Mon. Jul 28th, 2025

Remona Pereira : ನಿರಂತರ 170 ಗಂಟೆ ಭರತನಾಟ್ಯ – ವಿಶ್ವ ದಾಖಲೆ ಬರೆದ ಮಂಗಳೂರಿನ ರೆಮೋನಾ ಪಿರೇರಾ

ಮಂಗಳೂರು, (ಜು.28): ನಿರಂತರ 170 ಗಂಟೆ ಭರತನಾಟ್ಯ ಪ್ರದರ್ಶಿಸುವ ಮೂಲಕ ಮಂಗಳೂರಿನ ವಿದ್ಯಾರ್ಥಿನಿ ರೆಮೋನಾ ಪಿರೇರಾ ವಿಶ್ವದಾಖಲೆ ನಿರ್ಮಿಸಿದ್ದಾರೆ. ರೆಮೋನಾ ಸಾಧನೆ ಈಗ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸೇರ್ಪಡೆಯಾಗಿದೆ. ಕಾಲೇಜಿನ ರಾಬರ್ಟ್ ಸಿಕ್ವೇರಾ ಹಾಲ್​​ನಲ್ಲಿ ರೆಮೋನಾ ಭರತನಾಟ್ಯ ಪ್ರದರ್ಶನ ನೀಡಿದ್ದಾರೆ. ಸತತ ಏಳು ದಿನಗಳ ಕಾಲ ರಾತ್ರಿ ಹಗಲೆನ್ನದೆ ದಿನವಿಡೀ ಭರತನಾಟ್ಯ ಪ್ರದರ್ಶನ ಮಾಡಿದ್ದಾರೆ.

ಇದನ್ನೂ ಓದಿ: 🟣ಬೆಳ್ತಂಗಡಿ : ಬೆಳ್ತಂಗಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್

ಸತತ 127 ಗಂಟೆ ಭರತನಾಟ್ಯ ಪ್ರದರ್ಶನ ನೀಡಿದ್ದೇ ಈವರೆಗಿನ ದಾಖಲೆಯಾಗಿತ್ತು. ಇದೀಗ 170 ಗಂಟೆ ಸತತ ಪ್ರದರ್ಶನ ನೀಡುವ ಮೂಲಕ ರೆಮೋನಾ ಪಿರೇರಾ ವಿಶ್ವಮಟ್ಟದಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ.

ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಅಧಿಕಾರಿಗಳ ಸಮ್ಮುಖದಲ್ಲಿಯೇ ರೆಮೋನಾ ಭರತನಾಟ್ಯ ಪ್ರದರ್ಶಿಸಿದ್ದಾರೆ. ಏಳು ದಿನಗಳ‌ ಪ್ರದರ್ಶನ ಕ್ಯಾಮರಾದ ಮೂಲಕ ರೆಕಾರ್ಡ್ ಮಾಡಲಾಗಿದೆ. ಅಧಿಕಾರಿಗಳು ರೆಮೋನಾ ಸಾಧನೆಯನ್ನು ಸಂಪೂರ್ಣವಾಗಿ ದಾಖಲೀಕರಣ ಮಾಡಿಕೊಂಡಿದ್ದಾರೆ.

ನಿರಂತರ ಭರತನಾಟ್ಯ ಪ್ರದರ್ಶನ ವೇಳೆ ಹೇಗಿತ್ತು ಆಹಾರ, ವಿಶ್ರಾಂತಿ?
ದಾಖಲೆ ಬರೆಯುವುದಕ್ಕಾಗಿ ಭರತನಾಟ್ಯ ಪ್ರದರ್ಶಿಸುತ್ತಿದ್ದ ಸಂದರ್ಭ ರೆಮೋನಾ ಮಿತ ಆಹಾರ ಸೇವಿಸುತ್ತಿದ್ದರು. ಪ್ರತಿ 3 ಗಂಟೆಗೊಮ್ಮೆ 15 ನಿಮಿಷದ ವಿಶ್ರಾಂತಿ ಇರುತ್ತಿತ್ತು. ಈ ವೇಳೆಯಲ್ಲಿ ಬಾಳೆಹಣ್ಣು, ಮೊಸರು, ಎಳನೀರು, ಚೆನ್ನಾಗಿ ಬೇಯಿಸಿದ ಬೆಳ್ತಿಗೆ ಅನ್ನ ಸೇವನೆ ಮಾಡಿದ್ದರು. ಇದಕ್ಕೆಂದೇ ಹಲವು ತಿಂಗಳುಗಳಿಂದ‌ ಆಹಾರ ಕ್ರಮವನ್ನು ಅಭ್ಯಾಸ ಮಾಡಿದ್ದರು.

ಒಟ್ಟು ಏಳು ದಿನಗಳ ಅವಧಿಯಲ್ಲಿ ರೆಮೋನಾ ಪಿರೇರಾ ಭರತನಾಟ್ಯದ ವಿವಿಧ ಪ್ರಕಾರಗಳ ಪ್ರದರ್ಶನ ಮಾಡಿ ತೋರಿಸಿದ್ದಾರೆ. ಅದಕ್ಕೆ ತಕ್ಕಂತೆ ರೆಕಾರ್ಡೆಡ್ ಹಾಡುಗಳನ್ನು ಬಳಕೆ ಮಾಡಲಾಗಿತ್ತು.

Leave a Reply

Your email address will not be published. Required fields are marked *