ಉಜಿರೆ:(ಆ.13) ಇತ್ತೀಚೆಗೆ ತೀವ್ರ ಹೊಟ್ಟೆ ನೋವಿನಿಂದ ಕಳೆದ 6 ತಿಂಗಳಿನಿಂದ ಬಳಲುತ್ತಿದ್ದ 45 ವರ್ಷ ಪ್ರಾಯದ ಮಹಿಳೆಯೊಬ್ಬರು ಉಜಿರೆಯ ಎಸ್.ಡಿ.ಎಂ ಆಸ್ಪತ್ರೆಗೆ ಬಂದು ತಪಾಸಣೆ ಮಾಡಿಸಿಕೊಂಡಾಗ ಈಕೆ ಅಸಹಜ ಗರ್ಭಾಶಯದ ರಕ್ತಸ್ರಾವದಿಂದ ಬಳಲುತ್ತಿದ್ದು, ಆಕೆಯ ಹೊಟ್ಟೆಯಲ್ಲಿ 7 ಸೆಂ.ಮೀ ಗಾತ್ರದ ಗೆಡ್ಡೆ ಸೇರಿದಂತೆ ಒಟ್ಟು 4 ಗೆಡ್ಡೆಯೊಂದಿಗೆ ಹರ್ನಿಯಾ (ಹೊಕ್ಕಳಿನ ಅಂಡವಾಯು) ಸಮಸ್ಯೆ ಕೂಡ ಇರುವುದು ಕಂಡು ಬಂದಿತ್ತು.

ಇಲ್ಲಿನ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ| ಸ್ವರ್ಣಲತಾ, ಶಸ್ತ್ರಚಿಕಿತ್ಸಾ ತಜ್ಞರಾದ ಡಾ| ಬಾಲಾಜಿ ಪ್ರಭಾಕರನ್ ಮತ್ತು ಅರೆವಳಿಕೆ ತಜ್ಞರಾದ ಡಾ| ಸುಪ್ರೀತ್ ಆರ್. ಶೆಟ್ಟಿ ಇವರ ತಂಡ ಶಸ್ತ್ರಚಿಕಿತ್ಸೆ ನಡೆಸಿ ಮಹಿಳೆಯ ಹೊಟ್ಟೆಯಿಂದ ದೊಡ್ಡ ಗಾತ್ರದ ಗೆಡ್ಡೆ ಸೇರಿದಂತೆ ಎಲ್ಲಾ ಗೆಡ್ಡೆಗಳನ್ನು ಯಶಸ್ವಿಯಾಗಿ ಹೊರತೆಗೆಯಲಾಗಿದೆ.
ಇದೇ ಸಮಯದಲ್ಲಿ ಜಾಲರಿಯೊಂದಿಗೆ ಹರ್ನಿಯಾ ದುರಸ್ತಿ ಶಸ್ತ್ರಚಿಕಿತ್ಸೆಯನ್ನು ಕೂಡ ಮಾಡಲಾಗಿದ್ದು, ಮಹಿಳೆಯ ಆರೋಗ್ಯದಲ್ಲಿ ಚೇತರಿಕೆಯಾಗಿದೆ ಎಂದು ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ತಿಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಅತೀ ಹೆಚ್ಚು ಗರ್ಭಕೋಶದ ಗೆಡ್ಡೆಯ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದು, ಇದುವರೆಗೆ ಉಜಿರೆಯ ಎಸ್.ಡಿ.ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಗರ್ಭಕೋಶದ ಗೆಡ್ಡೆಯ ಸಮಸ್ಯೆಯಿಂದ ಬಳಲುತ್ತಿರುವ ಬಹಳಷ್ಟು ಮಂದಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ಇಲ್ಲಿನ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


