Sun. Jul 27th, 2025

Udupi: ಕಡಿಯಾಳಿ ಮಹಿಷಮರ್ಧಿನಿ ದೇವಸ್ಥಾನದಲ್ಲಿ ಕಳ್ಳತನಕ್ಕೆ ಯತ್ನ – ಮೂರ್ಛೆಯಿಂದಾಗಿ ತಗಾಲಾಕ್ಕೊಂಡ ಕಳ್ಳ

ಉಡುಪಿ:(ಜು.26) ಕಡಿಯಾಳಿ ಮಹಿಷಮರ್ಧಿನಿ ದೇವಸ್ಥಾನದ ಹೆಬ್ಬಾಗಿಲಿನ ಬೀಗ ಮುರಿದು ಕಳವಿಗೆ ಯತ್ನಿಸಿದ ಘಟನೆ ಜು.25ರ ಶುಕ್ರವಾರ ತಡರಾತ್ರಿ ನಡೆದಿದ್ದು, ದೇವಸ್ಥಾನದ ಕಾವಲುಗಾರನ ಸಮಯಪ್ರಜ್ಞೆಯಿಂದ ಕೇರಳ ಮೂಲದ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ⭕ಮಂಗಳೂರು: ಮಂಗಳೂರು ಎಸ್.ಐ.ಟಿ ಮುಂದೆ ದೂರುದಾರ ವ್ಯಕ್ತಿ ಹಾಜರು


ಕಳ್ಳರ ಕೃತ್ಯ ಗಮನಿಸಿದ ದೇವಸ್ಥಾನದ ಕಾವಲುಗಾರ ಬೊಬ್ಬಿಟ್ಟಾಗ ಕಳ್ಳರು ಕಾವಲುಗಾರನಿಗೆ ಚಾಕು ತೋರಿಸಿ ಜೀವಬೆದರಿಕೆಯೊಡ್ಡಿ ಪಲಾಯನ ಗೈದಿದ್ದಾರೆ. ತತ್‌ಕ್ಷಣ ಕಾವಲುಗಾರ ಸ್ಥಳೀಯ ಭಕ್ತರಿಗೆ ತಿಳಿಸಿದ್ದು, ದೇವಸ್ಥಾನದ ವಠಾರದಲ್ಲಿ ಸ್ಥಳೀಯರು ಒಟ್ಟಾಗಿದ್ದಾರೆ.
ಸಿಸಿ ಟಿವಿ ಪರಿಶೀಲಿಸಿದಾಗ ಇಬ್ಬರು ಕಳ್ಳರು ಬಂದಿರುವುದು ಹಾಗೂ ಪಲಾಯನ ಗೈದಿರುವುದು ತಿಳಿದುಬಂದಿದೆ. ಸ್ಥಳೀಯರು ಹುಡುಕಾಟ ನಡೆಸಿ ಕಡಿಯಾಳಿ ಪೆಟ್ರೋಲ್ ಬಂಕ್ ಬಳಿಯ ನಿರ್ಮಾಣ ಹಂತದ ಕಟ್ಟಡದಲ್ಲಿದ್ದ ಇಬ್ಬರು ಆರೋಪಿಗಳನ್ನು ನಗರಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಳ್ಳರು ಸಿಕ್ಕಿ ಬಿದ್ದಿದ್ದು ಹೇಗೆ ಗೊತ್ತಾ ?
ಕಳ್ಳರು ಓಡುತ್ತ ಸಾಗುವಾಗ ಓರ್ವ ಕಳ್ಳನಿಗೆ ಮೂರ್ಛೆ ಬಂದು ಧರೆಗುಳಿದಿದ್ದಾನೆ. ಮೂರ್ಛೆ ಹೋಗಿರುವ ಕಳ್ಳನ ಉಪಚರಿಸುತ್ತಿದ್ದ ಮತ್ತೊಬ್ಬ ಕಳ್ಳ, ಓಡಲು ಯತ್ನಿಸಿದರೂ ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದಾನೆ. ಮೂರ್ಛೆ ವ್ಯಾಧಿ ಉಲ್ಬಣಿಸಿ ಗಂಭೀರ ಸ್ಥಿತಿಯಲ್ಲಿದ್ದ ಕಳ್ಳನಿಗೆ ಸ್ಥಳೀಯರು ಕಳ್ಳತನಕ್ಕೆ ತಂದಿರುವ ಕಬ್ಬಿಣದ ಸಲಕರಣೆಗಳನ್ನು ಕೈಗೆ ನೀಡಿ ಕಳ್ಳನಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಕರೆಯ ಮೇರೆಗೆ ಸ್ಥಳಕ್ಕೆ ಬಂದಿರುವ ಸಮಾಜಸೇವಕ ನಿತ್ಯಾನಂದ ಒಳಕಾಡುವರು ಸ್ಥಳೀಯರ ಸಹಕಾರದಿಂದ ಮೂರ್ಛೆ ಹೋಗಿರುವ ಕಳ್ಳನನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಮತ್ತೊಬ್ಬ ಕಳ್ಳನನ್ನು ಸ್ಥಳೀಯರು ಪೋಲಿಸರಿಗೆ ಒಪ್ಪಿಸಿದ್ದಾರೆ.

Leave a Reply

Your email address will not be published. Required fields are marked *