ಗುರುವಾಯನಕೆರೆ: ಮಕ್ಕಳಲ್ಲಿ ಸಂಸ್ಕಾರದ ಬೀಜ ಬಿತ್ತಿದರೆ ಭವಿಷ್ಯತ್ತಿನಲ್ಲಿ ಉತ್ತಮ ಫಲವನ್ನು ನೀಡುತ್ತದೆ ಎಂದು ಬ್ಯಾಂಕ್ ಆಫ್ ಬರೋಡ ನೂಜಿಬಾಳ್ತಿಲ ಶಾಖೆಯ ಪ್ರಬಂಧಕರಾದ ಶಿವಪ್ರಸಾದ್ ಸುರ್ಯ ಹೇಳಿದರು.

ಅವರು ಗುರುವಾಯನಕೆರೆ ಶ್ರೀ ವೇದವ್ಯಾಸ ಶಿಶುಮಂದಿರದ ವತಿಯಿಂದ ಹವ್ಯಕ ಭವನದಲ್ಲಿ ನಡೆದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಾ, ತಾಯಿಗೆ ವಿಶ್ವರೂಪವನ್ನು ತೋರಿಸಿದ ಮೊದಲ ಮಗನೆಂದರೆ ಶ್ರೀ ಕೃಷ್ಣ. ಕೃಷ್ಣನನ್ನು ತಾಯಿ ಯಶೋಧೆ ಬೆಳೆಸಿದ ರೀತಿ ಇಂದಿನ ಕಾಲದ ತಾಯಂದಿರಿಗೆ ಮಾದರಿಯಾಗಿದೆ. ಭಾರತೀಯ ಸಂಸ್ಕೃತಿ ಮತ್ತು ಆಚರಣೆಗಳ ಮಹತ್ವವನ್ನು ಸಣ್ಣ ಮಕ್ಕಳಿಗೆ ತಿಳಿ ಹೇಳಿದರೆ ಉನ್ನತ ವ್ಯಕ್ತಿತ್ವವನ್ನು ಹೊಂದಲು ಸಾಧ್ಯವಿದೆ ಎಂದರು.


ಶ್ರೀ ವೇದವ್ಯಾಸ ಶಿಶುಮಂದಿರದ ಅಧ್ಯಕ್ಷೆ ಶ್ರೀಮತಿ ಹಿಂದುಮತಿ ಅಧ್ಯಕ್ಷತೆ ವಹಿಸಿದ್ದರು. ಬೆಳ್ತಂಗಡಿ ಲಯನ್ಸ್ ಕ್ಲಬ್ ನ ನಿಕಟ ಪೂರ್ವ ಅಧ್ಯಕ್ಷ ಲಯನ್ ದೇವದಾಸ್ ಶೆಟ್ಟಿ, ಮಾತೃ ಮಂಡಳಿಯ ಅಧ್ಯಕ್ಷೆ ಶ್ರೀಮತಿ ಮಮಿತಾ ಸುಧೀರ್ ಉಪಸ್ಥಿತರಿದ್ದರು.
ಶಿಶುಮಂದಿರದ ಮಾತಾಜಿಗಳಾದ ಶ್ರೀಮತಿ ಅಶ್ವಿನಿ ಮತ್ತು ಶ್ರೀಮತಿ ರಮ್ಯಾ ವಿವಿಧ ಆಟೋಟ ಸ್ಪರ್ಧೆಗಳನ್ನು ನಡೆಸಿಕೊಟ್ಟರು.
ಆಡಳಿತ ಮಂಡಳಿಯ ಸದಸ್ಯರಾದ ಶ್ರೀಮತಿ ರಚನಾ ಪಿ ಸ್ವಾಗತಿಸಿ, ಕೋಶಾಧಿಕಾರಿ ಶ್ರೀಮತಿ ಪ್ರಿಯದರ್ಶಿನಿ ವಂದಿಸಿದರು. ಉಪಾಧ್ಯಕ್ಷೆ ಶ್ರೀಮತಿ ಸುಧಾಮಣಿ ನಿರೂಪಿಸಿದರು.

