Fri. Jul 25th, 2025

Uppinangady: ಹಾರ್ನ್ ಹಾಕಿದ್ದಕ್ಕೆ ಬಸ್‌ ಚಾಲಕ, ಪ್ರಯಾಣಿಕನ ಮೇಲೆ ಬೈಕ್ ಸವಾರರಿಬ್ಬರಿಂದ ಹಲ್ಲೆ

ಉಪ್ಪಿನಂಗಡಿ:(ಜು.24) ರಾಜಹಂಸ ಬಸ್ಸಿನ ಚಾಲಕ ಹಾರ್ನ್ ಹಾಕಿದ ಕಾರಣಕ್ಕೆ ಬೈಕ್ ಸವಾರರಿಬ್ಬರು ಬಸ್ಸನ್ನು ಅಡ್ಡ ಹಾಕಿ ಬಸ್ಸಿನ ಚಾಲಕನ ಮೇಲೆ ಹಲ್ಲೆ ನಡೆಸಿದ ಹಾಗೂ ಇದನ್ನು ಪ್ರಶ್ನಿಸಿದ ಪ್ರಯಾಣಿಕನ ಮೇಲೂ ಹೆಲ್ಮೆಟ್ ನಿಂದ ಹೊಡೆದು ಹಲ್ಲೆ ನಡೆಸಿದ ಘಟನೆ ಉಪ್ಪಿನಂಗಡಿಯಲ್ಲಿ ಬುಧವಾರದಂದು ನಡೆದಿದೆ.

ಇದನ್ನೂ ಓದಿ: 🟣ಬೆಳ್ತಂಗಡಿ : ಬೆಳ್ತಂಗಡಿ ಮಹಿಳಾ ಕಾಂಗ್ರೆಸ್ ಗ್ರಾಮೀಣ ಸಮಿತಿಯ ಅಧ್ಯಕ್ಷರಾಗಿ ಶ್ರೀಮತಿ ಶೋಭಾ ನಾರಾಯಣ ಗೌಡ ನೇಮಕ

ಬೆಂಗಳೂರಿನಿಂದ ಮಂಗಳೂರಿನತ್ತ ಸಂಚರಿಸುತ್ತಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ರಾಜಹಂಸ ಬಸ್ಸಿನ ಚಾಲಕ ರಿಯಾಜ್ ಅಹಮ್ಮದ್ ಎಂಬವರು, ಬಸ್ಸಿಗೆ ಅಡ್ಡವಾಗಿ ಸಂಚರಿಸುತ್ತಿದ್ದ ಬೈಕೊಂದಕ್ಕೆ ದಾರಿ ಬಿಟ್ಟುಕೊಡುವ ಸಲುವಾಗಿ ಹಾರ್ನ್ ಹಾಕಿದ್ದರು.
ಇದರಿಂದ ಕೆರಳಿದ ಬೈಕ್ ಸವಾರರಿಬ್ಬರು ಬಸ್ಸನ್ನು ಅಡ್ಡಗಟ್ಟಿ ಬಸ್ಸಿನ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ. ಇದನ್ನು ಪ್ರಶ್ನಿಸಿ ಹಲ್ಲೆಯನ್ನು ತಡೆಯಲು ಬಂದ ಬಸ್ಸಿನ ಪ್ರಯಾಣಿಕ ಅವಿನಾಶ್ ಮೇಲೂ ಮುಗಿ ಬಿದ್ದ ಬೈಕ್ ಸವಾರರು ಹೆಲ್ಮೆಟ್ ನಿಂದ ಅವಿನಾಶ್ ಎಂಬವರ ತಲೆಗೆ ಹೊಡೆದು ಗಂಭೀರವಾಗಿ ಗಾಯಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಬಸ್ಸಿನ ಚಾಲಕ ಬೈಕ್ ನೋಂದಣಿ ಸಂಖ್ಯೆಯನ್ನು ಪೊಲೀಸರಿಗೆ ದೂರು ನೀಡಿದ್ದರು.

ಸಾಯಂಕಾಲ 3:30 ರ ಸುಮಾರಿಗೆ ನಡೆದ ಈ ಘಟನೆಯ ಬಗ್ಗೆ ದೂರು ಸ್ವೀಕರಿಸಿದ ಉಪ್ಪಿನಂಗಡಿ ಠಾಣಾ ಪೊಲೀಸ್ ಉಪ ನಿರೀಕ್ಷಕ ಗುರುನಾಥ್ ಹಾದಿಮನಿ, ಮಿಂಚಿನ ಕಾರ್ಯಾಚರಣೆ ನಡೆಸಿ ಒಂದು ಗಂಟೆಯೊಳಗೆ ಆರೋಪಿ ಬೈಕ್ ಸವಾರರಿಬ್ಬರನ್ನೂ ಪತ್ತೆ ಹಚ್ಚಿ ಬಂಧಿಸುವಲ್ಲಿ ಸಫಲರಾದರು. ಬಂಧಿತ ಆರೋಪಿಗಳನ್ನು ಉಪ್ಪಿನಂಗಡಿ ಗ್ರಾಮದ ಮಠ ನಿವಾಸಿಗರಾದ ಜುನೈದ್ (24) ಹಾಗೂ ಹಿಷಾಮ್ (18) ಎಂದು ಗುರುತಿಸಲಾಗಿದೆ.
ಬಂಧಿತರ ವಿರುದ್ಧ ಸರಕಾರಿ ಕರ್ತವ್ಯಕ್ಕೆ ಅಡ್ಡಿ ಹಾಗೂ ಸಾರ್ವಜನಿಕ ಶಾಂತಿ ಭಂಗ ಆರೋಪದಡಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *