Fri. Jul 18th, 2025

ಮಂಗಳೂರು : ಸಾಲ ಕೊಡುವುದಾಗಿ ಕೋಟ್ಯಂತರ ರೂ. ವಂಚನೆ – ಬಹುಕೋಟಿ ವಂಚಕನ ರಹಸ್ಯ ಅಡಗುತಾಣ ಭೇದಿಸಿದ ಪೊಲೀಸರು!

ಮಂಗಳೂರು (ಜು.18): ಸಾಲ ಕೊಡುವುದಾಗಿ ಕೋಟ್ಯಂತರ ರೂ ಹಣ ಪಡೆದು ಉದ್ಯಮಿಗಳಿಗೆ ವಂಚಿಸಿದ ನಟೋರಿಯಸ್​ ವಂಚಕನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ರೋಹನ್ ಸಲ್ಡಾನಾ (45) ಬಂಧಿತ ಆರೋಪಿ. ಗುರುವಾರ ರಾತ್ರಿ ತನ್ನ ಐಷಾರಾಮಿ ಬಂಗಲೆಯಲ್ಲಿ ಮಲೇಶಿಯಾ ಯುವತಿರ ಜೊತೆ ಪಾರ್ಟಿ ಮಾಡುತ್ತಿರುವಾಗಲೇ ಎಂಟ್ರಿ ಕೊಟ್ಟ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: 💐💐ಧರ್ಮಸ್ಥಳ: ಹೆಡ್ ಕಾನ್ಸ್ಟೇಬಲ್ ಶಶಿಧರ್ ಡಿ.ಎನ್‌ ರವರಿಗೆ ಬಡ್ತಿ


ದೇಶದ ಐಷಾರಾಮಿ ವ್ಯಕ್ತಿಗಳು ಮತ್ತು ಉದ್ಯಮಿಗಳೇ ಈತನ ಟಾರ್ಗೆಟ್. ಸುಮಾರು ವರ್ಷಗಳಿಂದ ಇದನ್ನೇ ಕಾಯಕ ಮಾಡಿಕೊಂಡಿರುವ ರೋಹನ್​ 200 ಕೋಟಿಗೂ ಅಧಿಕ ಹಣ ವಂಚಿಸಿದ್ದಾನೆ. ಸದ್ಯ ಉದ್ಯಮಿಯೊಬ್ಬರು ನೀಡಿದ ದೂರಿನ ಮೇರೆಗೆ ಆತನನ್ನು ಬಂಧಿಸಲಾಗಿದೆ.

ಶ್ರೀಮಂತ ವ್ಯಕ್ತಿಗಳಿಗೆ ಗಾಳ
ಆರೋಪಿ ರೋಹನ್ ಸಲ್ಡಾನಾ, ಭೂ ವ್ಯವಹಾರ ಸೇರಿ ಉದ್ಯಮಿಯೆಂದು ಬಿಂಬಿಸಿಕೊಂಡು ಶ್ರೀಮಂತರ ವಿಶ್ವಾಸ ಗಳಿಸುತ್ತಿದ್ದ. ಹೊರರಾಜ್ಯ, ಹೊರ ಜಿಲ್ಲೆಯ ಶ್ರೀಮಂತ ವ್ಯಕ್ತಿಗಳಿಗೆ ಗಾಳ ಹಾಕುತ್ತಿದ್ದ. ಮಂಗಳೂರಿನ ಜಪ್ಪಿನಮೊಗರುವಿನ‌ ಐಷಾರಾಮಿ ಬಂಗಲೆಗೆ ಕರೆದು ವ್ಯವಹಾರ ಮಾಡುತ್ತಿದ್ದ. ಈತನ ಬಂಗಲೆ, ಜೀವನಶೈಲಿಗೆ ಉದ್ಯಮಿಗಳು ಮಾರುಹೋಗಿದ್ದರು. ಬಣ್ಣದ ಮಾತಿಗೆ ಮರುಳಾಗಿ ಹಿಂದು-ಮುಂದು ನೋಡದೆ ಕೋಟ್ಯಂತರ ರೂ ಹಣ ನೀಡಿದ್ದಾರೆ.
ಮೊದಲ ಸುತ್ತಿನ ಮಾತುಕತೆ ಬಳಿಕ ಉದ್ಯಮಿಗಳಿಗೆ ತನ್ನ ವಂಚನೆ ಜಾಲದ ಖೆಡ್ಡಾಕ್ಕೆ ಬೀಳಿಸುತ್ತಿದ್ದ ರೋಹನ್, 50 ಕೋಟಿಯಿಂದ 100 ಕೋಟಿ ರೂ. ವ್ಯವಹಾರ ಅಥವಾ ಅದಕ್ಕಿಂತ ದೊಡ್ಡ ಮೊತ್ತದ ಸಾಲ ನೀಡಲು ಹಣಕ್ಕೆ ಬೇಡಿಕೆ ಇಡುತ್ತಿದ್ದ. ತಾನು ನಿರೀಕ್ಷೆ ಮಾಡಿದಷ್ಟು ಹಣ ವಸೂಲಿಯಾದ ಬಳಿಕ ಉದ್ಯಮಿಗಳಿಗೆ ನಾನಾ ನೆಪ ಹೇಳಿ ಎಸ್ಕೇಪ್ ಆಗುತ್ತಿದ್ದ. ಹೀಗೆ ಕೇವಲ 3 ತಿಂಗಳಲ್ಲೇ 45 ಕೋಟಿ ರೂ ವ್ಯವಹಾರ ನಡೆಸಿರುವುದು ಪತ್ತೆ ಆಗಿದೆ.

