ಉಜಿರೆ:(ಜು.24)ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳ 2025–26ನೇ ಸಾಲಿನ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ನಡೆಯಿತು.

ಇದನ್ನೂ ಓದಿ: ⭕ಉಪ್ಪಿನಂಗಡಿ: ಹಾರ್ನ್ ಹಾಕಿದ್ದಕ್ಕೆ ಬಸ್ ಚಾಲಕ, ಪ್ರಯಾಣಿಕನ ಮೇಲೆ ಬೈಕ್ ಸವಾರರಿಬ್ಬರಿಂದ ಹಲ್ಲೆ
ಉದ್ಘಾಟನೆ ನೆರವೇರಿಸಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ಎನ್.ಎಸ್.ಎಸ್. ಸಂಯೋಜಕ ಡಾ. ಶೇಷಪ್ಪ ಕೆ., ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಜಾತಿ ಧರ್ಮ ಭೇದಭಾವವಿಲ್ಲ. ಬದಲಾಗಿ ನಾವುಗಳು ಎಲ್ಲಾ ಒಂದೇ ಎಂದರು.
ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಮಾಡುವ ಆಯ್ಕೆಗಳು ಸರಿಯಾಗಿರಲಿ, ಹಾಗೆಯೇ ಮಾನವೀಯತೆ ಮರೆಯದಿರಿ ಎಂದು ಸಲಹೆ ನೀಡಿದರು.
“ಎಸ್ ಡಿ ಎಂ ಕಾಲೇಜಿನ ಎನ್.ಎಸ್.ಎಸ್. ಘಟಕವು ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಮಾದರಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದ್ದು, ಸ್ವಯಂಸೇವಕರಿಂದ ಸಮಾಜದಲ್ಲಿ ಉತ್ತಮ ಸೇವಾ ಚಟುವಟಿಕೆಗಳು ನಡೆಯುತ್ತಿವೆ. ಇದು ಎಲ್ಲರಿಗೂ ಪ್ರೇರಣೆಯಾಗಿದೆ. ಈ ಶೈಕ್ಷಣಿಕ ವರ್ಷದಲ್ಲಿ ಇನ್ನೂ ಹೆಚ್ಚು ಸಾಧನೆಗಳನ್ನು ಮಾಡುವಂತಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್ ಡಿ ಎಂ ಕಾಲೇಜಿನ ಪ್ರಾಂಶುಪಾಲ ಡಾ. ವಿಶ್ವನಾಥ ಪಿ. ಮಾತನಾಡಿ, “ರಾಷ್ಟ್ರೀಯ ಸೇವಾ ಯೋಜನೆಯು ಮಹಾತ್ಮ ಗಾಂಧೀಜಿ ಅವರ ಕನಸಿನ ಯೋಜನೆಯಾಗಿದ್ದು, ಈ ಯೋಜನೆಯ ಮೂಲಕ ಸಮಾಜದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ” ಎಂದರು.
ಶಿಕ್ಷಣದ ಜೊತೆಗೆ ಸೇವೆ ಮಾಡುತ್ತಿರುವ ಸ್ವಯಂಸೇವಕರು ಮುಂದೆ ಸಮಾಜದಲ್ಲಿ ಉತ್ತಮ ನಾಗರಿಕರಾಗಲು ಸಾಧ್ಯ ಎಂದು ಹೇಳಿದರು.
ಯೋಜನಾಧಿಕಾರಿ ದೀಪ ಆರ್.ಪಿ. ಅವರು ನೂತನ ಯೋಜನಾಧಿಕಾರಿ, ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಮಾಲಿನಿ ಅಂಚನ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು.
ಬಳಿಕ ಸನ್ಮಾನ ಸ್ವೀಕರಿಸಿ ಮಾತನಾಡಿದ ದೀಪ ಆರ್.ಪಿ., ಕಳೆದ ಐದು ವರ್ಷಗಳಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕ ನಡೆದು ಬಂದ ಹಾದಿಯನ್ನು ಮೆಲುಕು ಹಾಕಿದರು.
ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ನಾವು ತೊಡಗಿಸಿಕೊಂಡಷ್ಟು ಅವಕಾಶಗಳು ಹೆಚ್ಚುತ್ತದೆ. ನಮ್ಮ ಸ್ವಯಂಸೇವಕರು ಎಲ್ಲಿಗೆ ಹೋದರೂ ನಮ್ಮ ಘಟಕದ ಗೌರವವನ್ನು ಉಳಿಸಿಕೊಂಡು ತಮ್ಮದೇ ರೀತಿಯಲ್ಲಿ ಮಿಂಚುತ್ತಿದ್ದಾರೆ. ರಾಷ್ಟ್ರೀಯ ಸೇವಾ ಯೋಜನೆಯನ್ನು ಸೇರುವ ಮೊದಲು ನಾವು ಹೇಗಿದ್ದೆವು ಎಂಬುದಕ್ಕಿಂತ, ಇಲ್ಲಿ ಇದ್ದುಕೊಂಡು ನಮ್ಮ ಅವಧಿ ಮುಗಿಸಿ ಹೋದ ಮೇಲೆ ನಮ್ಮಲ್ಲಿ ಆಗುವ ಬದಲಾವಣೆಗಳನ್ನು ಸ್ವತಃ ಸಮಾಜವೇ ಗುರುತಿಸುತ್ತದೆ ಎಂದರು.

