ಧರ್ಮಸ್ಥಳ:(ಜು.28) ಕಳೆದ ಕೆಲ ದಿನಗಳಿಂದ ಧರ್ಮಸ್ಥಳ ಸಮೀಪದ ಬೊಳಿಯಾರ್ ಬಳಿ ಆನೆಗಳು ಕೃಷಿ ನಾಶಮಾಡುತ್ತಿದ್ದು, ಜು.28 ರಂದು ಬೆಳ್ಳೆಳಗ್ಗೆ ರಸ್ತೆಯಲ್ಲಿ ಪ್ರತ್ಯಕ್ಷವಾಗಿದೆ.

ರಸ್ತೆ ಬದಿ ಬಸ್ ನಿಲ್ದಾಣದಲ್ಲಿ ಶಾಲಾ ಮಕ್ಕಳು ಬಸ್ ಕಾಯುತ್ತಿದ್ದ ಸಂದರ್ಭದಲ್ಲಿ ಒಂಟಿ ಸಲಗ ಬಸ್ ನಿಲ್ದಾಣದ ಕಡೆಗೆ ನುಗ್ಗಿ ಬಂದಿದೆ. ಸ್ಥಳದಲ್ಲಿದ್ದ ಮಕ್ಕಳು ಬೃಹತ್ ಗಾತ್ರದ ಆನೆಯನ್ನು ಕಂಡು ಭಯಭೀತರಾಗಿ ಅಂಗಡಿ ಒಳಗೆ ಸೇರಿ ಪಾರಾದ ಘಟನೆ ನಡೆದಿದೆ.
ಬಳಿಕ ಆನೆ ಕಾಡಿನತ್ತ ಸಂಚರಿಸಿದ್ದು, ಸ್ವಲ್ಪದರಲ್ಲೇ ಅಪಾಯ ತಪ್ಪಿದೆ. ಕಳೆದ ಎರಡು ವಾರಗಳ ಹಿಂದೆಯಷ್ಟೇ ಕೊಕ್ಕಡ ಸೌತಡ್ಕ ಸಮೀಪದ ಗುಂಡಿ ಎಂಬಲ್ಲಿ ವ್ಯಕ್ತಿಯೊಬ್ಬರನ್ನು ಕಾಡಾನೆ ದಾಳಿ ಮಾಡಿ ಕೊಂದಿರುವ ನಡುವೆಯೇ ಈ ಘಟನೆ ಸಂಭವಿಸಿರುವುದು ಜನರಲ್ಲಿ ಮತ್ತಷ್ಟು ಆತಂಕಕ್ಕೆ ಎಡೆಮಾಡಿದೆ.


