ಸುಬ್ರಮಣ್ಯ:(ಜು.23) ಕೆಲಸಕ್ಕೆಂದು ಹೋಗಿದ್ದ ಆಂಬ್ಯುಲೆನ್ಸ್ ಚಾಲಕ ನಾಪತ್ತೆಯಾಗಿರುವ ಘಟನೆ ಸುಬ್ರಮಣ್ಯದಲ್ಲಿ ನಡೆದಿದೆ. ಸುಬ್ರಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದ ಉದ್ಯೋಗಿ ಹೊನ್ನಪ್ಪ ದೇವರಗದ್ದೆ ನಾಪತ್ತೆಯಾದವರು.

ಜುಲೈ .22 ರಂದು ಆಂಬ್ಯುಲೆನ್ಸ್ ಚಾಲಕ ಕೆಲಸಕ್ಕೆ ಮನೆಯಿಂದ ಮುಂಜಾನೆ ಹೋಗಿದ್ದು ಮೊಬೈಲ್ ಬಿಟ್ಟು ಹೋದ ಕಾರಣ ಆಸ್ಪತ್ರೆಯ ಸಿಬ್ಬಂದಿಯವರಿಗೆ ಫೋನ್ ಮಾಡಿ ಮನೆಯಲ್ಲಿಯೇ ಫೋನ್ ಬಿಟ್ಟು ಬಂದಿದ್ದು ಅವರಿಗೆ ತಿಳಿಸಿ ಎಂದು ಪತ್ನಿ ಹೇಳಿದ್ದರು. ನಂತರ ಆಸ್ಪತ್ರೆಯ ಸಿಬ್ಬಂದಿ ರಜೆ ಹಾಕಿ ಆಸ್ಪತ್ರೆಯಿಂದ ಹೋಗಿರುವುದಾಗಿ ತಿಳಿಸಿದ್ದು ಮಧ್ಯಾಹ್ನದವರೆಗೆ ಮನೆಗೆ ಬಾರದೇ ಇರುವುದರಿಂದ ಆಸ್ಪತ್ರೆಗೆ ಫೋನ್ ಮಾಡಿ ವಿಚಾರಿಸಿದಾಗ ಆಸ್ಪತ್ರೆಯಲ್ಲಿಯೇ ಸ್ಕೂಟಿ ಬಿಟ್ಟು ಹೋಗಿರುವುದಾಗಿ ತಿಳಿಸಿದ್ದಾರೆ.

ಪತ್ನಿ ಗಾಬರಿಗೊಂಡು ವಿಷಯವನ್ನು ದೇವಸ್ಥಾನದಲ್ಲಿ ಕೆಲಸ ಮಾಡುವ ಎಲ್ಲರಿಗೂ ತಿಳಿಸಿದ್ದು, ತನ್ನ ಗಂಡ ಕಾಣೆಯಾದ ಬಗ್ಗೆ ಊರಿನ ಗ್ರಾಮಸ್ಥರಿಗೂ ತಿಳಿದು ಎಲ್ಲಾ ಕಡೆ ಹುಡುಕಾಟ ಮಾಡಿದರೂ ಪತ್ತೆಯಾಗಿರುವುದಿಲ್ಲ. ನಂತರ ಸುಬ್ರಮಣ್ಯ ಅಗ್ರಹಾರ ಸೋಮನಾಥೇಶ್ವರ ದೇವಸ್ಥಾನದ ಸಿಸಿ ಕ್ಯಾಮೆರಾವನ್ನು ಪರಿಶೀಲಿಸಿದಾಗ ಕುಮಾರಧಾರ ನದಿ ಕಡೆಗೆ ಹೋಗುತ್ತಿರುವುದು ಕಂಡು ಬಂದಿದ್ದು, ನಂತರ ನದಿ ದಡದಲ್ಲಿ ಮತ್ತು ಸುತ್ತಮುತ್ತ ಹುಡುಕಾಟ ಮಾಡಿದರೂ ಪತ್ತೆಯಾಗಿರುವುದಿಲ್ಲ.

ಆದುದರಿಂದ ಕಾಣೆಯಾದ ಪತಿಯನ್ನು ಹುಡುಕಿ ಕೊಡುವಂತೆ ಪತ್ನಿಯ ದೂರಿನಲ್ಲಿ ತಿಳಿಸಿದ್ದಾರೆ. ಇದೀಗ ಈ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶೋಧ ಕಾರ್ಯ ತೀವ್ರಗೊಳ್ಳಿದ್ದು, SDRF ತಂಡ ಸ್ಥಳಕ್ಕೆ ಆಗಮಿಸಿ ಕುಮಾರಧಾರ ನದಿಗೆ ಬಿದ್ದಿರುವ ಶಂಕೆ ಹಿನ್ನೆಲೆಯಲ್ಲಿ ಶೋಧ ಕಾರ್ಯದಲ್ಲಿ ತೊಡಗಿದೆ. ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಾಜೇಶ್ ಎನ್.ಎಸ್., ಸಮಾಜ ಸೇವಕ ಡಾ. ರವಿ ಕಕ್ಕೆಪದವು, ಹಾಗೂ 30 ರಿಂದ 40 ಯುವಕರ ತಂಡ ಸಹ ಶೋಧ ಕಾರ್ಯದಲ್ಲಿ ಭಾಗಿಯಾಗಿದ್ದಾರೆ.

