Sun. Jul 20th, 2025

ಬೆಳ್ತಂಗಡಿ: ಅಕಾಲಿಕ ಮರಣ ಹೊಂದಿದ ಇಳಂತಿಲ ಗ್ರಾಮ ಪಂಚಾಯತ್ ಅಧ್ಯಕ್ಷ ವಸಂತ ಶೆಟ್ಟಿ ಮತ್ತು ಸದಸ್ಯ ಸುಪ್ರೀತ್ ಪಾಡೆಂಕಿ ರವರುಗಳಿಗೆ ನುಡಿನಮನ

ಬೆಳ್ತಂಗಡಿ:(ಜು.20) ಕಳೆದ ಜುಲೈ 17 ರಂದು ಅಕಾಲಿಕ ಮರಣ ಹೊಂದಿದ ಇಳಂತಿಲ ಗ್ರಾಮ ಪಂಚಾಯತ್ ಅಧ್ಯಕ್ಷ ವಸಂತ ಶೆಟ್ಟಿ ಮತ್ತು ಇತ್ತೀಚೆಗೆ ಮರಣ ಹೊಂದಿದ ಮಾಜಿ ಉಪಾಧ್ಯಕ್ಷ, ಹಾಲಿ ಸದಸ್ಯ ಸುಪ್ರೀತ್ ಪಾಡೆಂಕಿ ರವರುಗಳಿಗೆ ನುಡಿನಮನ ಕಾರ್ಯಕ್ರಮವು ಇಳಂತಿಲ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ನುಡಿನಮನ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ ಭಾಗವಹಿಸಿ ಅಗಲಿದ ನಾಯಕರುಗಳಿಗೆ ಪುಷ್ಪ ನಮನ ಸಲ್ಲಿಸಿದರು. ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸವಿತಾ ಅಧ್ಯಕ್ಷತೆ ವಹಿಸಿದ್ದರು.

ನುಡಿ ನಮನ ಸಲ್ಲಿಸಿ ಮಾತನಾಡಿದ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ, ಅಪರ ಸರ್ಕಾರಿ ವಕೀಲರಾದ ಮನೋಹರ ಕುಮಾರ್ ರವರು ವಸಂತ ಶೆಟ್ಟಿಯವರು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಜಾತಿ, ಮತ, ಪಕ್ಷ ಬೇಧ ಮರೆತು ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವ ಮೂಲಕ ಗ್ರಾಮದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದ ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂದರು. ಅದೇ ರೀತಿ ಸೌಂಡ್ಸ್ ಮತ್ತು ಲೈಟಿಂಗ್ಸ್ ವ್ಯವಹಾರ ಮಾಡುತ್ತಿದ್ದ ಅವರಿಗೆ ಹಲವಾರು ಗ್ರಾಹಕರು ಹಣ ನೀಡಲು ಬಾಕಿ ಇರುವುದಾಗಿ ತಿಳಿದು ಬಂದಿದ್ದು ಅಂತಹವರು ಅವರ ಬಾಕಿ ಹಣವನ್ನು ಅವರ ಮನೆಯವರಿಗೆ ನೀಡುವ ಮೂಲಕ ಅವರ ಮನೆಯವರ ಕಷ್ಟಕ್ಕೆ ನೆರವಾಗಬೇಕೆಂದು ವಿನಂತಿಸಿದರು.

ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚಂದ್ರಿಕಾ ಭಟ್ ರವರು ಮಾತನಾಡುತ್ತಾ ಕಳೆದ ವರ್ಷ ಮರಣ ಹೊಂದಿದ ಸದಸ್ಯರಾಗಿದ್ದ ರೇಖಾ ಅಂತರ, ಅಧ್ಯಕ್ಷ ವಸಂತ ಶೆಟ್ಟಿ ಮತ್ತು ಸದಸ್ಯ ಸುಪ್ರೀತ್ ಪಾಡೆಂಕಿಯವರ ಅಕಾಲಿಕ ಮರಣ ನಮ್ಮ ಗ್ರಾಮ ಪಂಚಾಯತ್ ಗೆ ತುಂಬಲಾರದ ನಷ್ಟ ಉಂಟಾಗಿದ್ದು ಅಗಲಿದ ದಿವ್ಯ ಆತ್ಮಗಳಿಗೆ ಚಿರ ಶಾಂತಿ ದೊರಕಲಿ ಎಂದು ಪ್ರಾರ್ಥಿಸಿದರು.

ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರುಗಳಾದ ಪನ್ಯ ಶಂಕರ ಭಟ್, ಯು ಕೆ ಇಸುಬು, ಗ್ರಾಮ ಪಂಚಾಯತ್ ಕಾರ್ಯದರ್ಶಿ ವಿಜಯ, ಬಿ, ಗ್ರಾಮ ಪಂಚಾಯತ್ ಸದಸ್ಯ ಸಿದ್ದೀಕ್, ಮಾಜಿ ತಾಲೂಕು ಪಂಚಾಯತ್ ಸದಸ್ಯ ಈಶ್ವರ ಭಟ್, ಉಪ್ಪಿನಂಗಡಿ ಸಿ ಎ ಬ್ಯಾಂಕ್ ಮಾಜಿ ಅಧ್ಯಕ್ಷ ಕೆ ವಿ ಪ್ರಸಾದ್, ಇಂಜಿನಿಯರ್ ಗಫೂರ್ ಸಾಬ್, ಜನಾರ್ಧನ ಗೌಡ, ಅಣ್ಣಾಜೆ, ಮಾಜಿ ಗ್ರಾಮ ಪಂಚಾಯತ್ ಸದಸ್ಯೆ ಸುಮತಿ ನೂಜ, ಶಂಕರ ಭಟ್ , ನಿಡ್ಡಾಜೆ, ಗ್ರಾಮ ಪಂಚಾಯತ್ ಸಿಬಂದಿ ಸುಂದರ ನಾಯ್ಕ ಮುಂತಾದವರು ನುಡಿ ನಮನ ಸಲ್ಲಿಸಿದರು. ಮೃತರ ಆತ್ಮಕ್ಕೆ ಶಾಂತಿ ಕೋರಿ 1 ನಿಮಿಷದ ಮೌನ ಪ್ರಾರ್ಥನೆ ನಡೆಸಲಾಯಿತು.

Leave a Reply

Your email address will not be published. Required fields are marked *