ಉಜಿರೆ:(ಜು.19) ಸಮಯವನ್ನು ಖರೀದಿಸಲು ಸಾಧ್ಯವಿಲ್ಲ. ಸೃಜನಶೀಲತೆ ಮತ್ತು ಸಮಯದ ಸದುಪಯೋಗ ಪಡೆದುಕೊಂಡರೆ ಶಿಕ್ಷಣದಲ್ಲಿ ಕ್ರಾಂತಿ ನಡೆಸಲು ಸಾಧ್ಯವಾಗುತ್ತದೆ. ಕಲಿಕೆಯಿಂದ ಮಾತ್ರ ಗಳಿಕೆ ಸಾಧ್ಯ ಶಕ್ತಿ ಮತ್ತು ಯುಕ್ತಿಯು ವ್ಯಕ್ತಿಯ ಸಮಗ್ರ ಅಭಿವೃದ್ಧಿ ಪೂರಕವಾಗಿದೆ. ಸಣ್ಣ ಸಣ್ಣ ವಿಷಯಗಳಿಗೆ ಮನಸ್ಸು ನೀಡಿ ಸರಿಯಾದ ದಾರಿಯಲ್ಲಿ ನಡೆದರೆ, ವಿದ್ಯಾರ್ಥಿ ಜೀವನ ಸಾರ್ಥಕತೆ ಪಡೆಯುವುದು. ಮನಸ್ಸು ಹತೋಟಿಯಲ್ಲಿ ಇದ್ದರೆ ದೈಹಿಕ ಸಾಮರ್ಥ್ಯದಿಂದ ಯಶಸ್ಸು ಖಂಡಿತ ಸಾಧ್ಯ. ಕಷ್ಟ ಪಟ್ಟರೆ ಜೀವನ ಸಾರ್ಥಕತೆ ಪಡೆಯುತ್ತದೆ, ಎಂದು ಸಾಣೂರಿನ ವಿದ್ಯಾರಶ್ಮಿ ಮಹಾವಿದ್ಯಾಲಯದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಶ್ವಿನ್ ಎಲ್ ಶೆಟ್ಟಿ ತಿಳಿಸಿದರು.

ಇದನ್ನೂ ಓದಿ: 🟣ಉಜಿರೆ: ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯಲ್ಲಿ
ಅವರು ಇಂದು (ಜುಲೈ 19) ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ತರಗತಿ ಪ್ರತಿನಿಧಿಗಳ ಹಾಗೂ ಸ್ವಚ್ಛತಾ ಸೇನಾನಿಗಳ ಪದ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ಕಲಿಕೆಯು ಕಬ್ಬಿಣದ ಕಡಲೆ ಅಲ್ಲ. ಸಂತಸದ ಕಲಿಕೆ ಉತ್ತಮ ಫಲಿತಾಂಶ ಪಡೆಯಲು ಸಹಾಯ ಮಾಡುತ್ತದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಯುವಜನತೆ ಅಭಾವ ಇದ್ದು, ಪ್ರಪಂಚವು ಈಗಿನ ಯುವಜನರ ನಿರೀಕ್ಷೆಯಲ್ಲಿ ಇದೆ. ಜ್ಞಾನ ಶಕ್ತಿ ಇದ್ದಂತೆ. ಇದೇ ಶಕ್ತಿಯು ವ್ಯಕ್ತಿಯನ್ನು ಸ್ವಾವಲಂಬಿಯನ್ನಾಗಿ ಮತ್ತು ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಸಹಾಯ ಮಾಡುತ್ತದೆ. ಭಯವನ್ನು ಅರ್ಥೈಸಿ ಸಾಹಸಕ್ಕೆ ಪ್ರಯತ್ನಿಸಿದರೆ ಉತ್ತಮ ನಾಗರಿಕರಾಗಿ ಬೆಳೆಯಲು ಸಾಧ್ಯವಾಗುತ್ತದೆ. ನಕಾರಾತ್ಮಕ ಚಿಂತನೆಗಳಿಗೆ ಅವಕಾಶ ಕಲ್ಪಿಸದೆ, ಜೀವನವನ್ನು ಅನುಭವಿಸಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ತರಗತಿ ಪ್ರತಿನಿಧಿಗಳಿಗೆ ಪ್ರಮಾಣ ವಚನ ಭೋದಿಸಿ ಮಾತನಾಡಿದ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರಮೋದ್ ಕುಮಾರ್ ಬಿ, ಶಿಕ್ಷಣವು ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಇದು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮತ್ತು ವ್ಯಕ್ತಿತ್ವ ವಿಕಸನಕ್ಕೂ ಸಹಾಯ ಮಾಡುತ್ತದೆ. ಸಂವಹನ ಕಲೆ ಅತೀ ಮುಖ್ಯ, ಇದರಿಂದ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಸ್ವಚ್ಚತಾ ಸೇನಾನಿಗಳಿಗೆ ಕಾಲೇಜಿನ ಉಪ ಪ್ರಾಂಶುಪಾಲ ಡಾ. ರಾಜೇಶ್ ಬಿ ಪ್ರಮಾಣ ವಚನ ಬೋಧಿಸಿದರು.
ಇದೇ ಸಂದರ್ಭದಲ್ಲಿ 2024-25 ಶೈಕ್ಷಣಿಕ ವರ್ಷದಲ್ಲಿ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ 4 ನೇ ಸ್ಥಾನ, ಜಿಲ್ಲೆಗೆ 2 ನೇ, ಹಾಗೂ ತಾಲೂಕು ಮತ್ತು ಕಾಲೇಜಿಗೆ ಪ್ರಥಮ ಸ್ಥಾನ ಪಡೆದ ತುಷಾರ ಇವರನ್ನು ಅಭಿನಂದಿಸಲಾಯಿತು.

ತರಗತಿ ಪ್ರತಿನಿಧಿ ಅಮೂಲ್ಯ ಪ್ರಭು ಸ್ವಾಗತಿಸಿ, ಸುಮಿತ್ ವಂದಿಸಿದರು. ಕಾರ್ಯಕ್ರಮವನ್ನು ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಹಂಸಿನಿ ಭಿಡೆ ಮತ್ತು ದ್ವಿತೀಯ ಕಲಾ ವಿಭಾಗದ ವಿದ್ಯಾರ್ಥಿ ಧರೇಶ್ ಕಾರ್ಯಕ್ರಮ ನಿರೂಪಿಸಿದರು.
