ಕಾಸರಗೋಡು (ಜು.29) : ಅಪ್ರಾಪ್ತ ಬಾಲಕಿ ಹೆರಿಗೆಯಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯಾದ ಸ್ವಂತ ತಂದೆಯನ್ನು ಹೊಸದುರ್ಗ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: 🔶ಬೆಳ್ತಂಗಡಿ: ತಾಜುಲ್ ಉಲಮಾ ರಿಲೀಫ್ ಟ್ರಸ್ಟ್ (ಟಿಆರ್‌ಎಮ್) ಮದ್ದಡ್ಕ ಮಹಾಸಭೆ
ಹದಿನೈದರ ಹರೆಯದ ಹತ್ತನೇ ತರಗತಿ ವಿದ್ಯಾರ್ಥಿನಿಯ ತಂದೆಯೇ ಪ್ರಕರಣದ ಆರೋಪಿಯಾಗಿದ್ದು, ಕೃತ್ಯ ಬೆಳಕಿಗೆ ಬರುತ್ತಿದ್ದಂತೆ ಬೆಚ್ಚಿ ಬೀಳುವಂತೆ ಮಾಡಿದೆ. ಬಂಧಿತ ಆರೋಪಿ ಕರ್ನಾಟಕ ಮೂಲದವನಾಗಿದ್ದು, ಕೂಲಿ ಕೆಲಸ ಮಾಡುತ್ತಾ ಕಾಸರಗೋಡು ಜಿಲ್ಲೆಯ ಕಾಞಂಗಾಡಿನ ಬಾಡಿಗೆ ಕ್ವಾಟರ್ಸಿನಲ್ಲಿ ವಾಸವಾಗಿದ್ದನು. ತನ್ನ ಪತ್ನಿ ಹಾಗೂ ಐವರು ಮಕ್ಕಳ ಜತೆ ಈತ ವಾಸಿಸುತ್ತಿದ್ದನು.

15ರ ಬಾಲಕಿ ಲೈಂಗಿಕ ದೌರ್ಜನ್ಯಕ್ಕೊಳಗಾದ ಘಟನೆ ಮತ್ತು ಗರ್ಭಿಣಿಯಾದುದನ್ನು ಶಾಲಾ ಪ್ರತಿನಿಧಿಗಳಾಗಲೀ, ಹೆತ್ತ ತಾಯಿಯಾಗಲೀ ಅರಿತಿರಲಿಲ್ಲ. ಕೆಲ ದಿನಗಳ ಹಿಂದೆ ಹುಡುಗಿ ಮನೆಯಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದಾಗ ರಕ್ತಸ್ರಾವ ಉಂಟಾಗಿತ್ತು. ಇದರಂತೆ ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆ ಅಧಿಕಾರಿಗಳು ನೀಡಿದ ಮಾಹಿತಿಯಂತೆ ಪೋಲೀಸರು ಪೋಕ್ಸೋ ಪ್ರಕರಣ ದಾಖಲಿಸಿ, ಮಗುವಿನ ಡಿ.ಎನ್.ಎ ಪರೀಕ್ಷೆ ನಡೆಸಲಾಗಿತ್ತು. ಬಾಲಕಿಯನ್ನು ವಿಚಾರಣೆ ನಡೆಸಿದ್ದರೂ ಆಕೆ ಪಿತೃತ್ವ ಯಾರದ್ದೆಂಬ ಸುಳಿವು ನೀಡಿರಲಿಲ್ಲ.

ಈ ನಡುವೆ ಶಂಕಿತರ ನೆಪದಲ್ಲಿ ತಂದೆಯ ಡಿಎನ್ಎ ಪರೀಕ್ಷೆ ನಡೆಸಲು ಪೋಲೀಸರು ಮುಂದಾದಾಗ ಪ್ರಕರಣ ಬಯಲಿಗೆ ಬಂದಿದೆ. ಬಂಧಿತ ಆರೋಪಿಯನ್ನು ಕೂಡಾ ಡಿ.ಎನ್.ಎ ಪರೀಕ್ಷೆಗೆ ಒಳಪಡಿಸಲಾಗುವುದೆಂದು ಹೊಸದುರ್ಗ ಪೋಲೀಸರು ತಿಳಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
