Sat. Jul 26th, 2025

New Delhi: ಆಫೀಸಿನ ಭ್ರಷ್ಟಾಚಾರಕ್ಕೆ ಸಹಕರಿಸಲಾಗದೆ ಇಂಜಿನಿಯರ್ ಆತ್ಮಹತ್ಯೆ

ನವದೆಹಲಿ (ಜು. 25): ಅಸ್ಸಾಂನಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ (ಪಿಡಬ್ಲ್ಯೂಡಿ) ಸಹಾಯಕ ಇಂಜಿನಿಯರ್ ಆಗಿದ್ದ ಯುವತಿ ತಮ್ಮ ಬಾಡಿಗೆ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಆ ಸ್ಥಳದಿಂದ ಪೊಲೀಸರು ವಶಪಡಿಸಿಕೊಂಡ ಸೂಸೈಡ್ ನೋಟ್​​​ನಲ್ಲಿ ಇಬ್ಬರು ಹಿರಿಯ ಅಧಿಕಾರಿಗಳು ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಆಕೆ ಆರೋಪಿಸಿದ್ದಾರೆ. 30 ವರ್ಷದ ಜ್ಯೋತಿಷಾ ದಾಸ್ ಬೊಂಗೈಗಾಂವ್‌ನಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ಸುಮಾರು 1 ವರ್ಷದಿಂದ ಕೆಲಸ ಮಾಡಿದ್ದರು. ಅವರು ತಮ್ಮ ರೂಂನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಆಕೆಯ ಕೈಬರಹದ ಸೂಸೈಡ್ ನೋಟ್ ಅನ್ನು ಪೊಲೀಸರು ಪತ್ತೆ ಮಾಡಿದ್ದಾರೆ.

ಇದನ್ನೂ ಓದಿ: 🔴ಬೆಳ್ತಂಗಡಿ: ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಆಂಟೋನಿ ಮರಿಯಪ್ಪ ಅವರನ್ನು ಭೇಟಿಯಾದ ಹರೀಶ್ ಪೂಂಜ

ಆತ್ಮಹತ್ಯೆಯಿಂದ ಸಾವನ್ನಪ್ಪಿದ ಇಂಜಿನಿಯರ್ ಜ್ಯೋತಿಷಾ ದಾಸ್, ನಕಲಿ ಬಿಲ್‌ಗಳನ್ನು ತೆರವುಗೊಳಿಸಲು ಸಹೋದ್ಯೋಗಿಗಳ ಒತ್ತಡ ಹೆಚ್ಚಾಗಿದ್ದರಿಂದ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಆರೋಪಿಸಿದ್ದಾರೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಇಬ್ಬರು ಹಿರಿಯ ಅಧಿಕಾರಿಗಳ ಹೆಸರನ್ನು ಆ ಯುವತಿ ಉಲ್ಲೇಖಿಸಿದ್ದಾರೆ. ಅಪೂರ್ಣ ಕೆಲಸದ ಬಿಲ್‌ಗಳನ್ನು ಅನುಮೋದಿಸುವಂತೆ ಒತ್ತಾಯಿಸಿದ ಇಬ್ಬರು ಹಿರಿಯ ಅಧಿಕಾರಿಗಳ ನಿರಂತರ ಒತ್ತಡದಿಂದಾಗಿ ತಾನು ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದೇನೆ ಎಂದು ಎಂಜಿನಿಯರ್ ಸ್ಪಷ್ಟವಾಗಿ ಆರೋಪಿಸಿದ್ದಾರೆ.

“ನನ್ನ ಕೆಲಸದ ಒತ್ತಡದಿಂದಾಗಿ ನಾನು ಈ ಕ್ರಮ ಕೈಗೊಳ್ಳುತ್ತಿದ್ದೇನೆ. ಕಚೇರಿಯಲ್ಲಿ ನನಗೆ ಮಾರ್ಗದರ್ಶನ ನೀಡಲು ಯಾರೂ ಇಲ್ಲ. ನಾನು ಸುಸ್ತಾಗಿದ್ದೇನೆ. ನನಗೆ ಬೇರೆಲ್ಲೂ ಹೋಗಲು ಸಾಧ್ಯವಾಗಲಿಲ್ಲ. ನನ್ನ ಪೋಷಕರು ನನಗಾಗಿ ಬಹಳ ಚಿಂತೆ ಮಾಡುತ್ತಿದ್ದರು” ಎಂದು ಸೂಸೈಡ್ ನೋಟ್​​ನಲ್ಲಿ ಆಕೆ ಆರೋಪಿಸಿದ್ದಾರೆ.

ಆ ಯುವತಿಯ ಕುಟುಂಬವು ಔಪಚಾರಿಕ ಪೊಲೀಸ್ ದೂರು ದಾಖಲಿಸಿದೆ. ಈ ಪ್ರಕರಣದಲ್ಲಿ ಇತ್ತೀಚೆಗೆ ಬಡ್ತಿ ಪಡೆದ ಸೂಪರಿಂಟೆಂಡೆಂಟ್ ಇಂಜಿನಿಯರ್ ದಿನೇಶ್ ಮೇಧಿ ಶರ್ಮಾ ಮತ್ತು ಪ್ರಸ್ತುತ ಬೊಂಗೈಗಾಂವ್‌ನಲ್ಲಿ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಉಪ-ವಿಭಾಗೀಯ ಅಧಿಕಾರಿ (SDO) ಅಮೀನುಲ್ ಇಸ್ಲಾಂ ಅವರನ್ನು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ವಿವರವಾದ ತನಿಖೆಗೆ ಕರೆ ನೀಡಿದ್ದಾರೆ.

Leave a Reply

Your email address will not be published. Required fields are marked *