತೆಯ ಪ್ರೆಸ್ ಕ್ಲಬ್ ಸಮೀಪ ನೀರು ಹರಿಯುವ ಚರಂಡಿಗೆ ಹಾಕಲಾಗಿದ್ದ ಸ್ಲ್ಯಾಬ್ ಮೇಲೆ ನಿರ್ಲಕ್ಷ್ಯದಿಂದ ಲಾರಿಯನ್ನು ಚಲಾಯಿಸಿದ ಪರಿಣಾಮ ಸ್ಲ್ಯಾಬ್ ಮುರಿದು ಚರಂಡಿಗೆ ಬಿದ್ದಿದೆ.

ಮಂಗಳವಾರ ಮಧ್ಯಾಹ್ನ ಈ ಘಟನೆ ಸಂಭವಿಸಿದೆ. ಪಕ್ಕದಲ್ಲಿ ಸರಕಾರಿ ಆಸ್ಪತ್ರೆಯ ಲ್ಯಾಬ್ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಅಲ್ಲಿಗೆ ಸರಕು ಸಾಮಾನುಗಳನ್ನು ತರುತ್ತಿದ್ದ ಲಾರಿಯ ಚಾಲಕ ನಿರ್ಲಕ್ಷ್ಯ ವಹಿಸಿ ಏಕಾಏಕಿ ಸ್ಲ್ಯಾಬ್ ಮೇಲೆ ಲಾರಿ ಚಲಾಯಿಸಿದ್ದಾನೆ. ಪರಿಣಾಮ ಭಾರ ತಾಳಲಾರದೆ ಸ್ಲ್ಯಾಬ್‍ಗಳು ಮುರಿದು ಛಿದ್ರವಾಗಿದೆ. ಅದೃಷ್ಟವಶಾತ್ ಲಾರಿಯ ಚಕ್ರ ಚರಂಡಿಯಲ್ಲಿ ಸಿಲುಕಿಕೊಳ್ಳುವುದು ತಪ್ಪಿದೆ.

ಲ್ಯಾಬ್‍ನ ಕಾಮಗಾರಿ ಆರಂಭವಾದ ಬಳಿಕ ಜನನಿಬಿಡ ಮತ್ತು ಕಿರಿದಾದ ಜಾಗದಲ್ಲಿ ಲಾರಿಗಳು ಚಲಿಸಿ ಸಮಸ್ಯೆಗಳು ಉಂಟಾಗುತ್ತಲೇ ಇದೆ. ಸಂಬಂಧಪಟ್ಟ ಗುತ್ತಿಗೆದಾರರೂ ಈ ಕುರಿತು ನಿಗಾ ವಹಿಸುತ್ತಿಲ್ಲ ಎನ್ನುವ ಆರೋಪ ಸ್ಥಳೀಯರಿಂದ ಕೇಳಿಬಂದಿದೆ.


ಲಾರಿ ಚಾಲಕನ ನಿರ್ಲಕ್ಷ್ಯದಿಂದ ನಗರಸಭೆ ಸೊತ್ತುಗಳಿಗೆ ಉಂಟಾಗಿರುವ ನಷ್ಟದ ಕುರಿತು ನಗರಸಭಾ ಆಡಳಿತಕ್ಕೆ ಪ್ರೆಸ್ ಕ್ಲಬ್ ನಿಂದ ದೂರು ನೀಡಲಾಗಿದೆ.