ಹಿರಿಯ ವಿದ್ಯಾರ್ಥಿ ನಾಯಕರಾದ ರಾಮಕೃಷ್ಣ ಶರ್ಮ, ದೀಪಾ ಪೂಜಾರಿ, ವಿಶ್ವಾಸ್ ಮತ್ತು ಶ್ವೇತಾ ಕೆ.ಜಿ. ಅವರು ಹೊಸದಾಗಿ ನೇಮಕಗೊಂಡ ವಿದ್ಯಾರ್ಥಿ ನಾಯಕರಾದ ನವಿಲ್ ನವೀನ್ ಮೊರಾಸ್ (ದ್ವಿತೀಯ ಬಿಎ), ರಕ್ಷಾ ಆರ್. ದೇವಾಡಿಗ (ದ್ವಿತೀಯ ಬಿಸಿಎ), ಮಾನ್ಯ ಕೆ.ಆರ್. (ದ್ವಿತೀಯ ಬಿಕಾಂ), ಟಿ. ಸುದರ್ಶನ್ ನಾಯಕ್ (ದ್ವಿತೀಯ ಬಿಕಾಂ) ಅವರಿಗೆ ಅಧಿಕಾರ ಹಸ್ತಾಂತರಿಸಿದರು.
ಹಿರಿಯ ವಿದ್ಯಾರ್ಥಿ ನಾಯಕ ರಾಮಕೃಷ್ಣ ಶರ್ಮ ಅವರು ತಮ್ಮ ಎನ್ ಎಸ್ ಎಸ್ ಅನುಭವಗಳು ಮತ್ತು ನೆನಪುಗಳನ್ನು ಹಂಚಿಕೊಂಡರು.
ವರ್ಷಾ ವಿ. ಅವರು 2024–25 ನೇ ಶೈಕ್ಷಣಿಕ ವರ್ಷದ ಎನ್.ಎಸ್.ಎಸ್. ಚಟುವಟಿಕೆಗಳ ವರದಿ ಪ್ರಸ್ತುತಪಡಿಸಿದರು.

ಯುವ ಚೇತನ ಭಿತ್ತಿಪತ್ರಿಕೆಯ ನೂತನ ಸಂಚಿಕೆ ಬಿಡುಗಡೆಗೊಳಿಸಲಾಯಿತು.
ಯೋಜನಾಧಿಕಾರಿ ಡಾ. ಮಹೇಶ್ ಕುಮಾರ್ ಶೆಟ್ಟಿ ಹೆಚ್. ಪ್ರಸ್ತಾವಿಸಿ ಸ್ವಾಗತಿಸಿದರು. ಸ್ವಯಂಸೇವಕರಾದ ಸನುಷ ಪಿಂಟೋ ಮತ್ತು ಶ್ರೇಜಾ ನಿರೂಪಿಸಿ, ರಕ್ಷಾ ದೇವಾಡಿಗ ವಂದಿಸಿದರು.