ಹೈಡ್ ಔಟ್ ರೂಮ್
ಆರೋಪಿ ರೋಹನ್ ಸಲ್ಡಾನಾನ ಐಷಾರಾಮಿ ಬೆಡ್ ರೂಮ್​​ ಬಳಿ ಹೈಡ್ ಔಟ್ ರೂಮ್ ಇದೆ. ಬೆಡ್ ರೂಮ್​​ ಕಬೋರ್ಡ್ ಒಳಗೆ ಒಂದು ಹಿಡನ್ ಡೋರ್​ ಇದೆ. ಅದನ್ನು ತಳ್ಳಿದ್ದರೆ ವಿಶಾಲವಾದ ರೂಮ್​ ಇದೆ. ಪೊಲೀಸರು ಅಥವಾ ಮೋಸ ಹೋದವರು ಬಂದರೆ ಇದೇ ರೂಮ್​ನಲ್ಲಿ ಆತ ಅಡಗಿಕೊಳ್ಳುತ್ತಿದ್ದ.

ಇನ್ನು ರೋಹನ್ ಸಲ್ಡಾನಾ ಮನೆ ನೋಡಿ ಪೊಲೀಸರೇ ಶಾಕ್ ಆಗಿದ್ದಾರೆ. ಏಕೆಂದರೆ ಮನೆ ತುಂಬಾ ವಿದೇಶಿ ಮದ್ಯಗಳ ರಾಶಿಯೇ ಇದೆ. ಕೋಟಿ ಕೋಟಿ ಮೌಲ್ಯದ ವಿದೇಶಿ ಮದ್ಯ ಮನೆಯಲ್ಲಿ ಪತ್ತೆ ಆಗಿದೆ. ಬಂದ ಅತಿಥಿಗಳಿಗೆ ರಾಜಾತಿಥ್ಯ ಸಿಗುತ್ತಿತ್ತು. ಮನೆಯ ಬಾರ್ ಕೌಂಟರ್ ಐಷಾರಾಮಿ ಪಬ್​​ನ್ನು ಮೀರಿಸುವಂತಿದೆ.

ರೋಹನ್ ಸಲ್ಡಾನಾ ಯಾರು?
ರೋಹನ್ ಸಲ್ಡಾನಾ ಹುಟ್ಟುತ್ತಲೇ ಶ್ರೀಮಂತನಲ್ಲ. 2016ರವರೆಗೂ ಕಷ್ಟದ ಜೀವನ ಮಾಡುತ್ತಿದ್ದ. ವಂಚನೆಯ ಜಾಲಕ್ಕೂ ಮುನ್ನ ಮುಂಬೈಯಲ್ಲಿ ಕೆಲಸ ಮಾಡಿಕೊಂಡಿದ್ದ. ತನಗೆ ಪ್ರಸಿದ್ಧ ಉದ್ಯಮಿಗಳ ಪರಿಚಯ ಇದೆ ಅಂತಾ ಹೇಳಿಕೊಳ್ಳುತ್ತಿದ್ದ.2016ರ ಬಳಿಕ ವಂಚನೆಯ ಜಾಲಕ್ಕೆ ಕೈ ಹಾಕಿದ್ದ. ಹಣದಾಸೆಯಿಂದ ವಂಚನೆಯ ಜಾಲವನ್ನು ವಿಸ್ತಾರ ಮಾಡಿಕೊಂಡಿದ್ದ. ಇದೇ ವರ್ಷ ಜನವರಿಯಲ್ಲಿ ಮತ್ತೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ. ಆ ಬಳಿಕ ಕೋಟ್ಯಂತರ ರೂ. ವಂಚನೆ ಗೆ ಕೈ ಹಾಕಿದ್ದ. ಈ ನಿಟ್ಟಿನಲ್ಲಿ ಕಳೆದ ಮೂರು ತಿಂಗಳ ಅವಧಿಯಲ್ಲಿ 40 ಕೋಟಿ ರೂ. ವ್ಯವಹಾರ ಮಾಡಿದ್ದ. ಕಳೆದ ತಿಂಗಳು 10 ಕೋಟಿ ರೂ. ಮೌಲ್ಯದ ಫಿಶಿಂಗ್ ಬೋಟ್ ತಯಾರು ಮಾಡಲು ಹೂಡಿಕೆ ಮಾಡಿದ್ದ.

Leave a Reply

Your email address will not be published. Required fields are marked *