ಬೆಳ್ತಂಗಡಿ (ಜು.30): ಕಳೆದ ವರ್ಷ ಜಿಲ್ಲೆಯಾದ್ಯಂತ ಸುರಿದ ಭಾರಿ ಮಳೆಗೆ ಬೆಳ್ತಂಗಡಿ ತಾಲೂಕಿನ ಮಾಲಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸೋಣಂದೂರು ಗ್ರಾಮದ ಮೊದಲೆ ಸಬರಬೈಲು ಪಡಂಗಡಿ ಸಂಪರ್ಕ ಸೇತುವೆ ಮುರಿದು ಬಿದ್ದು ಸಂಪರ್ಕ ಕಡಿತಗೊಂಡಿದ್ದು. ಈ ಸೇತುವೆಯು ಇಂದಿನವರೆಗೂ ರಾಜಕೀಯ ಪೈಪೋಟಿಯಿಂದಾಗಿ ದುರಸ್ಥಿ ಆಗದೆ ಉಳಿದಿರುತ್ತದೆ. ಕೂಡಲೇ ದುರಸ್ಥಿ ಕಾಮಗಾರಿ ಆರಂಭಿಸಿ ಜನರ ಸಮಸ್ಯೆಯನ್ನು ಪರಿಹರಿಸಬೇಕು. ಇಲ್ಲವಾದಲ್ಲಿ ಊರಿನ ನಾಗರಿಕರನ್ನು ಸೇರಿಸಿಕೊಂಡು ಬೃಹತ್ ಹೋರಾಟ ನಡೆಸಲಾಗುವುದು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ವೇಣೂರು ಬ್ಲಾಕ್ ಅಧ್ಯಕ್ಷರಾದ ಅಶ್ರಫ್ ಬದ್ಯಾರ್ ಪತ್ರಿಕಾ ಹೇಳಿಕೆ ನೀಡಿ ಎಚ್ಚರಿಸಿದ್ದಾರೆ.

ಇದನ್ನೂ ಓದಿ: 🟢ಸೌತಡ್ಕ: ಸೇವಾಧಾಮದಲ್ಲಿ ನಿಯೋ ಮೋಷನ್ ವಿಥ್ ಕಾರ್ಟ್ ನ ವಿತರಣೆ ಮತ್ತು
ಈ ರಸ್ತೆಯು ಜನಸಾಮಾನ್ಯರಿಗೆ ಅತ್ಯಂತ ಅವಶ್ಯಕವಾಗಿದ್ದು, ಹಲವು ಊರುಗಳಿಗೆ ಹೋಗುವ ರಸ್ತೆಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಇಲ್ಲಿ ದಿನನಿತ್ಯ ನೂರಾರು ವಿದ್ಯಾರ್ಥಿಗಳು, ವೃದ್ದರು, ಮಹಿಳೆಯರು ಹಾಗೂ ಕೂಲಿ ಕಾರ್ಮಿಕರು ಸಂಚರಿಸುತ್ತಿದ್ದು ಇವರು ಕಳೆದ ವರ್ಷಗಳಿಂದ ರಸ್ತೆಯಿಲ್ಲದೆ ಪಡಂಗಡಿ ಹಾಗೂ ಮದ್ದಡ್ಕ ಪ್ರದೇಶಕ್ಕೆ ನಡೆದುಕೊಂಡು ಹೋಗುತ್ತಿದ್ದು ನಿತ್ಯ ತೊಂದರೆಯನ್ನು ಅನುಭವಿಸುತ್ತಿದ್ದಾರೆ.

ಈ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸ್ಥಳೀಯ ದಾನಿಯೊಬ್ಬರು ಕಳೆದ ಐದು ವರ್ಷದ ಹಿಂದೆ ಸ್ವಯಂ ಪ್ರೇರಿತವಾಗಿ ಪಂಚಾಯತ್ ಗೆ ಜಾಗ ದಾನ ಮಾಡಿ ರಸ್ತೆ ನಿರ್ಮಾಣ ಮಾಡಲು ನೆರವನ್ನು ನೀಡಿರುತ್ತಾರೆ. ಆದರೆ ಸ್ಥಳೀಯ ನಿವಾಸಿಗಳ ಆರೋಪದಂತೆ ರಾಜಕೀಯ ಪಕ್ಷಗಳೆರಡರ ರಾಜಕೀಯ ಕೆಸರಾಚಟದಿಂದ ರಸ್ತೆ ಹಾಗೂ ಸೇತುವೆ ದುರಸ್ತಿ ಬಾಕಿಯಾಗಿರುತ್ತದೆ. ರಾಜ್ಯ ಸರ್ಕಾರ ಈಗಾಗಲೇ ಅನುದಾನ ಬಿಡುಗಡೆ ಮಾಡಿದರೂ ಬೆಳ್ತಂಗಡಿಯ ರಾಜಕಾರಣಿಗಳು ಬಿಡುಗಡೆಯಾದ ಅನುದಾನದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ರಾಜಕೀಯ ಲಾಭ ಪಡೆಯುವ ಉದ್ದೇಶದಿಂದ ರಸ್ತೆ ದುರಸ್ತಿ ಮಾಡದೆ ಇರುವುದರಿಂದ ಸ್ಥಳೀಯ ನಿವಾಸಿಗಳು ಅಸಾಹಯಕರಾಗಿ ಬಲಿಪಶುಗಳಾಗಿರುತ್ತಾರೆ. ಕಳೆದ ಹಲವು ವರ್ಷದಿಂದ ಜನಪ್ರತಿನಿಧಿಗಳು, ಅಧಿಕಾರಿಗಳು ಭೇಟಿ ನೀಡುತ್ತಾ ಸ್ಥಳೀಯರನ್ನು ಮರುಲು ಮಾಡುತ್ತಾರೆಯೆ ಹೊರತು ಯಾವುದೇ ಅಭಿವೃದ್ಧಿ ಕೆಲಸ ಮಾಡಿರುವುದಿಲ್ಲ.

ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ರಸ್ತೆ ದುರಸ್ಥಿ ಮಾಡಬೇಕು. ಜನ ಪ್ರತಿನಿಧಿಗಳು ಪೈಪೋಟಿ ಬಿಟ್ಟು ಅನುವು ಮಾಡಿಕೊಡಬೇಕೆಂದು ಆಗ್ರಹಿಸುತ್ತಿದ್ದೇವೆ. ತಕ್ಷಣವೇ ಸೇತುವೆ, ರಸ್ತೆ ದುರಸ್ಥಿ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಿದ್ದೇವೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
