ಉಡುಪಿ (ಆ.13): ಉಡುಪಿಯ ಪುತ್ತೂರಿನಲ್ಲಿ ತಡರಾತ್ರಿ ಭೀಕರ ಕೊಲೆಯೊಂದು ನಡೆದಿದೆ. ವಿನಯ್ ದೇವಾಡಿಗ (35) ಎಂಬ ಯುವಕನನ್ನು ಮೂವರು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದಿದ್ದಾರೆ ಎಂದು ವರದಿಯಾಗಿದೆ. ರಾತ್ರಿ II ಗಂಟೆ ಸುಮಾರಿಗೆ, ಮೂವರು ದುಷ್ಕರ್ಮಿಗಳು ಹೆಂಡತಿ ಮತ್ತು ಮಗುವಿನ ಜೊತೆ ಮಲಗಿದ್ದ ವಿನಯ್ ಮನೆಗೆ ನುಗ್ಗಿ, ಮನೆಯವರ ಎದುರಿಗೇ ಕೃತ್ಯವೆಸಗಿದ್ದಾರೆ.

ಆರಂಭದಲ್ಲಿ ಬಾಗಿಲು ತಟ್ಟಿ ವಿನಯ್ ಇದ್ದಾನೆಯೇ ಎಂದು ವಿಚಾರಿಸಿದ ದುಷ್ಕರ್ಮಿಗಳನ್ನು, ಸ್ನೇಹಿತರೆಂದು ಭಾವಿಸಿ ಮನೆಯವರು ಒಳಗೆ ಬಿಟ್ಟಿದ್ದಾರೆ. ಆದರೆ, ಒಳಗೆ ಬಂದ ತಕ್ಷಣ ದುಷ್ಕರ್ಮಿಗಳು ವಿನಯ್ ಕೊಠಡಿಗೆ ನುಗ್ಗಿ, ತಲವಾರ್‌ನಿಂದ ಇರಿದು ಕೊಚ್ಚಿ ಅವನನ್ನು ಕೊಲೆಗೈದಿದ್ದಾರೆ.

ವಿನಯ್, ಆರೋಪಿ ಆಕ್ಷೇಂದ್ರನಿಗೆ, ಜೀವನ್ ಎಂಬಾತನು ಬೈದಿರುವ ಆಡಿಯೋವನ್ನು ಬೇರೆಯವರಿಗೆ ಶೇರ್ ಮಾಡಿ ವೈರಲ್
ಮಾಡಿದ್ದ ಎಂಬ ಕಾರಣಕ್ಕೆ ಈ ಕೊಲೆ ನಡೆದಿದೆ ಎನ್ನಲಾಗಿದೆ.
ಘಟನೆ ವೇಳೆ ವಿನಯ್‌ನ ಪತ್ನಿ ತನ್ನ ಪತಿಯನ್ನು ರಕ್ಷಿಸಲು ದುಷ್ಕರ್ಮಿಗಳೊಂದಿಗೆ ಹೋರಾಡಿದ್ದಾರೆ. ಈ ವೇಳೆ ಆಕೆಗೂ ಗಂಭೀರ ಗಾಯಗಳಾಗಿವೆ. ಘಟನೆಯ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.

