ನವದೆಹಲಿ, (ಜು.25): ಇಡೀ ದೇಶದಲ್ಲಿ ಹೆಚ್ಚಾಗುತ್ತಿರುವ ಅಕ್ರಮ ಸಂಬಂಧಕ್ಕೆ ಸಂಬಂಧಿಸಿದ ಕೊಲೆ ಪ್ರಕರಣಗಳಲ್ಲಿ ಮತ್ತೊಂದು ಸೇರ್ಪಡೆಯಾಗಿದೆ. ದೆಹಲಿಯಲ್ಲಿ 32 ವರ್ಷದ ತನ್ನ ಪತಿಯನ್ನು ಕೊಂದು ಅದನ್ನು ಆತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನಿಸಿದ ಆರೋಪದ ಮೇಲೆ 29 ವರ್ಷದ ಮಹಿಳೆಯನ್ನು ಬಂಧಿಸಲಾಗಿದೆ.

ಇದನ್ನೂ ಓದಿ: ⭕ಆಫೀಸಿನ ಭ್ರಷ್ಟಾಚಾರಕ್ಕೆ ಸಹಕರಿಸಲಾಗದೆ ಇಂಜಿನಿಯರ್ ಆತ್ಮಹತ್ಯೆ
ಈ ಘಟನೆ ದೆಹಲಿಯ ನಿಹಾಲ್ ವಿಹಾರ್ ಪ್ರದೇಶದಲ್ಲಿ ನಡೆದಿದೆ. ಆಕೆಯ ಗಂಡ ಆಕೆಗೆ ಲೈಂಗಿಕ ಸುಖ ನೀಡುತ್ತಿರಲಿಲ್ಲ ಎಂಬ ಕಾರಣದಿಂದ ಅವರಿಬ್ಬರ ನಡುವೆ ಜಗಳವಾಗುತ್ತಿತ್ತು. ಗಂಡನ ನಿರ್ಲಕ್ಷ್ಯ, ಲೈಂಗಿಕ ಕ್ರಿಯೆಯಲ್ಲಿನ ನಿರಾಸಕ್ತಿಯಿಂದ ಬೇಸತ್ತ ಆ ಮಹಿಳೆ ತನ್ನ ಕಸಿನ್ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಕೊನೆಗೆ ತನ್ನ ಸಂಬಂಧಕ್ಕೆ ಅಡ್ಡ ಬರುತ್ತಾನೆಂದು ಆಕೆ ಗಂಡನನ್ನು ಕೊಲೆ ಮಾಡಿ, ಆತ್ಮಹತ್ಯೆಯ ಕತೆ ಕಟ್ಟಿದ್ದಾಳೆ.
ಪೊಲೀಸರ ಪ್ರಕಾರ, ನಿಹಾಲ್ ವಿಹಾರ್ ಪೊಲೀಸ್ ಠಾಣೆಗೆ ಸ್ಥಳೀಯ ಆಸ್ಪತ್ರೆಯಿಂದ ಕರೆ ಬಂದಿದ್ದು, ಮಹಿಳೆಯೊಬ್ಬರು ಮೊಹಮ್ಮದ್ ಶಾಹಿದ್ ಎಂಬ ಗುರುತಿಸಲಾದ ತನ್ನ ಪತಿಯನ್ನು ಹಲವಾರು ಇರಿತದ ಗಾಯಗಳೊಂದಿಗೆ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ ಎಂದು ವರದಿಯಾಗಿದೆ. ಆ ವ್ಯಕ್ತಿ ಆಸ್ಪತ್ರೆಗೆ ಬರುವಷ್ಟರಲ್ಲಿ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದ್ದಾರೆ.
ಪೊಲೀಸರು ಆಸ್ಪತ್ರೆಗೆ ತಲುಪಿದಾಗ, ಆ ಮಹಿಳೆ ತನ್ನ ಪತಿ ತನ್ನನ್ನು ತಾನೇ ಚಾಕುವಿನಿಂದ ಚುಚ್ಚಿಕೊಂಡಿದ್ದಾನೆ ಎಂದು ಹೇಳಿದ್ದಾಳೆ. ಆದರೆ, ಮರಣೋತ್ತರ ಪರೀಕ್ಷೆಯ ವರದಿಯು ಗಾಯಗಳು ಮುಂಭಾಗದಿಂದ ದಾಳಿ ನಡೆದಿದೆ ಎಂದು ಇದ್ದುದರಿಂದ ಆತ ತನಗೆ ತಾನೇ ಇರಿದುಕೊಂಡಿದ್ದು ಸುಳ್ಳು ಎಂಬುದು ಗೊತ್ತಾಯಿತು. ಇದರ ನಂತರ, ಪೊಲೀಸರು ಕೊಲೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ತೀವ್ರಗೊಳಿಸಿದರು.


ವಿಚಾರಣೆ ಮತ್ತು ಆಕೆಯ ಮೊಬೈಲ್ ಫೋನ್‌ನ ವಿಧಿವಿಜ್ಞಾನ ಪರಿಶೀಲನೆಯ ಸಮಯದಲ್ಲಿ ತನಿಖಾಧಿಕಾರಿಗಳು ಆ ಮಹಿಳೆಯ ಇಂಟರ್ನೆಟ್ ಸರ್ಚ್ ಹಿಸ್ಟರಿ ಗಮನಿಸಿದಾಗ ಅದರಲ್ಲಿ “ಚಾಟ್ ಹಿಸ್ಟರಿ ಡಿಲೀಟ್ ಮಾಡುವುದು, ಅಲ್ಯೂಮಿನಿಯಂ ಫಾಸ್ಫೈಡ್‌ನಂತಹ ವಿಷಕಾರಿ ವಸ್ತುಗಳನ್ನು ಬಳಸುವುದು ಹೇಗೆ” ಎಂಬಿತ್ಯಾದಿ ಸರ್ಚ್ಗಳಿದ್ದವು. ಇದರಿಂದ ಅನುಮಾನಗೊಂಡ ಪೊಲೀಸರು ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದರು.ಆಗ ಆ ಮಹಿಳೆ ತನ್ನ ಅಪರಾಧವನ್ನು ಒಪ್ಪಿಕೊಂಡಳು. ತನ್ನ ಪತಿಯ ದೈಹಿಕ ಸಂಬಂಧದಿಂದ ಅತೃಪ್ತಳಾಗಿ ಆತನನ್ನು ಕೊಲ್ಲಲು ನಿರ್ಧರಿಸಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾಳೆ. ಶಾಹಿದ್ ಎದೆಗೆ ಮೂರು ಬಾರಿ ಇರಿದ ನಂತರ ತಾನೇ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಪೊಲೀಸರ ದಾರಿ ತಪ್ಪಿಸಲು ಆತ್ಮಹತ್ಯೆಯ ಕಥೆಯನ್ನು ಹೆಣೆದಿದ್ದಾಗಿ ಆಕೆ ಒಪ್ಪಿಕೊಂಡಿದ್ದಾಳೆ.
