ಕಾರವಾರ :(ಜು.24) ಕಾರವಾರ ತಾಲೂಕಿನ ಕಣಸಗಿರಿ ಗ್ರಾಮದ ಸರ್ವೆ ನಂಬರ್ 95 ರಲ್ಲಿ ಜಿಲ್ಲಾ ನಿರ್ಮಿತಿ ಕೇಂದ್ರದ ವತಿಯಿಂದ 2023 ರಿಂದ ಗೋಶಾಲೆ ನಿರ್ಮಾಣ ಕಾಮಗಾರಿ ಮಾಡಿದ್ದು, ಇದರಲ್ಲಿ ಲಕ್ಷಾಂತರ ರೂಪಾಯಿಗಳ ಅವ್ಯವಹಾರ, ಅತ್ಯಂತ ಕಳಪೆ ಗುಣಮಟ್ಟದ ಕಾಮಗಾರಿ ಮತ್ತು ಕಾನೂನುಬಾಹಿರ ಕಾಮಗಾರಿ ಹಾಗೂ ಅವಶ್ಯಕತೆ ಇರುವ ಸಾಮಗ್ರಿಗಳ ಖರೀದಿಯಲ್ಲೂ ಅವ್ಯವಹಾರ ನಡೆದಿರುವುದು ಗಮನಕ್ಕೆ ಬಂದಿದೆ. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು, ಅತ್ಯಂತ ಕಳಪೆ ಮಟ್ಟದ ಕಾಮಗಾರಿಯನ್ನು ಮಾಡಿ ಲಕ್ಷಾಂತರ ರೂಪಾಯಿಗಳ ಅವ್ಯವಹಾರ ಮಾಡಿದ್ದು, ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರರಾದ ಶ್ರೀ. ಮೋಹನ ಗೌಡ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Murder: ಸಂಗಾತಿ, ಮಗಳ ಕೊಂದು ಲಿಪ್ ಸ್ಟಿಕ್ನಲ್ಲಿ ಗೋಡೆ ಮೇಲೆ ಆರೋಪಿ ಬರೆದಿದ್ದೇನು?
ಅವರು ಬುಧವಾರ 23 ಜುಲೈ ರಂದು ಕಾರವಾರದ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾ ಪರಿಷತ್ತಿನಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಸನಾತನ ಗೋಮಾತಾ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷರಾದ ಶ್ರೀ. ಸಂದೀಪ ಆರ್ ಗೋಕರ್ಣಕರ್, ಸನಾತನ ರಾಷ್ಟ್ರೀಯ ಸೇವಾ ಸಂಘದ ಅಧ್ಯಕ್ಷರಾದ ಶ್ರೀ. ಶರತ್, ಗೋರಕ್ಷಕರು ಮತ್ತು ಭಜರಂಗದಳದ ಪ್ರಮುಖರಾದ ಶ್ರೀ. ಅಮಿತ್ ಮಾಳಶೇಖರ, ಮತ್ತು ಭಗತ್ ಸಿಂಗ್ ಸೇನೆ ಅಧ್ಯಕ್ಷರಾದ ಶ್ರೀ. ಸೂರ್ಯಕಾಂತ ಇವರು ಉಪಸ್ಥಿತರಿದ್ದರು.
ಶ್ರೀ. ಮೋಹನ ಗೌಡ ಮುಂದೆ ಮಾತನಾಡಿ, ನಿರ್ಮಿತಿ ಕೇಂದ್ರವು ಈ ಕಾಮಗಾರಿಯನ್ನು 17-1-2023 ರಂದು ಪ್ರಾರಂಭಿಸಿದೆ. ಆದರೆ ಈ ಕಾಮಗಾರಿಗೆ ಪಶುಪಾಲನೆ ಇಲಾಖೆಯ ತಾಂತ್ರಿಕ ಅನುಮೋದನೆಯನ್ನು ಕಾಮಗಾರಿ ಮುಗಿದ ನಂತರ ಅಂದರೆ 22.10.2024 ರಂದು ಪಡೆದುಕೊಂಡಿದ್ದಾರೆ. ನಿಯಮಾನುಸಾರ ತಾಂತ್ರಿಕ ಅನುಮತಿಯನ್ನು ಕಾಮಗಾರಿ ಪ್ರಾರಂಭವಾಗುವ ಮೊದಲೇ ಪಡೆದುಕೊಳ್ಳಬೇಕು. ಗೋಶಾಲೆ ಕಾಮಗಾರಿಯ ಅಂದಾಜು ಮೊತ್ತ 50 ಲಕ್ಷ ರೂಪಾಯಿಗಳು. ಇಲ್ಲಿಯವರೆಗೆ ಅಪೂರ್ಣಗೊಂಡ ಕಾಮಗಾರಿಯ ಮೊತ್ತ 42.12 ಲಕ್ಷಗಳು. ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ನಮಗೆ ನೀಡಿರುವ ಮಾಹಿತಿ ಪ್ರಕಾರ ಬಿಲ್‌ನ ಮೊತ್ತ 38.90 ಲಕ್ಷ ರೂಪಾಯಿಗಳು ಹೀಗೆ ವ್ಯತ್ಯಾಸ ಕಂಡು ಬರುತ್ತಿದೆ, ಗೋಡೆಗಳ ನಿರ್ಮಾಣದ ಕೆಲಸಕ್ಕೆ ಅಂದಾಜು 5300/- ರೂಗಳ ಕಾಂಕ್ರೀಟ್ ಬ್ಲಾಕ್ ಗಳ ಅವಶ್ಯಕತೆ ಇದ್ದು, ಆವಶ್ಯವಿರುವ ಗೋಡೆಗಳ ನಿರ್ಮಾಣ ಕೆಲಸ ಪೂರ್ಣಗೊಂಡಿದೆ. ಆದರೆ ನಮಗೆ ನೀಡಿರುವ ಬಿಲ್ಲುಗಳ ಪ್ರಕಾರ ಇಲ್ಲಿವರೆಗೆ 3120 ರೂಪಾಯಿಯ ಕಾಂಕ್ರೀಟ್ ಬ್ಲಾಕ್ ಗಳು ಖರೀದಿಸಲಾಗಿದೆ. ಉಳಿದ ಬ್ಲಾಕುಗಳ ಖರೀದಿ ಬಗ್ಗೆ ಯಾವುದೇ ಬಿಲ್ಲುಗಳು ಲಭ್ಯ ಇಲ್ಲ, ಕಬ್ಬಿಣದ ಸರಳುಗಳ ಪ್ರಮಾಣ ಅಂದಾಜು ಪತ್ರಿಕೆಯಲ್ಲಿ 2601.05 ಕೆಜಿ ಇದೆ. ಆದರೆ ನಮಗೆ ನೀಡಿರುವ ಬಿಲ್ಲುಗಳ ಪ್ರಕಾರ 4248.10 ಕೆ.ಜಿ ಖರೀದಿಸಲಾಗಿದೆ. ಆವಶ್ಯಕತೆ ಪ್ರಮಾಣಕ್ಕಿಂತ ಜಾಸ್ತಿ ಖರೀದಿಸಲಾಗಿದೆ. ಹೀಗೆ ಅಲ್ಲಿಯ ಟೈಲ್ಸ್, ಪೈಪ್‌ಗಳು, ಮೇಲ್ಛಾವಣಿ, ಚೇನ್ ಲಿಂಕ್, ಎಲೆಕ್ಟ್ರಿಕ್ ವೈರ್, ಪೇಂಟ್, ಪ್ಲೈವುಡ್, ಸಿಮೆಂಟ್ ಈ ಎಲ್ಲ ವಸ್ತುಗಳ ಖರೀದಿ ಪ್ರಕ್ರಿಯೆಯಲ್ಲ್ಲಿ ದೊಡ್ಡ ಮಟ್ಟದ ಹಗರಣ ನಡೆದಿದ್ದು ಬಿಲ್ ಗಳಲ್ಲಿರುವ ಮಾಹಿತಿ ಮತ್ತು ಪ್ರತ್ಯಕ್ಷದಲ್ಲಿರುವ ವಸ್ತುಗಳಿಗೆ ತಾಳೆ ಆಗುತ್ತಿಲ್ಲ ಎಂಬುದನ್ನು ಬೆಳಕಿಗೆ ತಂದರು.

ಈ ಎಲ್ಲಾ ಅಂಶಗಳು ಗಮನಿಸಿದಾಗ ಈ ಕಾಮಗಾರಿಯಲ್ಲಿ ನಿರ್ಮಿತಿ ಕೇಂದ್ರದ ಯೋಜನೆ ವ್ಯವಸ್ಥಾಪಕರಾದ ಹರ್ಷ ಶೆಟ್ಟಿಗಾರ ಮತ್ತು ಅಭಿಯಂತರರಾದ ಕಾಮರಾಜ್ ಇವರುಗಳು ಲಕ್ಷಾಂತರ ರೂಪಾಯಿಗಳ ಬಹುದೊಡ್ಡ ಅವ್ಯವಹಾರ, ಭ್ರಷ್ಟಚಾರ, ಅಧಿಕಾರ ದುರುಪಯೋಗ ಮಾಡಿರುವುದು ಗಮನಕ್ಕೆ ಬರುತ್ತದೆ. ಆದ್ದರಿಂದ ಸದರಿ ಅಧಿಕಾರಿಗಳ ಮೇಲೆ ಆಡಳಿತಾತ್ಮಕವಾಗಿ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಅವರನ್ನು ಕೂಡಲೇ ಅವರು ನಿರ್ವಹಿಸುತ್ತಿರುವ ಹುದ್ದೆಯಿಂದ ಅಮಾನತು ಮಾಡಬೇಕು. ನಿರ್ಮಿತಿ ಕೇಂದ್ರದಿಂದ ಒಳ್ಳೆ ಗುಣಮಟ್ಟದ ಕಾಮಗಾರಿ ನಿರ್ಮಾಣ ಮಾಡುವಲ್ಲಿ ಸೂಕ್ತ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.

