ಬೆಳ್ತಂಗಡಿ :(ಜು. 26) ಎರಡು ತಿಂಗಳ ಹಿಂದೆ ಮದುವೆಯಾದ ದಂಪತಿ ಹನಿಮೂನ್ ಗೆ ಬಂದು ಉಜಿರೆಯ ಪ್ರತಿಷ್ಠಿತ ಹೊಟೇಲ್ ನಲ್ಲಿ ಉಳಿದುಕೊಂಡಿದ್ದರು. ಆದ್ರೆ ಪತಿ ಜೈಲುಪಾಲಾದ ಘಟನೆ ಬೆಳ್ತಂಗಡಿಯಲ್ಲಿ ನಡೆದಿತ್ತು.ಬೆಂಗಳೂರಿನ ದಕ್ಷಿಣದ ರಾಮನಗರ ಜಿಲ್ಲೆಯ ಬಿಡದಿ ತಾಲೂಕಿನ ನಂದಗೋಕುಲ ನಿವಾಸಿಯಾಗಿರುವ ಸಿದ್ದರಾಜು ಗೌಡ ಮಗನಾದ ಮೂರನೇ ವರ್ಷದ ಕಾನೂನು ವಿದ್ಯಾರ್ಥಿಯಾಗಿರುವ ಪತಿ ವಿಶ್ವನಾಥ(24) ಮತ್ತು 22 ವರ್ಷದ ಪತ್ನಿ 22-05-2025 ರಂದು ಮದುವೆಯಾಗಿದ್ದು, ಜುಲೈ 22 ರಂದು ರಾತ್ರಿ ಬೆಳ್ತಂಗಡಿ ತಾಲೂಕಿನ ಉಜಿರೆಯ ಪ್ರತಿಷ್ಠಿತ ಹೊಟೇಲಿಗೆ ಬಂದು ರೂಂ ಪಡೆದು ತಂಗಿದ್ದರು.

ಇದನ್ನೂ ಓದಿ: 🪖ಬೆಳ್ತಂಗಡಿ : ಕಾರ್ಗಿಲ್ ವಿಜಯ ದಿವಸ್ ಅಂಗವಾಗಿ ಬೆಳ್ತಂಗಡಿ ಮಂಡಲ ಬಿಜೆಪಿ ಯುವ ಮೋರ್ಚಾ ವತಿಯಿಂದ
ಹೊಟೇಲ್ ರೂಂ ನಲ್ಲಿ ಜುಲೈ 22 ರಂದು ರಾತ್ರಿ ಕುಡಿದ ಮತ್ತಿನಲ್ಲಿ ಪತ್ನಿಗೆ ವರದಕ್ಷಿಣೆಗಾಗಿ ಕಿರುಕುಳ ನೀಡಿ ಕೊಲೆಗೆ ಯತ್ನಿಸಿದ ಪತಿಗೆ ವಿರುದ್ಧ 22 ವರ್ಷದ ಪತ್ನಿ ನೇರ ಬೆಳ್ತಂಗಡಿ ಪೊಲೀಸ್ ಠಾಣೆಗೆ ಜುಲೈ 23 ರಂದು ಸಂಜೆ ಬಂದು ಪತಿ ವಿಶ್ವನಾಥ ಎಂಬಾತನ ವಿರುದ್ಧ ದೂರು ನೀಡಿದ್ದಾಳೆ.ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪತಿ ವಿಶ್ವನಾಥ ವಿರುದ್ಧ BNS 109,115(1), 85,4ಡಿಪಿ (ಕೊಲೆಯತ್ನ, ಕೈಯಿಂದ ಹಲ್ಲೆ, ಕೌಟುಂಬಿಕ ದೌರ್ಜನ್ಯ, ವರದಕ್ಷಿಣೆ ಬೇಡಿಕೆ ಕಿರುಕುಳ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಪತಿ ವಿಶ್ವನಾಥ್ (24) ನನ್ನು ಜುಲೈ 24 ರಂದು ಉಜಿರೆಯಲ್ಲಿ ಬೆಳ್ತಂಗಡಿ ಇನ್ಸ್ಪೆಕ್ಟರ್ ಸುಬ್ಬಾಪುರ್ ಮಠ್ ನೇತೃತ್ವದ ಸಿಬ್ಬಂದಿ ಬಂಧಿಸಿ ಬೆಳ್ತಂಗಡಿ ಹೆಚ್ಚುವರಿ ವ್ಯವಹಾರಿಕ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಸಂದೇಶ್.ಕೆ ಮುಂದೆ ಹಾಜರುಪಡಿಸಿದ್ದು ನ್ಯಾಯಾಧೀಶರು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದರು.
ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿ ಕೊಲೆಗೆ ಯತ್ನಿಸಿದ ಪ್ರಕರಣದಲ್ಲಿ ಪತಿ, ಅತ್ತೆ, ಮಾವನ ವಿರುದ್ಧ ಪ್ರಕರಣ ದಾಖಲಾಗಿದ್ದು , ಅತ್ತೆ- ಮಾವ ಇದೀಗ ಪ್ರಕರಣದ ಬಳಿಕ ಪರಾರಿಯಾಗಿದ್ದು. ಶ್ರೀಮಂತ ಪತಿಯ ಕುಟುಂಬದ ಹಲವು ಕ್ರೌರ್ಯ ಬಯಲಾಗಿದೆ.

ಆರೋಪಿಗಳಾದ ಪತಿ ವಿಶ್ವನಾಥ್, ಅತ್ತೆ ಪ್ರೇಮ, ಮಾವ ಸಿದ್ದರಾಜು ಅವರದ್ದು ಕುಟುಂಬ ಬಹಳ ಶ್ರೀಮಂತ ಕುಟುಂಬವಾಗಿದ್ದು, ಇವರ ಒಡೆತನದಲ್ಲಿ ಬಿಡದಿಯ ಬೈರಮಂಗಳದಲ್ಲಿ ಅದರ್ಶ ಇಂಗ್ಲೀಷ್ ಮೀಡಿಯಂ ಶಾಲೆ, ಬಿಡದಿ- ಬೈರಮಂಗಳ ರಸ್ತೆಯಲ್ಲಿ ಮೂರು ಬಾರ್ ಹಾಗೂ ಬೇಕಾದಷ್ಟು ಜಮೀನು ಹೊಂದಿದ್ದಾರೆ.
ವಿಶ್ವನಾಥನಿಗೆ ಬ್ರೋಕರ್ ಮೂಲಕ ಕಾಲೇಜ್ ಮುಗಿಸಿದ್ದ ಯುವತಿಯನ್ನು ನೋಡಿ ಮದುವೆ ಮಾಡಲಾಗಿತ್ತು. ಈ ನಡುವೆ ವಿಶ್ವನಾಥನ ತಂದೆ-ತಾಯಿ ಮದುವೆ ವೇಳೆ ಕಾರು ಮತ್ತು ಚಿನ್ನಕ್ಕಾಗಿ ಬೇಡಿಕೆ ಇಟ್ಟಿದ್ದರು. ಮದುವೆ ಸಮಯದಲ್ಲಿ ಚಿನ್ನ ನೀಡಲು ಬಾಕಿ ಇತ್ತು . ಇನೋವಾ ಕಾರನ್ನು ಸಂತ್ರಸ್ತೆಯ ತಂದೆ ಬುಕ್ ಮಾಡಿದ್ದರು. ಇದೇ ವಿಚಾರದಲ್ಲಿ ಚಿನ್ನ ಕಾರು ನೀಡಲು ಪತ್ನಿಗೆ ಪತಿ ಮತ್ತು ಅತ್ತೆ ಮಾವ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರು. ಈ ನಡುವೆ ಇನೋವಾ ಕಾರು ಬೇಡ ಫಾರ್ಚೂನರ್ ಕಾರು ಬೇಕೆಂದು ಬೇಡಿಕೆ ಜಾಸ್ತಿ ಮಾಡಿದ್ದ. ಈ ವಿಚಾರವನ್ನು ಪತ್ನಿ ತಂದೆ ತಾಯಿಗೆ ಹೇಳದೆ ಸುಮ್ಮನಿದ್ದಳು. ಹನಿಮೂನಿಗೆ ಬಂದಾಗ ಬಾಕಿ ಇರುವ ವರದಕ್ಷಿಣೆ ಬೇಡಿಕೆ ಇಟ್ಟು ಕೊಲೆಗೆ ಯತ್ನಿಸಿ ಪತಿ ಜೈಲುಪಾಲಾಗಿದ್ದಾನೆ. ಆದ್ರೆ ಪ್ರಕರಣ ಬೆಳಕಿಗೆ ಬಂದಾಗ ಅತ್ತೆ ಪ್ರೇಮ ಮತ್ತು ಮಾವ ಸಿದ್ದರಾಜು ಮೊಬೈಲ್ ಸ್ವಿಚ್ ಆಫ್ ಮಾಡಿ ಪರಾರಿಯಾಗಿದ್ದು, ಬೆಳ್ತಂಗಡಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

